ಮೂಡುಬಿದಿರೆ: ಯಾವುದೇ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿರದ ಅಮಾಯಕ ಯುವಕನನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನತೆ ತಲೆತಗ್ಗಿಸುವ ಬೆಳವಣಿಗೆಯಾಗಿದೆ. ಎರಡು ವಾರಗಳ ಹಿಂದೆ ಅಮಾಯಕರ ಹತ್ಯೆಗೆ ಯತ್ನಿಸಿದ ಇನ್ನೊಂದು ಪ್ರಕರಣವೂ ನಡೆದಿತ್ತು. ಇದನ್ನು ಕಟುವಾದ ಶಬ್ದಗಳಲ್ಲಿ ಖಂಡಿಸಬೇಕಾಗುತ್ತದೆ. ಮೃತ ಯುವಕನ ಕುಟುಂಬಕ್ಕೆ ಸರಕಾರ 25 ಲಕ್ಷ ರೂ ಪರಿಹಾರ ನೀಡಬೇಕು. ಅದೇ ರೀತಿ ಹಿಂದಿನ ಹತ್ಯೆ ಯತ್ನದಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೂ ವೈದ್ಯಕೀಯ ಚಿಕಿತ್ಸೆಗೆ ನೆರವಾಗಬೇಕು ಎಂದು ಕಾರ್ಕಳ ಶಾಸಕ, ರಾಜ್ಯ ವಿಪಕ್ಷ ಮುಖ್ಯ ಸಚೇತಕ ಸುನೀಲ್ ಕುಮಾರ್ ಆಗ್ರಹಿಸಿದರು. ಕಳೆದ ಶುಕ್ರವಾರ ಬರ್ಬರವಾಗಿ ಹತ್ಯೆಯಾದ ಹೂವಿನ ವ್ಯಾಪಾರಿ, ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರ ಬಿರಾವಿನಲ್ಲಿರುವ ಮನೆಗೆ ರವಿವಾರ ಬೆಳಿಗ್ಗೆ ಭೇಟಿ ನೀಡಿದ ಅವರು ಪ್ರಶಾಂತ್ ಹೆತ್ತವರಿಗೆ ಸಾಂತ್ವನ ಹೇಳಿದರು.
ಯುವಕನ ಹತ್ಯೆ ನಡೆದು 48 ಗಂಟೆಗಳೇ ಕಳೆದಿದ್ದರೂ ಆರೋಪಿಗಳ ಪತ್ತೆಯಾಗಿಲ್ಲ, ಘಟನೆಯ ಹಿಂದೆ ಕೆ.ಎಫ್.ಡಿ ಹಾಗೂ ಅದರ ಬೆಂಬಲಿಗರ ಕೈವಾಡ ಇದೆ ಎನ್ನಲಾಗುತ್ತಿದೆ . ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನು ತಾಲಿಬಾನ್, ಸಿರಿಯಾ ಮಾಡಲು ಬಿಡುವುದಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಬಾರದ್ದೆಲ್ಲ ನಡೆಯುತ್ತಿರುವುದಕ್ಕೆ ಪೋಲೀಸ್ ಇಲಾಖೆಯ ನಿರ್ಲಕ್ಷವೇ ಕಾರಣ. ಸರಕಾರವೂ ಇಂತಹ ಬೆಳವಣಿಗೆಗಳಲ್ಲಿ ಮೃದು ಧೋರಣೆಯಿಂದ ಕೆ.ಎಫ್.ಡಿ, ಸಿಮಿಯವರ ಬೆಂಬಲಿಗರ ಮೇಲಿನ ಮೊಕದ್ದಮೆಗಳನ್ನು ಕೈಬಿಟ್ಟಿರುವುದು ಈ ಕಡೆಯವರು ಬಹಿರಂಗವಾಗಿ ದುಷ್ಕøತ್ಯಗಳಲ್ಲಿ ಭಾಗವಹಿಸುವಂತೆ ಮಾಡಿದೆ. ಎಲ್ಲರ ರಕ್ಷಣೆಯ ಬಗ್ಗೆ ಸರಕಾರ ಕಾಳಜಿ ವಹಿಸಬೇಕಾಗಿದೆ. ಎಂದವರು ಹೇಳಿದರು. ಈ ಸಂದರ್ಭದಲ್ಲಿ ಸುನೀಲ್ ಕುಮಾರ್ ಪ್ರಶಾಂತ್ ಕುಟುಂಬಕ್ಕೆ ತಮ್ಮ ವತಿಯಿಂದ ಆರ್ಥಿಕ ನೆರವನ್ನು ಹಸ್ತಾಂತರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ.ಜಗದೀಶ ಅಧಿಕಾರಿ, ಸುದರ್ಶನ ಎಂ, ಪುರಸಭಾ ಸದಸ್ಯರಾದ ಎಂ. ಬಾಹುಬಲಿ ಪ್ರಸಾದ್, ನಾಗರಾಜ ಪೂಜಾರಿ, ಬಜರಂಗದಳ ತಾಲೂಕು ಸಂಚಾಲಕ ಸೋಮನಾಥ ಕೋಟ್ಯಾನ್, ಮಹೇಶ ಶೆಣೈ, ಸುನೀಲ್, ರಂಜಿತ್ , ಭರತ್ , ಅಜಯ್ ರೈ ಮತ್ತಿತರರು ಹಾಜರಿದ್ದರು.
