ಮಂಗಳೂರು: ಕಳ್ಳರಿಗೆ ಎಲ್ಲಿಂದಾದರೂ ಸರಿ ಕದಿಯಬೇಕು ಎನ್ನುವುದೇ ಗುರಿ ಎನ್ನುವಂತೆ ನಗರದ ಹೊರವಲಯದ ವಾಮಂಜೂರು ಮಂಗಳಜ್ಯೋತಿ ಶಾಲೆ ಬಳಿ ಕೊರಗಜ್ಜ ದೈವಸ್ತಾನದಿಂದ ಕೊರಗಜ್ಜನ ಮೂರ್ತಿಯನ್ನೇ ಅಪಹರಿಸಿದ್ದಾರೆ.
ಬುಧವಾರ ಮುಂಜಾನೆ ದೈವಸ್ಥಾನಕ್ಕೆ ಕೈಮುಗಿಯಲು ಬಂದಾಗಲಷ್ಟೆ ಭಕ್ತರಿಗೆ ಕೊರಗಜ್ಜನ ವಿಗ್ರಹ ಕಳವಾಗಿರುವುದು ಗೊತ್ತಾಯಿತು. ಕಳ್ಳರು ಪ್ರಭಾವಳಿ, ಮತ್ತಿತರ ಆಭರಣಗಳನ್ನು ಕೂಡಾ ದೋಚಿದ್ದಾರೆ. ಕೊರಗಜ್ಜನ ಗುಡಿಯ ಮುಂಬಾಗಿಲನ್ನು ಮುರಿದು ಒಳಪ್ರವೇಶಿಸಿ ಈ ಕೃತ್ಯ ಎಸಗಲಾಗಿದೆ.

ಆದರೆ ಕಳ್ಳರು ದೈವದ ಗಂಟೆ, ಕಾಲು ದೀಪಗಳನ್ನು ಹಾಗೇ ಬಿಟ್ಟುಹೋಗಿದ್ದಾರೆ. ಇದು ಐನಾತಿ ವಿಗ್ರಹಚೋರರ ಕೃತ್ಯವಿರಬೇಕೆಂದು ಶಂಕಿಸಲಾಗಿದೆ. ಕಳವಾಗಿರುವ ಸೊತ್ತುಗಳ ಮೌಲ್ಯ ಸುಮಾರು 2 ಲಕ್ಷಕ್ಕೂ ಅಧಿಕ ಎನ್ನಲಾಗಿದೆ. ಕಂಕನಾಡಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿ ತನಿಖೆ ಆರಂಭಿಸಿದ್ದಾರೆ, ಬೆರಳಚ್ಚು ಪರಿಣತರೂ ಪರಿಶೀಲಿಸಿದ್ದಾರೆ.


