ಮೂಡುಬಿದರೆ: ಗ್ರಾಮಸ್ಥರ ಪಡಿತರ ಚೀಟಿ ನವೀಕರಣ, ಮನೆತೆರಿಗೆ ವಸೂಲಿಗೆ ಪಡುಮಾರ್ನಾಡು ಗ್ರಾ.ಪಂ ವಿನೂತನ ಪ್ರಯೋಗವನ್ನು ಮಾಡಿದೆ. ಗ್ರಾಮಸ್ಥರಿಗೆ ಅನುಕೂಲವಾಗುವಂತೆ ವಾರ್ಡ್ವಾರು ಬೂತ್ಗಳನ್ನು ಸ್ಥಾಪಿಸಿ, ಹಂತ ಹಂತವಾಗಿ ಪಡಿತರ ನವೀಕರಣ ಮಾಡುವಂತಹ ಯೋಜನೆ ರೂಪಿಸಿ, ಕಾರ್ಯಪ್ರವೃತ್ತವಾಗಿದೆ.


ಕಾರ್ಯವೈಖರಿ ಹೇಗೆ?:
ಪಡಿತರ ನವೀಕರಣದಲ್ಲಿ ಗ್ರಾಮಸ್ಥರಲ್ಲಿರುವ ಗೊಂದಲವನ್ನು ನಿವಾರಿಸಲು ಪಡುಮಾರ್ನಾಡು ಪಂಚಾಯಿತಿ ಅಧ್ಯಕ್ಷ ಶ್ರೀನಾಥ ಸುವರ್ಣ ನೇತೃತ್ವದ ತಂಡ ಯೋಜನೆಯೊಂದನ್ನು ರೂಪಿಸಿದೆ. ವಾರ್ಡ್ನ ಕೇಂದ್ರ ಸ್ಥಳಗಳಲ್ಲಿ ಬೂತ್ಗಳನ್ನು ಸ್ಥಾಪಿಸಲಾಗುತ್ತದೆ. ವಾರ್ಡ್ನಲ್ಲಿರುವ ಶಾಲೆ, ಯುವಕ ಮಂಡಲ ಅಥವಾ ನವೀಕರಣಕ್ಕೆ ಸೂಕ್ತವೆನಿಸುವ ಸ್ಥಳಗಳಲ್ಲಿ ನವೀಕರಣ ಪ್ರಾರಂಭಿಸಲಾಗಿದೆ. ಗ್ರಾಮಸ್ಥರ ಭಾವಚಿತ್ರ ತೆಗೆಯಲು ಬೇಕಾದ 4ಸಾವಿರ ವೆಚ್ಚದ ಕ್ಯಾಮರ, 2 ತಮ್( ಬೆರಳಚ್ಚು ಯಂತ್ರ) 2 ಲ್ಯಾಪ್ಟಾಪ್ ಹಾಗೂ ಇಂಟರ್ನೆಟ್ ಮೊಡೇಮ್ಗಳನ್ನು ನಿಗಧಿಪಡಿಸಿದ ಬೂತ್ಗೆ ಕೊಂಡಯ್ಯಲಾಗುತ್ತದೆ. ಗ್ರಾಮಸ್ಥರಿಗೆ ಈ ಕುರಿತು ಮೊದಲೇ ಮಾಹಿತಿ ನೀಡಲಾಗುತ್ತದೆ.ಪೂರಕ ದಾಖಲೆಗಳ ಸಹಿತ ಗ್ರಾಮಸ್ಥರು ಹೆಚ್ಚಿನ ತೊಂದರೆ ಅನುಭವಿಸದೆ ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ವ್ಯವಸ್ಥೆ ಇದಾಗಿದೆ. ಮನೆತೆರಿಗೆಯನ್ನೂ ವಾವತಿಸುವ ವ್ಯವಸ್ಥೆ ಕಲ್ಪಿಸುವರಿಂದ ಏಕ ಕಾಲದಲ್ಲಿ ಜನರು ಎರಡು ಕೆಲಸವನ್ನು ಸಾಂಗವಾಗಿ ನೆರವೇರಿಸುವಂತಾಗಿದೆ.
500 ನವೀಕರಣ ಗುರಿ:
ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಸಿಬ್ಬಂದಿಗಳನ್ನು ಒಳಗೊಂಡ ತಂಡವು ಕಳೆದ ವಾರದ 5 ದಿನ ಮೂಡುಮಾರ್ನಾಡು 1ನೇ ವಾರ್ಡ್ನಲ್ಲಿ 100ಕ್ಕೂ ಅಧಿಕ ನವೀಕರಣ ಪ್ರಕ್ರಿಯೆ ಮುಗಿದಿದೆ. ಈ ವಾರ ಮೂಡುಮರ್ನಾಡು ತಂಡ್ರಕೆರೆ ,ಅಮನಬೆಟ್ಟುಪರಿಸರದಲ್ಲಿ ಪಡಿತರ ನವೀಕರಣ ಕಾರ್ಯ ನಡೆಯುತ್ತಿದೆ. ಬೆಳಿಗ್ಗೆ 9ರಿಂದ ಪ್ರಾರಂಭವಾಗುವ ಈ ಕೆಲಸ, ಗ್ರಾಮಸ್ಥರು ಬಂದರೆ 6.30ರಿಂದ 7 ಗಂಟೆವರೆಗೆ ಮುಂದುವರೆಯುತ್ತದೆ. ಈ ಅಭಿಯಾನದ ಮೊದಲ ಹಂತದಲ್ಲಿ 500ಕ್ಕೂ ಅಧಿಕ ಪಡಿತರ ಚೀಟಿಯ ನವೀಕರಣ ಮಾಡವಲ್ಲಿ ಪಂಚಾಯಿತಿ ತಂಡ ಉತ್ಸುಕವಾಗಿದೆ.
ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಈಗಾಗಲೇ ಬೀದಿ ದೀಪ ಸಮಸ್ಯೆ ಬಗೆಹರಿಸಿದ್ದೇವೆ. ಪಡಿತರ ಚೀಟಿ ನವೀಕರಣದಲ್ಲಿ ಯಾವುದೇ ರೀತಿಯ ಗೊಂದಲವಾಗದಂತೆ ಆಯಾ ವಾರ್ಡ್ಗೆ ತೆರಳಿ ನೋಂದಣಿ ಮಾಡುತ್ತಿದ್ದೇವೆ.

