ಸಾಮಾಜಕ್ಕೆ ಅಮೂಲ್ಯ ಸೇವೆಯೇ ನಮ್ಮ ಧ್ಯೇಯ: ಎಲ್. ವಿ ಅಮೀನ್
ಮುಂಬಯಿ: ಕನ್ನಡ ಸಂಘವು 57 ವರ್ಷದ ಮೊದಲು ತುಳು ಕನ್ನಡಿಗ ವಿದ್ಯಾರ್ಥಿಗಳಿಗೆ ಶಿಕ್ಷಣ ಕೊಡುವ ಮೂಲ ವಿಚಾರದೊಂದಿಗೆ ಸ್ಥಾಪಿಸಿದ್ದು ವಿದ್ಯೆ, ಆರೋಗ್ಯ, ಸಾಂಸ್ಕ್ರತಿಕ ಪ್ರತಿಭಾ ಪುರಸ್ಕಾರ, ಕಾರ್ಯಕ್ರಮಗಳೊಂದಿಗೆ ಸಾಮಾಜಿಕ ಕ್ಷೇತ್ರದಲ್ಲಿ ಅಮೂಲ್ಯ ಸೇವೆಯನ್ನು ಮಾಡುವುದೇ ನಮ್ಮ ಧ್ಯೇಯವಾಗಿದೆಎಂದು ಕನ್ನಡ ಸಂಘ ಸಾಂತಾಕ್ರೂಸ್ನ ಅಧ್ಯಕ್ಷ ಎಲ್.ವಿ ಅಮೀನ್ ಅಭಿಪ್ರಾಯ ಪಟ್ಟರು. ಕಳೆದ ಭಾನುವಾರ ಸಾಂತಕ್ರೂಜ್ನ ಬಿಲ್ಲವ ಭವನದ ಸಭಾಗೃಹದಲ್ಲಿ ಕನ್ನಡ ಸಂಘ ಸಾಂತಾಕ್ರೂಸ್ ಆಯೋಜಿಸಿದ ವಿದ್ಯಾರ್ಥಿಗಳ ಆರ್ಥಿಕ ನೆರವು ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅಮೀನ್ ಮಾತನಾಡಿ ಸಂಘವು ವಿದ್ಯಾರ್ಥಿ ವೇತನಕ್ಕೆ ವಂಚಿತರಾದ ಅರ್ಹ ಪ್ರತಿಭಾವಂತ ವಿದ್ಯಾವಂತರಿಗೆ ಒಂದು ಲಕ್ಷಕ್ಕಿಂತ ಅಧಿಕ ಮೊತ್ತದ ನೆರವು ವಿತರಿಸಿ, ನೆರವು ಪಡೆದ ವಿದ್ಯಾರ್ಥಿಗಳು ಇದನ್ನು ಮರೆಯದೆ ಮುಂದಕ್ಕೆ ಇನ್ನೊಬ್ಬರ ಕಣ್ಣೀರು ಒರೆಸುವ ಕೆಲಸ ನಿಮ್ಮಿಂದ ಆಗಬೇಕೆಂದು ಶುಭ ಹಾರೈಸಿದರು.


ಉದ್ಯಮಿಗಳಾದ ಜಗದೀಶ್ ಪಿ.ಅಮನ್, ರಾಘರಾಮ ಶೆಟ್ಟಿಬೆಳಗಾಂ, ಪ್ರಕಾಶ್ ಸಿ.ಶೆಟ್ಟಿ ಉಪಸ್ಥಿತರಿದ್ದು, ಆರ್ಥಿಕ ನೆರವು ವಿತರಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತ ನ್ಯಾಯವಾದಿ ಸೋಮನಾಥ ಬಿ.ಅಮೀನ್ ಮಾತನಾಡುತ್ತಾ ದಾನಿಗಳನ್ನೇ ಅತಿಥಿ ಮಾಡಿ ಅವರ ಸ್ವ ಹಸ್ತದಿಂದ ನೆರವು ನೀಡುತ್ತಿರುವುದು ತುಂಬಾ ಸಂತೋಷದ ವಿಷಯ. ಇದರ ಸದುಪಯೋಗ ಪಡೆದ ನೀವು ಸಂಸ್ಥೆಯನ್ನು ಮರೆಯದಿರಿ ಎಂದರು. ಮತೋರ್ವ ಅತಿಥಿ ಎನ್.