ಉಳ್ಳಾಲ: ರಿಕ್ಷಾ ಚಾಲಕನನ್ನು ಕಲ್ಲಿನಿಂದ ಜಜ್ಜಿ, ಮರದ ಸೋಂಟೆಯಿಂದ ಬಡಿದು ಕೊಲೆಗೈದಿರುವ ಘಟನೆ ನಾಟೆಕಲ್ ಸಮೀಪದ ಮಾಂಗಟ್ಟೆ ಎಂಬಲ್ಲಿ ಶನಿವಾರ ಮುಂಜಾನೆ ಬೆಳಕಿಗೆ ಬಂದಿದೆ.

ಅಳೇಕಲ ನಿವಾಸಿ ಹಿದಾಯತ್ (35) ಕೊಲೆಗೀಡಾದ ರಿಕ್ಷಾ ಚಾಲಕ. ಶುಕ್ರವಾರ ರಾತ್ರಿ 8 ರ ಸುಮಾರಿಗೆ ಪತ್ನಿಗೆ ಕರೆ ಮಾಡಿದವರು ಬಾಡಿಗೆ ಇರುವುದಾಗಿ ತಿಳಿಸಿದ್ದರು. ರಾತ್ರಿ ಅಡುಗೆ ಮಾಡಬೇಡ ಬರುವಾಗ ತರುತ್ತೇನೆ ಅಂದು ಹೇಳಿದ್ದರು. ತಡರಾತ್ರಿವರೆಗೂ ಪತ್ನಿ ಕಾದರೂ ಹಿದಾಯತ್ ಮಾತ್ರ ಬಂದಿರಲಿಲ್ಲ. ಇಂದು ಬೆಳಿಗ್ಗೆ ಕೂಡಾ ಮನೆಗೆ ಬಾರದೇ ಇರುವುದರಿಂದ ಹಿದಾಯತ್ ಸಹೋದರ ಹನೀಫ್ ಅವರಿಗೆ ವಿಷಯ ತಿಳಿಸಿದ್ದರು. ಅವರು ಇನ್ನೋರ್ವ ಸಹೋದರ ಮಹಮ್ಮದ್ ರಫೀಕ್ ಅವರ ಜತೆಗೆ ಸೇರಿ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ.
ಜೀವ ಬೆದರಿಕೆಯಿತ್ತು : ಎರಡು ದಿನಗಳ ಹಿಂದೆ ಹಿದಾಯತ್ಗೆ ಅಳೇಕಲ ನಿವಾಸಿ ಫಾರುಕ್ ಎಂಬಾತ ಜೀವಬೆದರಿಕೆ ಒಡ್ಡಿದ್ದ. ಈ ಕುರಿತು ಉಳ್ಳಾಲ ಠಾಣೆಯಲ್ಲಿ ಹಿದಾಯತ್ ಶುಕ್ರವಾರ ಮಧ್ಯಾಹ್ನ ವೇಳೆ ಮೌಖಿಕವಾಗಿ ದೂರು ಸಲ್ಲಿಸಿದ್ದರು. ಹಿದಾಯತ್ನ ಮೊದಲನೇ ಪತ್ನಿಯ ಸಹೋದರನಾಗಿರುವ ಫಾರುಕ್ ತನ್ನ ಸಹೋದರಿಗೆ ಕಿರುಕುಳ ನೀಡುತ್ತಿದ್ದ ಹಿನ್ನೆಲೆಯಲ್ಲಿ ಬೆದರಿಕೆಯೊಡ್ಡುತ್ತಿದ್ದ. ಜೀವಬೆದರಿಕೆ ಕುರಿತ ಎಫ್ ಐ ಆರ್ ಇಂದು ಮಧ್ಯಾಹ್ನ ವೇಳೆ ಉಳ್ಳಾಲ ಪೊಲೀಸರು ದಾಖಲಿಸಿಕೊಂಡಿದ್ದು, ಆದರೆ ಈ ವೇಳೆ ಹಿದಾಯತ್ ಕೊಲೆಯಾಗಿ ಪತ್ತೆಯಾಗಿದ್ದಾನೆ. ಹಿದಾಯತ್ನ ವಿರುದ್ಧವೂ ಉಳ್ಳಾಲ ಠಾಣೆಯಲ್ಲಿ ಹಲವು ಸಣ್ಣ ಪ್ರಕರಣಗಳು ಇವೆ.
ಸ್ಥಳಕ್ಕೆ ಡಿಸಿಪಿ ಶಾಂತರಾಜು ಕೆ.ಯಸ್.ಪಿ.ಯಸ್, ಎಸಿಪಿ ಕಲ್ಯಾಣ್ ಶೆಟ್ಟಿ ಆರ್.ಆರ್, ಉಳ್ಳಾಲ ಠಾಣಾಧಿಕಾರಿ ಸವಿತೃ ತೇಜ, ಎಸ್.ಐ ಭಾರತಿ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದು, ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಮಾಹಿತಿಯನ್ನು ಸಂಗ್ರಹಿಸಿದೆ.











