ಮೂಡುಬಿದಿರೆ: ಹೂವಿನ ವ್ಯಾಪಾರಿ, ಭಜರಂಗದಳದ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರನ್ನು ದುಷ್ಕರ್ಮಿಗಳು ಶುಕ್ರವಾರ ಬೆಳಿಗ್ಗೆ ಮೂಡುಬಿದಿರೆ ಮುಖ್ಯರಸ್ತೆಯಲ್ಲಿ ಕೊಲೆ ಮಾಡಿದ್ದು, ಪ್ರಕರಣವನ್ನು ಖಂಡಿಸಿ ಮೂಡುಬಿದಿರೆಯಲ್ಲಿ ಬಹುತೇಕರು ಸ್ವಯಂಪ್ರೇರಿತ ಬಂದ್ ಆಚರಿಸಲಾಗಿದೆ.


ಶುಕ್ರವಾರ ಬೆಳಿಗ್ಗೆ 7.20ರ ಸುಮಾರಿಗೆ ಕೊಲೆ ನಡೆದಿದ್ದು, ಆ ಬಳಿಕ ಮೂಡುಬಿದರೆಯಲ್ಲಿ ಬಂದ್ ಆಚರಿಸಲಾಗಿತ್ತು. ಶನಿವಾರ ಬಂದ್ ಬಗ್ಗೆ ಜನರಲ್ಲಿ ಶುಕ್ರವಾರವೇ ಗೊಂದಲಗಳಿದ್ದವು. ಶನಿವಾರ ಮುಂಜಾನೆಯಿಂದಲೇ ಬಸ್ ವಾಹನ ಸಂಚಾರ ವಿರಳವಾಗಿದ್ದವು. ಬಳಿಕ ಯುವಕರ ಕೆಲವು ತಂಡಗಳು, ಶಾಲಾ ಕಾಲೇಜು ವಾಹನಗಳನ್ನು ತಡೆದಿದ್ದು, ಕೆಲವು ಅಂಗಡಿಗಳನ್ನು ಮುಚ್ಚಿದ್ದರು. ಬಳಿಕ ಮೂಡುಬಿದಿರೆ ಪೇಟೆ ಸಂಪೂರ್ಣ ಬಂದಾಗಿದ್ದು, ಗ್ರಾಮಾಂತರ ಪ್ರದೇಶಗಳಲ್ಲೂ ಬಂದ್ ನಡೆದಿದೆ.
ನಾವು ಬಂದ್‍ಗೆ ಕರೆ ನೀಡಿಲ್ಲ:
ಯುವಕನ ಕೊಲೆ ಹಿನ್ನಲೆಯಲ್ಲಿ ಶುಕ್ರವಾರ ಹಾಗೂ ಶನಿವಾರ ಮೂಡುಬಿದಿರೆಯಲ್ಲಿ ಬಂದ್ ಆಚರಿಸಲಾಗಿದ್ದು, ನಮ್ಮ ಸಂಘಟನೆಯಿಂದ ಅಥವಾ ಪಕ್ಷದಿಂದ ಯಾವುದೇ ರೀತಿಗೆ ಬಂದ್‍ಗೆ ಕರೆ ನೀಡಿಲ್ಲ. ಘಟನೆಯನ್ನು ಖಂಡಿಸಿ ಮೂಡುಬಿದಿರೆ ಜನತೆ ಸ್ವಯಂಪ್ರೇರಿತರಾಗಿ ಬಂದ್ ಆಚರಿಸಿದ್ದಾರೆ. ಪ್ರಶಾಂತ್ ಶವದ ಸಾರ್ವಜನಿಕ ದರ್ಶನ ಬಳಿಕ ನಡೆದ ಗೊಂದಲ ಹಾಗೂ ಹಾನಿಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಬಿಜೆಪಿ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ತಿಳಿಸಿದ್ದಾರೆ.






