ಮೂಡುಬಿದಿರೆ: ದ.ಕ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಮೂಡುಬಿದಿರೆ ವಲಯ, ಶಿಕ್ಷಕರ ದಿನಾಚರಣಾ ಸಮಿತಿ ವತಿಯಿಂದ ನಡೆದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಕಳೆದ ಸಾಲಿನಲ್ಲಿ ನಿವೃತ್ತ ಶಿಕ್ಷಕರನ್ನು ಹಾಗೂ 2014-15ರಲ್ಲಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಡೆದವರನ್ನು ಸನ್ಮಾನಿಲಸಾಯಿತು. ಮೈಸೂರಿನ ಸೈಂಟ್ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣೇ ಗೌಡ ಮುಖ್ಯ ಭಾಷಣಕಾರರಾಗಿ ಮಾತನಾಡಿ, ಶಿಕ್ಷಕರ ದಿನಾಚರಣೆ ಸಂದರ್ಭ ಶಿಕ್ಷಕ ಆತ್ಮಾವಲೋಕನ ಮಾಡಬೇಕು. ಶಿಕ್ಷಣವನ್ನು ಪಠ್ಯ ಪುಸ್ತಕಕ್ಕೆ ಸೀಮಿತಗೊಳಿಸದೇ, ಮಕ್ಕಳ ಬದುಕಿನ ಅನುಭವಕ್ಕೂ ದಾರಿ ದೀಪವಾಗಬೇಕು.

ಪ್ರಕೃತಿಯಿಂದ ಕಲಿತುಕೊಳ್ಳಬಹುದಾದ ವಿಷಯಗಳ ಕುರಿತು ಮಕ್ಕಳಲ್ಲಿ ಜ್ಞಾನ ವೃದ್ಧಿಸುವಂತೆ ಮಾಡುವ ಗುರುತರ ಜವಾಬ್ದಾರಿ ಶಿಕ್ಷಕರಿಗಿದೆ ಎಂದರು.
ಸಚಿವ ಕೆ.ಅಭಯಚಂದ್ರ ಜೈನ್ ಮಾತನಾಡಿ ಶಿಕ್ಷಕರ ವೃತ್ತಿ ಪವಿತ್ರವಾದದ್ದು. ಅದರ ಪಾವಿತ್ರ್ಯತೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ಶಿಕ್ಷಕರಿಗಿದೆ ಎಂದರು.
ಸಮಾರಂಭದಲ್ಲಿ ತಾಲೂಕು ಪಂಚಾಯತ್ ಅಧ್ಯಕ್ಷೆ ರಜನಿ, ಸದಸ್ಯ ಪ್ರಕಾಶ್ ಪಿ, ಪುರಸಭಾಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ, ಬೆಳುವಾಯಿ ಪಂಚಾಯತ್ ಅಧ್ಯಕ್ಷ ಬೆಳುವಾಯಿ ಭಾಸ್ಕರ ಆಚಾರ್ಯ, ಬಿ.ಆರ್.ಸಿ ಸಮನ್ವಯಾಧಿಕಾರಿ ಸುರೇಖಾ, ಚೌಟರ ಅರಮನೆಯ ಮಿಥುನ್ ಚೌಟ ಉಪಸ್ಥಿತರಿದ್ದರು.
ಸಮಿತಿ ಉಪಾಧ್ಯಕ್ಷರಾಗಿರುವ ತಹಸೀಲ್ದಾರ್ ಮಹಮ್ಮದ್ ಇಸಾಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಗೋವಿಂದ ಮಡಿವಾಳ ಸ್ವಾಗತಿಸಿದರು. ಕೋಶಾಧಿಕಾರಿ ಕೆ. ಶ್ರೀಪತಿ ಭಟ್ ವಂದಿಸಿದರು. ರಾಜಶ್ರೀ ಹಾಗೂ ಶಿವಾನಂದ ಕಾಯ್ಕಿಣಿ ಪ್ರತಿಭಾ ಪುರಸ್ಕೃತರು ಮತ್ತು ಸ್ಪರ್ಧಾ ವಿಜೇತರ ವಿವರ ನೀಡಿದರು. ಪುರುಷೋತ್ತಮ್ ವರದಿ ವಾಚಿಸಿದರು. ನವೀನ್ ಅಂಬೂರಿ ಕಾರ್ಯಕ್ರಮ ನಿರ್ವಹಿಸಿದರು.
ಶಿಕ್ಷಕರ ಪರವಾಗಿ ನಿರಂಜನ ಕುಮಾರ್ ಹಾಗೂ ಟಿ.ಎನ್. ಕೆಂಬಾರೆ ಅವರು ಅನಿಸಿಕೆ ಹಂಚಿಕೊಂಡರು.