ಬಂಟ್ವಾಳ: ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿ ವಿಸ್ತರಣೆ ವೇಳೆ ಕಲ್ಲಡ್ಕ ಪೇಟೆಯನ್ನು ಉಳಿಸಿಕೊಳ್ಳಲು ಬೈಪಾಸ್ ರಸ್ತೆ ನಿರ್ಮಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರನ್ನು ಮಂಗಳವಾರ ಭೇಟಿ ನೀಡಿ ಮನವಿ ಸಲ್ಲಿಸಿದೆ. ಮಾಜಿ ಶಾಸಕ ಕೆ.ಪದ್ಮನಾಭ ಕೊಟ್ಟಾರಿ ಮತ್ತು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಶೆಣೈ ನೇತೃತ್ವದ ನಿಯೋಗವು ಮಂಗಳವಾರ ಈ ಬಗ್ಗೆ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಡಾ.ಅಶೋಕ್ ಅವರಿಗೆ ಮನವರಿಕೆ ಮಾಡಿದರು. ಇದಕ್ಕಾಗಿ ಇಲ್ಲಿನ ಬೋಳಂಗಡಿಯಿಂದ ಆರಂಭಗೊಂಡು ಮಾಣಿ ಸಮೀಪದ ಅಳಿರ ಎಂಬಲ್ಲಿ ಬೈಪಾಸ್ ಸಂರ್ಪಕಿ ಸುವಂತೆ ಮಾಡಿದಲ್ಲಿ ಜನವಸತಿ ಪ್ರದೇಶಗಳಿಗೆ ಕಡಿಮೆ ಹಾನಿ ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ಕಲ್ಲಡ್ಕ ಪೇಟೆಯ ಅಸ್ತಿತ್ವಕ್ಕೆ ಕೊಡಲಿಯೇಟು ನೀಡಿದಂತಾಗುತ್ತದೆ ಎಂದು ಅವರು ವಿವರಿಸಿ ಗಮನ ಸೆಳೆದರು.
ಹೆದ್ದಾರಿ ಪ್ರಾಧಿಕಾರವು ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಬೈಪಾಸ್ ನಿರ್ಮಾಣಕ್ಕೆ ಸದ್ರಿ ಗ್ರಾಮಗಳ ಜನರ ವಿರೋಧ ಇಲ್ಲದಿದ್ದಲ್ಲಿ ಕಾಮಗಾರಿ ಮುಂದುವರಿಸಬಹುದು ಎಂದು ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿದರು. ಈ ಬಗ್ಗೆ ಕೂಡಲೇ ಸ್ಥಳಪರಿಶೀಲನೆ ನಡೆಸಿ ವರದಿ ಒಪ್ಪಿಸುವಂತೆ ಉಪವಿಭಾಗಾಧಿಕಾರಿ ಡಾ.ಅಶೋಕ್ ಅವರಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು ಎಂದು ತಿಳಿಸಿದ್ದಾರೆ.
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯ ದಿನೇಶ್ ಅಮ್ಟೂರು, ಪ್ರಮುಖರಾದ ಕುಂಞಿ ಅಹಮದ್, ಸ್ಟೇನಿ ಸ್ಲಾವ್ಸ್ ಡಿ.ಸೋಜ, ತಿರುಮಲೇಶ್ವರ ಭಟ್, ಶಿವಶಂಕರ್ ಭಟ್, ಝಕಾರಿಯಾ, ಮೋಹನ್ ಪಿ.ಎಸ್, ರಫೀಕ್, ಸೂರಜ್, ಹುಸೈನ್, ಫವಾಝ್, ರಾಕ್ಲೈನ್ ಸುಂದರ್, ಕೂಸಪ್ಪ ಮತ್ತಿತರರು ನಿಯೋಗದಲ್ಲಿದ್ದರು.