ಬಜರಂಗದಳ ಕಾರ್ಯಕರ್ತ ಪ್ರಶಾಂತ್ ಪೂಜಾರಿಯವರ ಬರ್ಬರ ಹತ್ಯೆ ,ಬಳಿಕ ಮೂಡುಬಿದಿರೆಯಲ್ಲಿ ಉಂಟಾಗಿದ್ದ ಅಶಾಂತಿಯ ವಾತಾವರಣ, ಎಲ್ಲ ಘಟನೆಗಳ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ಮೌನವಹಿಸಿರುವುದು ಖಂಡನೀಯ. ಇನ್ನೊಂದೆಡೆ ಕ್ಷೇತ್ರ ಶಾಸಕರೂ , ರಾಜ್ಯ ಸಚಿವರೂ ಆಗಿರುವ ಅಭಯಚಂದ್ರ ಜೈನ್ ಕ್ಷೇತ್ರದಲ್ಲಿದ್ದರೂ ಈ ಸಂದರ್ಭದಲ್ಲಿ ಮೃತ ಪಟ್ಟ ಕುಟುಂಬದವರ ಭೇಟಿ, ಸಾಂತ್ವನಕ್ಕೆ ಮುಂದಾಗದಿದ್ದದ್ದು ದುರದೃಷ್ಟಕರ ಎಂದು ಬಿಜೆಪಿ ಮುಖಂಡ ಸುದರ್ಶನ ಎಂ ಹೇಳಿದ್ದಾರೆ. ದುಷ್ಕರ್ಮಿಗಳಿಂದ ಬರ್ಬರ ಹತ್ಯೆಗೀಡಾಗಿರುವ
ಪ್ರಶಾಂತ್ ಪೂಜಾರಿಯವರ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ ಪರಿಹಾರ ನೀಡಬೇಕು. ಪ್ರಕರಣದಲ್ಲಿ ಕೃತ್ಯ ಎಸಗಿದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಜರಗಿಸಬೇಕು ಎಂದವರು ಆಗ್ರಹಿಸಿದ್ದಾರೆ.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ಪ್ರಶಾಂತ್ ಪೂಜಾರಿಯವರ ಕುಟುಂಬಕ್ಕೆ ಆರ್ಥಿಕ ನೆರವು ಕ್ರೋಢೀಕರಿಸುವಲ್ಲಿ ಮೂಡುಬಿದಿರೆ ಬಿಜೆಪಿ ಮತ್ತು ಬಜರಂಗದಳ ಚಿಂತನೆ ನಡೆಸಿದೆ. ಈ ಬಗ್ಗೆ ಶೀಘ್ರ ಸಮಾಲೋಚನಾ ಸಭೆ ಕರೆದು ಪ್ರಶಾಂತ್ ಕುಟುಂಬವನ್ನು ಆರ್ಥಿಕವಾಗಿ ಆಧರಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಬಿಜೆಪಿ ಮತ್ತು ಬಜರಂಗದಳ ಪ್ರಮುಖರು ಹೇಳಿದ್ದಾರೆ.