ಎಂ ಸನೀಲ್ ಮಾತನಾಡಿ ವಿದ್ಯಾರ್ಥಿಗಳು ಟಿವಿ ಕಾರ್ಯಕ್ರಮಗಳಿಂದ ದೂರವಿದ್ದು ವಿದ್ಯೆಯಲ್ಲಿ ಪ್ರಗತಿ ತಂದರೆ ಉತ್ತಮ ಪ್ರಜೆಯಾಗಿ ಬಾಳಲು ಸಾಧ್ಯವಿದೆ ಎಂದರು. ನಾವು ಕಲಿಯುವಾಗ ದಾನಿಗಳು ಇರಲಿಲ್ಲಿ; ನೆರವು ನೀಡುವವವರು ಇರಲಿಲ್ಲ ಸ್ವತಃ ದುಡಿದು ರಾತ್ರಿ ಶಾಲೆಯಲ್ಲಿ ಕಲಿತವರು. ಕನ್ನಡ ಸಂಘವು ವಿದ್ಯೆಗಾಗಿ ಕೊಡುವ ನೆರವು ನಿಮಗೆ ಶ್ರೀ ರಕ್ಷೆಯಾಗಲೆಂದು ಸಂಘದ ಉಪಾಧ್ಯಕ್ಷನಿತ್ಯಾನಂದ ಡಿ.ಕೋಟ್ಯಾನ್ ಆಶಿಸಿದರು.ಗೌರವ ಕೋಶಾಧಿಕಾರಿ ಸಿಎ| ರಮೇಶ್ ಶೆಟ್ಟಿ ಮಾತನಾಡಿ ವಿದ್ಯಾರ್ಥಿಗಳು 24 ವರ್ಷ ಪ್ರಾಯದ ತನಕ ವಾಟ್ಸ್ಆಫ್, ಇಂಟರ್ನೆಟ್ ಬದಿಗಿಟ್ಟು ಶ್ರದ್ಧೆಯಿಂದ ವಿದ್ಯಾಭ್ಯಾಸದ ಕಡೆಗೆ ಗಮನ ಹರಿಸಿದರೆ ನೀವು ದೊಡ್ಡ ಮನುಷ್ಯನಾಗುವುದರಲ್ಲಿ ಸಂದೇಹವಿಲ್ಲವೆಂದರು. ಸಂಘದ ಜೊತೆ ಕಾರ್ಯದರ್ಶಿ ಚಂದ್ರಹಾಸ್ ಜೆ.ಕೋಟ್ಯಾನ್, ಜೊತೆ ಕೋಶಾಧಿಕಾರಿ ಆರ್.ಪಿ ಹೆಗಡೆ,ಸಲಹಾ ಸಮಿತಿ ಸದಸ್ಯರಾದ ಬಿ.ಡಿ ಸುವರ್ಣ, ಸಾಮಾಜಿಕ ಮತ್ತು ಸಾಂಸ್ಕ್ರತಿಕ ಸಮಿತಿ ಕಾರ್ಯಾದ್ಯಕ್ಷೆ ಶಾರದ ಎಸ್. ಪೂಜಾರಿ, ಸದಸ್ಯರುಗಳಾದ ಶಿವರಾಮ್ ಕೋಟ್ಯಾನ್, ಜಿ.ಆರ್. ಬಂಗೇರ, ಸುಮ ಎಸ್. ಪೂಜಾರಿ, ಪ್ರಸನ್ನ ಶೆಟ್ಟಿ, ಜಯ ಎ.ಕೋಟ್ಯಾನ್, ಲಿಂಗಪ್ಪ ಅಮೀನ್, ಶಾಲಿನಿ ಜಿ. ಶೆಟ್ಟಿ, ಚಂದಯ್ಯ ಪೂಜಾರಿ ಮತ್ತಿತರು ಉಪಸ್ಥಿತರಿದ್ದು, ಸಾಂಸ್ಕ್ರತಿಕ ಸಮಿತಿ ಕಾರ್ಯದರ್ಶಿ ಲಕ್ಷ್ಮಿ ಎನ್. ಕೋಟ್ಯಾನ್ ಪ್ರಾರ್ಥನೆಗೈದರು. ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಬನ್ನಂಜೆ ರವೀಂದ್ರ ಅಮೀನ್ ಸ್ವಾಗತಿಸಿದರು. ಗೌ| ಪ್ರ| ಕಾರ್ಯದರ್ಶಿ ಸುಜಾತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಣ ಸಮಿತಿ ಕಾರ್ಯದರ್ಶಿ ಸುಧಾಕರ ಉಚ್ಚಿಲ್ ವಂದಿಸಿದರು.
