ಮಂಗಳೂರು: ಮಹಾನಗರ ಪಾಲಿಕೆ ಆಡಳಿತ ವೈಫಲ್ಯ ಖಂಡಿಸಿ ಮತ್ತು ನಗರದ ಜನತೆಗಾಗುತ್ತಿರುವ ಅನಾನುಕೂಲತೆಗಳನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಮಂಗಳವಾರ ಪಾಲಿಕೆ ಕಚೇರಿ ಎದುರು ಬಿಜೆಪಿ ಪ್ರತಿಭಟನೆ ನಡೆಸಿತು.
ಪಾಲಿಕೆ ವಿಪಕ್ಷ ನಾಯಕ ಸುಧೀರ್ ಶೆಟ್ಟಿ ಕಣ್ಣೂರು ಮಾತನಾಡಿ, ಪಾಲಿಕೆಯಲ್ಲಿ ಅಧಿಕಾರಕ್ಕೇರಿದಾಗ ಮಾಡಿದ ಮೊದಲ ಸಾಧನೆ ಆಸ್ತಿ ತೆರಿಗೆ ಶೇ.15 ರಷ್ಟು ಏರಿಸಿ ಮಂಗಳೂರಿನ ಜನತೆ ಮೋಸ ಮಾಡಿದ್ದು. ನಗರದ ಮಂಗಳಾದೇವಿ, ಜೆಪ್ಪು, ಕುದ್ರೋಳಿ ಮೊದಲಾದ ಪ್ರಮುಖ ರಸ್ತೆಗಳಲ್ಲಿ ಕನಿಷ್ಠ ಗುಂಡಿಮುಚ್ಚುವ ಕಾರ್ಯವೂ ನಡೆದಿಲ್ಲ. ಹಿಂದಿನ ಬಿಜೆಪಿ ಆಡಳಿತದಲ್ಲಿ ಮುಖ್ಯಮಂತ್ರಿ ವಿಶೇಷ ಅನುದಾನದಡಿ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಿದ್ದರೂ ಅದರ ಮುಂದುವರಿದ ಭಾಗವಾಗಿ ಜ್ಯೋತಿ, ಬಂಟ್ಸ್ಹಾಸ್ಟೆಲ್, ಕದ್ರಿ ಮಲ್ಲಿಕಟ್ಟೆ ಮೊದಲಾದೆಡೆ ಪುಟ್ಪಾತ್, ಒಳಚರಂಡಿ ವ್ಯವಸ್ಥೆ ಮಾಡಿಲ್ಲ. ಘನತ್ಯಾಜ್ಯ ವಿಲೇವಾರಿ ಪ್ಯಾಕೇಜ್ ಮುಖಾಂತರ ಜನತೆಗೆ ದೊಡ್ಡ ಹೊರೆಯನ್ನಾಗಿ ಮಾಡಿದ್ದಾರೆ ಎಂದು ಆರೋಪಿಸಿದರು.
ನಗರದಲ್ಲಿನ ಜಾಹೀರಾತು ಫಲಕಕ್ಕೆ ಶೇ.300 ತೆರಿಗೆ ವಿಧಿಸುವಂತೆ ಆಯುಕ್ತರು ತಮ್ಮ ಕಚೇರಿ ಟಿಪ್ಪಣಿಯಲ್ಲಿ ನಮೂದಿಸಿದ್ದಾರೆ. ಈ ಬಗ್ಗೆ ಪಾಲಿಕೆ ಸಭೆಯಲ್ಲಿ ಚರ್ಚಿಸಿದರೂ ಗಂಭೀರವಾಗಿ ಪರಿಗಣಿಸಿಲ್ಲ. ಶಾಸಕರ ಭ್ರಷ್ಟಾಚಾರಗಳನ್ನು ಮುಚ್ಚುವ ಪ್ರಯತ್ನಗಳಾಗುತ್ತಿವೆ ಎಂದು ದೂರಿದರು.
