ಬಂಟ್ವಾಳ: ತೆಂಗು ಅಭಿವೃಧ್ದಿ ಮಂಡಳಿಯ ಅನುದಾನದಲ್ಲಿ ದ.ಕ.ಜಿಲ್ಲೆಗೆ ತೆಂಗು ಪಾರ್ಕ ಮಾಡುವ ಯೋಜನೆ ಇದ್ದು, ಅದನ್ನು ಬಂಟ್ವಾಳಕ್ಕೆ ತರುವ ಯೋಚನೆಯನ್ನು ಮಾಡುತ್ತಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಅವರು ತಾಲೂಕು ಪಂಚಾಯತ್ನ ಎಸ್.ಜಿ.ಆರ್.ಎಸ್ ವೈ. ಸಭಾಂಗಣದಲ್ಲಿ ನಡೆದ ಬಂಟ್ವಾಳ ತಾಲೂಕು ನೀರಾ ಮೂರ್ತೆದಾರರ ಮತ್ತು ತೆಂಗು ಉತ್ಪಾದಕರ ಫೆಡರೇಶನ್ (ರಿ) ಇದರ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದರು. ಸುಮಾರು 100 ಎಕರೆ ಜಮೀನಿನಲ್ಲಿ ತೆಂಗು ಪಾರ್ಕ ಮಾಡುವ ಯೋಚನೆ ಇದ್ದು ಇದರಲ್ಲಿ ತೆಂಗು ಸಂಸ್ಕರಣೆಯ ಬೇರೆ ಬೇರೆ ಘಟಕಗಳು ಬರುತ್ತವೆ. ಇಲ್ಲಿನ ರೈತರ ಉತ್ಸಾಹವನ್ನು ನೋಡಿ ಬಂಟ್ವಾಳಕ್ಕೆ ಯೋಜನೆಯನ್ನು ತರುವ ಹೆಚ್ಚು ಆಶಕ್ತಿ ತೋರಿದ್ದೇನೆ ಎಂದರು. ತೆಂಗು ಉತ್ಪನ್ನಗಳಿಗೆ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬಾರೀ ಮಾರುಕಟ್ಟೆಯಿರುವುದರಿಂದ ಮುಂದಿನ ದಿನಗಳಲ್ಲಿ ಲಾಭದಾಯಕ ಕೃಷಿಯಾಗಿ ರೈತನ ಬದುಕನ್ನು ಬದಲಿಸುತ್ತದೆ ಎಂದರು. ಕೃಷಿ ಸಂಸ್ಕ್ರತಿ ಮಾಯವಾಗಿ ಕೇವಲ ತೋಟಗಾರಿಕಾ ಸಂಸ್ಕ್ರತಿ ಮಾತ್ರ ಉಳಿದಿದೆ, ಆದರೂ ದ.ಕ.ಜಿಲ್ಲೆಯ ರೈತರು ಸ್ವಾಭಿಮಾನಿ, ಸ್ವವಲಂಬಿ ಮತ್ತು ಪ್ರಯೋಗಶೀಲತೆಯಿಂದ ಬದುಕುತ್ತಿದ್ದಾರೆ. ಹಾಗಾಗಿ ಅಡಿಕೆ ಕೃಷಿಕರು ತೆಂಗು ಬೆಳೆಯನ್ನು ಪ್ರಯೋಗಶೀಲತೆಯಿಂದ ಮಾಡಿದರೆ ಉತ್ತಮ ಎಂದರು.
ಪ್ರಗತಿ ಪರ ಕೃಷಿಕ ರಾಜೇಶ್ ನಾಯಕ್ ಉಳಿಪ್ಪಾಡಿ ಗುತ್ತು ಮಾತನಾಡಿ ನೀರಾ ಪ್ರಾಜೆಕ್ಟ್ ರೈತನಿಗೆ ಆದಾಯದ ಮೂಲ, ಆದರೆ ಕಾನೂನಿನ ತೊಡಕಿನಿಂದಾಗಿ ಇನ್ನೂ ಕೂಡಾ ಪೂರ್ಣ ಪ್ರಮಾಣದ ಅನುಮತಿ ಸಿಗದೇ ಇರುವುದರಿಂದ ರೈತರಿಗೆ ಅನ್ಯಾಯವಾಗಿದೆ ಎಂದರು. ರೈತರು ಒಗ್ಗಟ್ಟಾಗಿ ಇಚ್ಚಾಶಕ್ತಿಯಿಂದ ಮತ್ತು ನಂಬಿಕೆಯಿಂದ ಸಂಘದ ಮೂಲಕ ಹೋರಾಟ ಮಾಡಿದರೆ ನ್ಯಾಯಯುತವಾಗಿ ಸಮ್ಮತಿ ಸಿಗಬಹುದು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ.ವಹಿಸಿದ್ದರು. ವೇದಿಕೆಯಲ್ಲಿ ಸಹಕಾರಿ ಭಾರತಿಯ ಅಧ್ಯಕ್ಷ ಜಯಶಂಕರ ಬಾಸ್ರಿತ್ತಾಯ, ಬಿ.ಜೆ.ಪಿ.ಮಂಡಲ ಸಮಿತಿ ಅಧ್ಯಕ್ಷ ಜಿ.ಆನಂದ, ಶಂಭೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪುರುಷೋತ್ತಮ ಸಾಲಿಯಾನ್, ಎ.ಪಿ.ಎಂ.ಸಿ ಅಧ್ಯಕ್ಷ ಸಾಂತಪ್ಪ ಪೂಜಾರಿ ಜಿ.ಪಂ ಸದಸ್ಯರಾದ ಸಂತೋಷ್ ಕುಮಾರ್ ರೈ ಬೋಳಿಯಾರ್, ನಳಿನಿ ಬಿ.ಶೆಟ್ಟಿ , ನರಿಕೊಂಬು ಗ್ರಾ.ಪಂ.ಅಧ್ಯಕ್ಷ ಯಶೋದರ ಕರ್ಬೇಟ್ಟು, ಉಡುಪಿ ಸಹಾಯಕ ತೋಟಗಾರಿಕಾ ನಿರ್ದೇಶಕ ಸಂಜೀವ ನಾಯ್ಕ, ಬಂಟ್ವಾಳ ತೋಟಗಾರಿಕಾ ಸಹಾಯಕ ನಿರ್ದೇಶಕ ದಿನೇಶ್, ಸಂಘದ ಪ್ರಮುಖರಾದ ಜನಾರ್ಧನ ಕುಲಾಲ್ ಬೊಂಡಾಲ, ಗೋಪಾಲ ಸುವರ್ಣ, ಲೋಹಿತಾಕ್ಷ ಬೆರ್ಕಳ, ಕೃಷ್ಣ ನಾಯ್ಕ ಶಂಭೂರು, ಮನೋಹರ ಶೆಟ್ಟಿ, ರಾಮಚಂದ್ರ ಶೆಟ್ಟಿ ದಂಡೆ, ದಿವಾಕರ ಶಂಭೂರು ಮತ್ತು ಬಾಲಕೃಷ್ಣ ಹೊಳ್ಳ ಉಪಸ್ಥಿತರಿದ್ದರು.