ಮೂಡುಬಿದರೆ: ಇಲ್ಲಿನ ಸಮಾಜಮಂದಿರ ಸಭಾದ ಆಶ್ರಯದಲ್ಲಿ ನಡೆಯುವ 70ನೇ ದಸರಾ ಸಾಹಿತ್ಯ ಮತ್ತು ಸಾಂಸ್ಕ್ರತಿಕೋತ್ಸವಕ್ಕೆ ಮಂಗಳವಾರ ಚಾಲನೆ ನೀಡಲಾಯಿತು.

mbd_oct14_3ಹಿರಿಯ ವಕೀಲ ಎಂ.ಕೆ.ವಿಜಯಕುಮಾರ್ ಉತ್ಸವಕ್ಕೆ ಚಾಲನೆ ನೀಡಿ ನ್ಯಾಯಾಲಯ ಕಾನೂನು ಮತ್ತು ಶ್ರೀ ಸಾಮಾನ್ಯ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ನ್ಯಾಯಾಲಯಗಳು ಕಾನೂನಿನಂತೆ ತೀರ್ಪು ನೀಡುತ್ತವೆ. ನ್ಯಾಯಾಧೀಶರು ನೀಡುವ ತೀರ್ಪುಗಳಲ್ಲೂ ಲೋಪವಾಗಿದೆ ಎಂಬ ಭಾವನೆ ಜನರಲ್ಲಿ ಬರಲು ಕಾನೂನಿಲ್ಲಿರುವ ಲೋಪವೇ ಕಾರಣ. ದಶಕಗಳಿಂದೀಚೆಗೆ 10ಪಟ್ಟು ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆ. ಆದರೆ ನ್ಯಾಯಾಲಯಗಳು ಹೆಚ್ಚಾಗಿಲ್ಲ. ಹೀಗಾಗಿ ಇರುವ ನ್ಯಾಯಾಲಯಗಳಲ್ಲಿ ಪ್ರಕರಣಗಳು ಹೆಚ್ಚಾಗಿ ಕಕ್ಷಿಗಾರರಿಗೆ ನ್ಯಾಯ ದೊರೆಯುವಲ್ಲಿ ವಿಳಂಬವಾಗುತ್ತಿದೆ. ಪೊಲೀಸರ ತನಿಖಾ ವೈಫಲ್ಯದಿಂದಾಗಿ ನಿರಪರಾಧಿಗಳಿಗೆ ಶಿಕ್ಷೆಯಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.
ಹಿಂದುಗಳು, ಕ್ರೈಸ್ತರು ಮತ್ತು ಮುಸ್ಲಿಮರಿಗೆ ಪ್ರತ್ಯೇಕ ಕಾನೂನುಗಳಿವೆ. ಏಕರೂಪ ಕಾನೂನು ಜಾರಿಗೆ ಬರುವುದರಿಂದ ತಾರತಮ್ಯ ತಪ್ಪುತ್ತದೆ. ಈ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ ಎಂದ ಅವರು ಅಪರಾಧ ಕೃತ್ಯಗಳನ್ನು ಎಸಗಿದವರಿಗೆ ವಕೀಲರು ವಕಾಲತು ವಹಿಸುವುದು ಸರಿಯಲ್ಲ ಎಂಬ ಭಾವನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ವಕೀಲರೇ ಆರೋಪಿಯನ್ನು ತಪ್ಪಿತಸ್ಥ ಎಂದು ತೀರ್ಪು ಇತ್ತರೆ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ ಏನು ಕೆಲಸ ಎಂದು ಪ್ರಶ್ನಿಸಿದರು. ಭೂ ಸುಧಾರಣಾ ಕಾನೂನು ಜಾರಿಗೆ ತರುವಾಗ ಸೂಕ್ತ ನಿಯಮಾವಳಿಗಳನ್ನು ರೂಪಿಸದಿರುವ ಕಾರಣ ಭೂಮಸೂದೆಗೆ ಸಂಬಂಧಿಸಿದ ಸಾವಿರಾರು ಕೇಸುಗಳು ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದೆ ಬಾಕಿ ಉಳಿದಿದೆ ಎಂದರು.
75ವರ್ಷ ಪೂರೈಸಿರುವ ಹಾಗೂ ರಾಜಕೀಯದಲ್ಲಿ 50ವರ್ಷಗಳನ್ನು ಪೂರೈಸಿರುವ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರಿಗೆ ಸಮಾಜರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಾಜಮಂದಿರ ಸಭಾದ ಅಧ್ಯಕ್ಷ ಸಂಪತ್ ಸಾಮ್ರಾಜ್ಯ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಅಧ್ಯಾಪಕ ಡಾ.ಪುಂಡಿಕಾೈ ಗಣಪಯ್ಯ ಭಟ್ ಅಭಿನಂದನಾ ಭಾಷಣ ಮಾಡಿದರು. ಪತ್ರಕರ್ತ ಎಂ.ಗಣೇಶ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *