ಶ್ರೀನಗರ: ತಾನು ಪಾಕಿಸ್ತಾನಕ್ಕೆ ಬಸ್ ಹಿಡಿದು ಬೇಕಾದರೆ ಹೋಗುತ್ತೇನೆ, ಆದರೆ, ನರೇಂದ್ರ ಮೋದಿಯನ್ನ ಟೀಕಿಸುವುದನ್ನ ಮಾತ್ರ ನಿಲ್ಲಿಸುವುದಿಲ್ಲ ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರ ವಿವಾದಿತ ಹೇಳಿಕೆಗೆ ಒಮರ್ ನೀಡಿದ ಖಾರದ ಪ್ರತಿಕ್ರಿಯೆ ಇದು.
“ಆತ ಇಂಥ ಸೂಚನೆ ನೀಡಿದ್ದಕ್ಕೆ ನನಗೆ ಖುಷಿ ಇದೆ. ಮೋದಿ ಪ್ರಧಾನಿಯಾದರೆ ದೇವರೂ ಕೂಡ ಮೆಚ್ಚುವುದಿಲ್ಲ. ನಾನು ಶ್ರೀನಗರ-ಮುಜಾಫರಬಾದ್ ಬಸ್ ಹತ್ತಿ ಹೋಗುತ್ತೇನೆ…” ಎಂದು ಒಮರ್ ಅಬ್ದುಲ್ಲಾ ಹೇಳಿದ್ದಾರೆ.
“..ಈ ದೇಶದಲ್ಲಿ ಇಷ್ಟರಮಟ್ಟಿಗೆ ಅಸಹಿಷ್ಣುತೆಯ ಪರಿಸ್ಥಿತಿ ಇರುವುದನ್ನ ಹಿಂದೆಂದೂ ನಾನು ನೋಡಿರಲಿಲ್ಲ. ನರೇಂದ್ರ ಮೋದಿಯ ಬಹಳಷ್ಟು ವಿಷಯಗಳಲ್ಲಿ ನನಗೆ ಭಿನ್ನಾಭಿಪ್ರಾಯಗಳಿವೆ. ಆದರೆ, ಮೋದಿಯನ್ನ ವಿರೋಧಿಸಿದಾಕ್ಷಣ ನನ್ನ ಭಾರತೀಯತೆಯೇನೂ ಕಡಿಮೆ ಆಗುವುದಿಲ್ಲ..” ಎಂದು ಜಮ್ಮು-ಕಾಶ್ಮೀರ ಮುಖ್ಯಮಂತ್ರಿಗಳು ಟೀಕಿಸಿದ್ದಾರೆ.
ಇತ್ತೀಚೆಗೆ, ಬಿಜೆಪಿ ಮುಖಂಡ ಗಿರಿರಾಜ್ ಸಿಂಗ್ ಅವರು ಮೋದಿ ವಿರೋಧಿಗಳ ವಿರುದ್ಧ ಹರಿಹಾಯ್ದಿದ್ದರು. ಮೋದಿಯನ್ನ ವಿರೋಧಿಸುವವರನ್ನ ಪಾಕಿಸ್ತಾನಕ್ಕೆ ಕಳುಹಿಸಬೇಕು ಎಂದು ಆಕ್ರೋಶಭರಿತ ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ, ಒಮರ್ ಅಬ್ದುಲ್ಲಾ ಈ ಪ್ರತಿಕ್ರಿಯೆ ನೀಡಿದ್ದಾರೆ.
