ಮುಂಬಯಿ : ಭಾರತದ 69 ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಬಿ. ಎಸ್ ಕೆ. ಬಿ. ಎಸೋಸಿಯೇಷನ್, ಗೋಕುಲದಲ್ಲಿ .ಆ. 15 ಶನಿವಾರ ಸಂಭ್ರಮದಿಂದ ಆಚರಿಸಲಾಯಿತು. ಪ್ರಾತಃ ಕಾಲ
9.30 ಕ್ಕೆ ಸಂಘದ ಅಧ್ಯಕ್ಷರಾದ ಡಾ ಸುರೇಶ್ ಎಸ್ ರಾವ್ ಅವರು ಧ್ವಜಾರೋಹಣ ಗೈದು, ನೆರೆದವರಿಗೆಲ್ಲಾ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಸಲ್ಲಿಸಿದರು. ಆ ದಿನದ ಸಾಂಸ್ಕೃತಿಕ ಕಾರ್ಯಕ್ರಮವು ಹಿರಿಯ ನಾಗರಿಕರ ಪ್ರತಿಭಾ ಪ್ರದರ್ಶನದೊಂದಿಗೆ ಪ್ರಾರಂಭವಾಯಿತು. ನಂತರ ಮಹಿಳೆಯರಿಂದ , ಶ್ರೀಮತಿ ಶೈಲಿನಿ ರಾವ್ ಅವರ ದಿಗ್ದರ್ಶನದಲ್ಲಿ ಅಂಗುಲಿಮಾಲ ಎಂಬ ಕನ್ನಡ ನಾಟಕ ಉತ್ತಮವಾಗಿ ಪ್ರದರ್ಶನಗೊಂಡಿತು. ಭೋಜನದ ನಂತರ ಯುವ ವಿಭಾಗದವರಿಂದ ಶ್ರೀ ಪ್ರಣವ್ ಉಡುಪ ಅವರ ನಿರ್ದೇಶನದಲ್ಲಿ ಪ್ರಸ್ತುತಗೊಂಡ ‘ಗೋಕುಲ್ ನ್ಯೂಸ್’ ಎಂಬ ಹಾಸ್ಯ ಪ್ರಹಸನ ತುಂಬಿದ ಸಭಾಗೃಹದಲ್ಲಿ ನೆರೆದ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ಗುರುರಾಜ್ ಭಟ್, ಚಂದ್ರಶೇಖರ್ ಭಟ್ ಹಾಗೂ ವಿನೋದಿನಿ ರಾವ್ ಕಾರ್ಯಕ್ರಮಗಳನ್ನು ನಿರೂಪಿಸಿದರು.
ಡಾ ಸುರೇಶ್ ರಾವ್ ಮುಂದಿನ ಐದು ವರ್ಷಗಳಲ್ಲಿ ಗೋಕುಲದ ಅಭಿವೃದ್ಧಿಗಾಗಿ ಕಾರ್ಯಕಾರೀ ಸಮಿತಿಯು ಹಮ್ಮಿಕೊಂಡ ವಿದ್ಯಾ ನಿಧಿ, ಗೋಕುಲದ ಪುನರ್ ನಿರ್ಮಾಣ, ಆಶ್ರಯದ ವಿಸ್ತಾರ ಮುಂತಾದ ಹಲವಾರು ಯೋಜನೆಗಳು – ‘ಗೋಕುಲ್ ಪ್ರಾಜೆಕ್ಟ್ಸ್ ವಿಷನ್ 2020’ ಬಗ್ಗೆ ವಿವರಿಸಿದರು. ಬೆಳಿಗ್ಗೆ 10 ಗಂಟೆಯಿಂದ ಡಾ ರತ್ನಾಕರ್ ಶೆಟ್ಟಿ ಹಾಗೂ ಡಾ ಗೀತಾಂಜಲಿ ಅಮಿನ್ ಅವರ ನೇತೃತ್ವದಲ್ಲಿ ‘ಕುಶಲ ವಾಸು ಶೆಟ್ಟಿ ಬಂಟ್ಸ್ ಹೆಲ್ತ್ ಕೇರ್ ಸರ್ವಿಸಸ್’ ನ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಂಘದ ಹಲವಾರು ಸದಸ್ಯರು ಇದರ ಉಪಯೋಗವನ್ನು ಪಡೆದರು. ಸಂಘದ ಅಧ್ಯಕ್ಷರಾದ ಡಾ ಸುರೇಶ್ ಎಸ್ ರಾವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ನ ನಿವೃತ್ತ ಅಧ್ಯಕ್ಷರಾದ ಶ್ರೀ ಎಂ ನರೇಂದ್ರ, ಹಾಗೂ ಐ.ಡಿ.ಎಫ್.ಸಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀ ಸದಾಶಿವ ಎಸ್ ರಾವ್ ಗೌರವ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯದರ್ಶಿ ಪಿ ಸಿ ಎನ್ ರಾವ್ ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ಆಶಾ ಭಟ್ ಹಾಗೂ ಕುಸುಮ್ ಶ್ರೀನಿವಾಸ್ ಅತಿಥಿಗಳ ಪರಿಚಯ ಪತ್ರವನ್ನು ವಾಚಿಸಿದರು. ಡಾ ಸುರೇಶ್ ರಾವ್ ಹಾಗೂ ಉಪಾಧ್ಯಕ್ಷರಾದ ಶ್ರೀ ವಾಮನ್ ಹೊಳ್ಳ ಅತಿಥಿಗಳನ್ನು ಶಾಲು ಹೊದಿಸಿ ಹೂ ಗುಚ್ಚವನ್ನಿತ್ತು ಗೌರವಿಸಿದರು. ಶ್ರೀ ಬಿ. ಬಾಲಚಂದ್ರ ರಾವ್ ತಮ್ಮ ಮಾತಾ ಪಿತರ ಹೆಸರಲ್ಲಿ ಸ್ಥಾಪಿಸಿದ ‘ಗೋಕುಲ ಕಲಾಶ್ರೀ’ ಪ್ರಶಸ್ತಿಯನ್ನು ಮುಂಬಯಿಯ ಹೆಸರಾಂತ ನಾಟಕಕಾರ, ರಂಗ ನಿರ್ದೇಶಕ, ಜನಪ್ರಿಯ ನಟ, ಶ್ರೀ ಎನ್ ಬಾಲಕೃಷ್ಣ ನಿಡುವಣ್ಣಾಯರವರಿಗೆ ಪ್ರದಾನ ಮಾಡಲಾಯಿತು. ಶ್ರೀ ಬಿ ಬಾಲಚಂದ್ರ ರಾಯರು ಅಭಿನಂದನಾ ಭಾಷಣ ಗೈದರು. ಪ್ರೇಮಾ ರಾವ್ ಸನ್ಮಾನ ಪತ್ರವನ್ನು ವಾಚಿಸಿದ ಬಳಿಕ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅತಿಥಿಗಳು ಶ್ರೀ ಬಾಲಕೃಷ್ಣ ನಿಡುವಣ್ಣಾಯರವರಿಗೆ ಶಾಲು ಹೊದಿಸಿ ಫಲಪುಷ್ಪ, ಸ್ಮರಣಿಕೆ, ‘ ಗೋಕುಲ ಕಲಾಶ್ರೀ ‘ ಪ್ರಶಸ್ತಿ ಪತ್ರವನ್ನಿತ್ತು ಸನ್ಮಾನಿಸಿದರು. ಸನ್ಮಾನಕ್ಕೆ ಉತ್ತರಿಸಿದ ಶ್ರೀ ನಿಡುವಣ್ಣಾಯರು ತನ್ನ ಕಲಾ ಸೇವೆಗೆ ಬಿ. ಎಸ್ ಕೆ. ಬಿ ಎ ಯಿಂದ ದೊರಕಿದ ಪ್ರೀತಿ ಗೌರವಗಳಿಗೆ ಆಭಾರ ವ್ಯಕ್ತ ಪಡಿಸಿದರು. ಗೋಕುಲದ ಮುಂದಿನ ಯೋಜನೆಗಳಿಗಾಗಿ ಆಯೋಜಿಸಲಾಗುವ ಹಲವಾರು ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಮರಣ ಸಂಚಿಕೆಗಳಿಗಾಗಿ ಜಾಹಿರಾತು/ದೇಣಿಗೆಗಳ ಸಂಗ್ರಹಕ್ಕೆ ಮನವಿ ಪತ್ರಗಳನ್ನೊಳಗೊಂಡ ಕೈಪಿಡಿಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು. ಗೌರವ ಅತಿಥಿ ಶ್ರೀ ಎಂ ನರೇಂದ್ರರವರು ಈ ಸಂದರ್ಭದಲ್ಲಿ ಮಾತನಾಡುತ್ತಾ ಅತ್ಯಂತ ದೂರದರ್ಶಿತ್ವ ಹಾಗೂ ದಕ್ಷ ಡಾ ಸುರೇಶ್ ರಾವ್ ಅವರ ಅಧ್ಯಕ್ಷತೆಯಲ್ಲಿ, ಬಿ. ಎಸ್.ಕೆ. ಬಿ. ಎ ಹಮ್ಮಿಕೊಂಡ ಎಲ್ಲಾ ಯೋಜನೆಗಳು ಸದಸ್ಯರೆಲ್ಲರ ಪೂರ್ಣ ಸಹಕಾರದಿಂದ ಶೀಘ್ರವೇ ಕಾರ್ಯಗತಗೊಳ್ಳಲಿ ಎಂದು ಆಶಿಸಿದರು. 2014-15 ರ ಶೈಕ್ಷಣಿಕ ವರ್ಷದಲ್ಲಿ ಎಸ್ ಎಸ್ ಸಿ . ಹಾಗೂ ಎಚ್. ಎಸ್ ಸಿ ಪರೀಕ್ಷೆಗಳಲ್ಲಿ ಉನ್ನತ ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳ ಯಾದಿಯನ್ನು ವಿಜಯಲಕ್ಷ್ಮೀ ಭಟ್ ವಾಚಿಸಿದರು. ವಿಜೇತರಿಗೆ ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಶ್ರೀಮತಿ ಗೀತಾ ಎಲ್ ಭಟ್ ಕಾರ್ಯಕ್ರಮ ನಿರೂಪಿಸಿದರೆ ಚಂದ್ರಶೇಖರ್ ಭಟ್ ಧನ್ಯವಾದ ಸಮರ್ಪಣೆ ಗೈದರು. ಸಾಂಸ್ಕೃತಿಕ ಕಾರ್ಯಕ್ರಮದ ಕೊನೆಯ ಅಂಗವಾಗಿ ಉಡುಪಿಯಿಂದ ಆಗಮಿಸಿದ, ಕರ್ನಾಟಕ ರಾಜ್ಯೋತ್ಸವ, ಭೂಗಿ ವೂಗಿ, ನಾಚ್ ಬಲಿಯೇ ಮುಂತಾದ ಹಲವಾರು ಪ್ರಶಸ್ತಿ ವಿಜೇತ. ‘ಭಾರ್ಗವಿ ನೃತ್ಯ ಅಕಾಡಮಿ’ ಯ ನೃತ್ಯ ತಂಡದವರಿಂದ ಭಾವ-ಯೋಗ-ಗಾನ- ನೃತ್ಯ ವೈಭವ ವಿಶಿಷ್ಟ ಕಾರ್ಯಕ್ರಮ ಪ್ರೇಕ್ಷಕರ ಮನ ರಂಜಿಸಿತು. ರಾಷ್ಟ್ರ ಗೀತೆಯೊಂದಿಗೆ ಅಂದಿನ ಕಾರ್ಯಕ್ರಮ ಮುಕ್ತಾಯವಾಯಿತು.