ಪಾಲಿಕೆ ವಿಪಕ್ಷ ಸದಸ್ಯ ಪ್ರೇಮಾನಂದ ಶೆಟ್ಟಿ, ಕಾಂಗ್ರೆಸ್ ಗುಂಪುಗಾರಿಕೆಯೇ ಪಾಲಿಕೆಯಲ್ಲಿನ ಆಡಳಿತ ವೈಫಲ್ಯಕ್ಕೆ ಕಾರಣ. ಕಳೆದ ಒಂದುವರೆ ವರ್ಷದಿಂದ ಗುಂಪುಗಾರಿಕೆ ಬಿಟ್ಟಿಲ್ಲ. ಬಣ ರಾಜಕೀಯದ ರೂಪವೇ ಆಯುಕ್ತರ ವರ್ಗಾವಣೆ. ಇದು ನಗರದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆ ಮಾಡಿದೆ. ನಗರದ ಪುಟ್ಪಾತ್ಗಳು ಬೀದಿವ್ಯಾಪಾರಿಗಳಿಗೆ ಅವಕಾಶ ಮಾಡಿಕೊಟ್ಟು ಇಡೀ ಪಾಲಿಕೆಯನ್ನೇ ಸಂತೆಯನ್ನಾಗಿ ಮಾಡಿದ್ದಾರೆ ಎಂದು ದೂಷಿಸಿದರು.
ಪಾಲಿಕೆಯ ಅಧಿಕಾರಿಗಳ ವರ್ಗಾವಣೆಯ ಹುನ್ನಾರವೇನೆಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ನ ಸರ್ವೋಚ್ಛ ನಾಯಕ ಜನಾರ್ದನ ಪೂಜಾರಿ ಪಾಲಿಕೆ ಚುನಾವಣಾ ಪ್ರಣಾಳಿಕೆ ರೂಪಿಸಿದ್ದಾರೆ. ಅವರೇ ಸ್ವಯಂಘೋಷಿತ ಆಸ್ತಿ ತೆರಿಗೆ ಮೊದಲ ಆದ್ಯತೆ ನೀಡಿದ್ದರು. ಆದರೆ ಈಗ ಅವರದ್ದೇ ಪಕ್ಷದ ಸದಸ್ಯರು ಅವರ ಮಾತನ್ನು ದಿಕ್ಕರಿಸಿ ವ್ಯವಸ್ಥೆಯನ್ನು ಅಳಿಸಿದ್ದಾರೆ ಎಂದರು.
ಮತ್ತೋರ್ವ ಸದಸ್ಯ ತಿಲಕ್ಚಂದ್ರ ಮಾತನಾಡಿ, ರಾಜ್ಯ ರಾಷ್ಟ್ರ ರಾಜಕಾರಣದ ಹೇಳಿಕೆ ನೀಡುವ ಜನಾರ್ದನ ಪೂಜಾರಿಯವರು ತಮ್ಮ ಕಾಲಬುಡದಲ್ಲೇ ತಮ್ಮದೇ ಪಕ್ಷದ ಪಾಲಿಕೆ ಸದಸ್ಯರು ಗುಂಪುಗಾರಿಕೆ ನಡೆಸುತ್ತಾ ನಗರದ ಅಭಿವೃದ್ಧಿಯಿಂದ ಹಿಂದೆ ಸರಿದಿದ್ದರೂ ಎಚ್ಚರಿಕೆ ನೀಡುತ್ತಿಲ್ಲ. ರಸ್ತೆಗಳ ಅವ್ಯವಸ್ಥೆಗಳು ನಿತ್ಯ ಪತ್ರಿಕೆಗಳಲ್ಲಿ ಧಾರವಾಹಿಯಂತೆ ಬರುತ್ತಿವೆ. ಭ್ರಷ್ಟಾಚಾರಗಳನ್ನು ಮುಚ್ಚಿಹಾಕುವ ಪ್ರಯತ್ನಗಳಾಗುತ್ತಿವೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ರವಿಶಂಕರ್ ಮಿಜಾರ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಭರತ್ ಶೆಟ್ಟಿ, ಸುರೇಶ್ಚಂದ್ರ ಶೆಟ್ಟಿ, ಉತ್ತರ ವಿಧಾನಸಭಾ ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ಅಶೋಕ್, ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ಪ್ರಧಾನ ಕಾರ್ಯದರ್ಶಿ ವೇದವ್ಯಾಸ ಕಾಮತ್, ಮಹಿಳಾ ಮೋರ್ಚಾ ಹಾಗೂ ಪಾಲಿಕೆ ಸದಸ್ಯೆ ರೂಪಾ ಡಿ. ಬಂಗೇರ, ಯುವ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಮತ್ತಿತರರು ಉಪಸ್ಥಿತರಿದ್ದರು.

