ಮೂಡುಬಿದಿರೆ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ದಸರಾ ರಜೆ ಕಡಿತಗೊಳಿಸಿದ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಅಸಮಾಧಾನಕ್ಕೆ ಕಾರಣವಾಗಿದೆ ಎಂದು ಕನರ್ಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ರಾಮಕೃಷ್ಣ ಶಿರೂರು ತಿಳಿಸಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹಂತದ ಶೈಕ್ಷಣಿಕ ಗುಣಮಟ್ಟವನ್ನು ಉತ್ತಮಗೊಳಿಸಲು ಇತ್ತೀಚಿನ ವರ್ಷಗಳಲ್ಲಿ ಇಲಾಖೆ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಾ ಬಂದಿದೆ. ಆದರೆ ಈ ಬಾರಿ ಅಕ್ಟೋಬರ್ 3 ರಿಂದ 29 ರ ವರೆಗೆ ನೀಡಬೇಕಾದ ದಸರಾ ರಜೆಯನ್ನು ಅಕ್ಟೋಬರ್ 11 ರಿಂದ 28 ರ ವರೆಗೆ ಎಂದು ಶೈಕ್ಷಣಿಕ ಮಾರ್ಗದರ್ಶಿ ಮೂಲಕ ಸೂಚಿಸಲಾಗಿದೆ.
ಈ ರಜಾ ದಿನಗಳು ಶಾಲೆಯಲ್ಲಿ ಬೋಧನಾ ಚಟುವಟಿಕೆಯಲ್ಲಿ ತೊಡಗುವ ಶಿಕ್ಷಕ ವರ್ಗಕ್ಕೂ ಅನ್ವಯವಾಗುತ್ತವೆ. ವರ್ಷದಲ್ಲಿ ಕನಿಷ್ಠ 220 ದಿನ ಕರ್ತವ್ಯದ ದಿನಗಳು ಇರಬೇಕೆಂಬ ನಿಯಮವಿದೆ. ಈ ಶೈಕ್ಷಣಿಕ ವರ್ಷದಲ್ಲಿ 241 ಕರ್ತವ್ಯದ ದಿನಗಳೆಂದು ಸೂಚಿಸಿ ಯಾವುದೇ ಕಾರಣವಿಲ್ಲದೇ ದಸರಾ ರಜೆಯಲ್ಲಿ 8 ದಿನ ರಜೆ ಕಡಿತಗೊಳಿಸಲಾಗಿದೆ. ಶಿಕ್ಷಕರ ಸಂಘಟನೆಗಳೊಡನೆ ಚರ್ಚಿಸದೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ರಜಾ ಸೌಲಭ್ಯ ಕಿತ್ತು ಕೊಂಡತಾಗಿದೆ. ಆದರೆ ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಹಿತದೃಷ್ಠಿಯಿಂದ ದಸರಾ ರಜೆಯನ್ನು ಈ ಪ್ರತಿವರ್ಷದಂತೆ ಅಕ್ಟೋಬರ್ 3 ರಿಂದ ಅಕ್ಟೋಬರ್ 29 ರ ವರೆಗೆ ನೀಡಬೇಕೆಂದು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘ ರಾಜ್ಯ ಶಿಕ್ಷಣ ಆಯುಕ್ತರಲ್ಲಿ, ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ ,ನೈರುತ್ಯ ಶಿಕ್ಷಕರ ಕ್ಷೇತ್ರದ ವಿದಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್ ಅವರಲ್ಲಿ ವಿನಂತಿಸಿಕೊಳ್ಳಲಾಗಿದೆ ಎಂದವರು ತಿಳಿಸಿದ್ದಾರೆ..