ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ಮೋಕೆದ ಕಲಾವಿದೆರ್ ಮತ್ತು ತುಳು ನಾಟಕೋತ್ಸವ ಸಮಿತಿ ವತಿಯಿಂದ ಇದೇ 16ರಿಂದ 23ರತನಕ ಸಂಜೆ ಬಂಟ್ವಾಳ ಪೇಟೆ ವಿಎನ್ಆರ್ ಗೋಲ್ಡ್ ಸಂಸ್ಥೆ ಹಿಂಬದಿ ನಿರ್ಮಿಸಿರುವ ವಿಶಾಲವಾದ ‘ರಾಣಿ ಅಬ್ಬಕ್ಕ ವೇದಿಕೆ’ಯಲ್ಲಿ ಎಂಟು ದಿನಗಳ ಉಚಿತ ‘ತುಳು ನಾಟಕೋತ್ಸವ’ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಅವರು ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ವೇದಿಕೆ ಪ್ರವೇಶ ದ್ವಾರಗಳಿಗೆ ನಾಟಕರಂಗದಲ್ಲಿ ಸೇವೆ ಸಲ್ಲಿಸಿ ಅಸ್ತಂಗತರಾದ ಶಾಂತಾರಾಮ ಕಲ್ಲಡ್ಕ ಮತ್ತು ಇತ್ತೀಚೆಗೆ ಮಹಾರಾಷ್ಟ್ರದ ಥಾಣೆಯಲ್ಲಿ ವಸತಿಗೃಹ ಕುಸಿತ ದುರಂತದಲ್ಲಿ ಸಾವನ್ನಪ್ಪಿದ ಹಿರಿಯ ನಾಟಕಗಾರ ಸುಬ್ರಾಯ ಭಟ್ ಹೆಸರು ಇಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಸಂಸದ ನಳಿನ್ ಕುಮಾರ್ ಕಟೀಲು ಮತ್ತಿತರ ಗಣ್ಯರು ಭಾಗವಹಿಸುವರು.

ಪ್ರೇಕ್ಷಕರಿಗೆ ಉಚಿತ ಪ್ರವೇಶಕ್ಕೆ ಅವಕಾಶ ನೀಡಲಾಗಿದ್ದು, ನಾಟಕರಂಗದ ಕಲಾವಿದರಿಗೆ ಪ್ರೋತಾಹ ನೀಡುವ ನಿಟ್ಟಿನಲ್ಲಿ ಹಿರಿಯ ಕಲಾವಿದರನ್ನು ಗೌರವಿಸಲಾಗುತ್ತದೆ. ಆರಂಭದಲ್ಲಿ ಬಂಟ್ವಾಳದ ಕೆಳಗಿನ ಪೇಟೆಯಿಂದ ಸಭಾಂಗಣ ತನಕ ‘ತುಳು ಜಾನಪದ ದಿಬ್ಬಣ’ ನಡೆಯಲಿದೆ. ಕೊನೆಯ ದಿನ ‘ಬೃಹತ್ ಆರೋಗ್ಯ ಮೇಳ’ ಆಯೋಜಿಸಲಾಗಿದ್ದು, ಉಚಿತ ಊಟೋಪಚಾರ ವ್ಯವಸ್ಥೆ ಮಾಡಲಾಗಿದೆ ಎಂದರು.
‘ಪರತ್ತೆಟ್ ಪೊಸತ್ತುಂಡು’, ‘ನಮ ತೆರಿಯೊನುಗ’, ‘ಮೂಲು ಪೂರಾ ನಾಟಕ’, ‘ಆರೇ ಬರೆಯಿನಾ’, ‘ಕಂಬುಲ’, ‘ದೇವೆರ್ ತೂಪೆರ್’, ‘ಮಾತೆರ್ಲಾ ಇಂಚಂಡ ಎಂಚಾ’, ‘ನಂಕ್ ಮಾತೆರ್ಲಾ ಬೋಡು’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಗೌರವಾಧ್ಯಕ್ಷರಾದ ಸುದರ್ಶನ ಜೈನ್, ನಾಗೇಂದ್ರ ವಿ.ಬಾಳಿಗಾ, ಸಂಚಾಲಕ ಮೋಹನದಾಸ ಕೊಟ್ಟಾರಿ, ಪದಾಧಿಕಾರಿಗಳಾದ ಗಣೇಶ್ ಶೆಣೈ, ಶಿವಪ್ರಸಾದ್ ಕೊಟ್ಟಾರಿ ಬಂಟ್ವಾಳ, ಶ್ರೀನಿವಾಸ ಭಂಡಾರಿ, ಆದಿರಾಜ ಜೈನ್, ಲೋಕೇಶ್ ಸುವರ್ಣ, ಸದಾಶಿವ ಪುತ್ರನ್ ಮತ್ತಿತರರು ಉಪಸ್ಥಿತರಿದ್ದ್ದರು.