ಬಂಟ್ವಾಳ:ಗ್ರಾಮೀಣ ಮತ್ತು ನಗರ ಪ್ರದೇಶ ಎಂಬ ತಾರತಮ್ಯ ಇಲ್ಲದೆ ಮಕ್ಕಳಿಗೆ ಬಾಲ್ಯದಲ್ಲಿ ಗುಣಮಟ್ಟದ ಸಂಸ್ಕಾರಯುತ ಶಿಕ್ಷಣದ ಜೊತೆಗೆ ಕ್ರೀಡೆಗೂ ಸಮಾನ ಪೋತ್ಸಾಹ ನೀಡಿದಾಗ ಮಾತ್ರ ಆರೋಗ್ಯವಂತ ಮತ್ತು ಬಲಿಷ್ಟ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಕಿನ್ನಿಗೋಳಿ ಧರ್ಮಗುರು ಮರ್ಮೆನ್ ಜಾನ್ ನೊರೋನ್ಹ ಹೇಳಿದ್ದಾರೆ.ತಾಲ್ಲೂಕಿನ ಸಿದ್ಧಕಟ್ಟೆ ಗುಣಶ್ರೀ ವಿದ್ಯಾಲಯ ವತಿಯಿಂದ ಮಂಚಕಲ್ಲು ಎಣ್ಮಾಜೆ ಮೈದಾನದಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಗುಣಶ್ರೀ ವಿದ್ಯಾಲಯ ಟ್ರಸ್ಟಿ ವಿಜಯ ಕುಮಾರ್ ಚೌಟ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ತುಂಗಪ್ಪ ಬಂಗೇರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ಕೇವಲ ಉದ್ಯೋಗಕ್ಕಾಗಿ ಶಿಕ್ಷಣ ಪಡೆಯದೆ ಸಂಸ್ಕಾರಯುತ ಶಿಕ್ಷಣದ ಜೊತೆಗೆ ರಾಷ್ಟ್ರಭಕ್ತಿ ಮೈಗೂಡಿಸಿಕೊಂಡಾಗ ಮಾತ್ರ ಎಂದಿಗೂ ಸಮಾಜದಲ್ಲಿ ಅಸಹಿಷ್ಣುತೆ ಉಂಟಾಗುವುದಿಲ್ಲ ಎಂದರು. ಬಂಟ್ವಾಳ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಕೆ.ಶ್ರೀಯಾನ್ ಶುಭ ಹಾರೈಸಿದರು.
ಸಂಗಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಶೆಟ್ಟಿ, ಕುಕ್ಕಿಪಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿನಯ ಡಿ.ಪೂಜಾರಿ, ಸ್ಥಳದಾನಿ ಎಣ್ಮಾಜೆ ಮೋಹನ ಶೆಟ್ಟಿ, ದೈಹಿಕ ಶಿಕ್ಷಕಿ ಶಿಲ್ಪಾ, ಕ್ರೀಡಾ ತರಬೇತುದಾರರಾದ ಜೋಕಿಂ ಪಿಂಟೊ ಮತ್ತು ಜಯ ನಾಯ್ಕ ಮತ್ತಿತರರು ಇದ್ದರು. ಇದೇ ವೇಳೆ ಕ್ರೀಡಾಳುಗಳಿಂದ ಆಕರ್ಷಕ ಪಥಸಂಚಲನ ಮತ್ತು ವಿವಿಧ ದೈಹಿಕ ಕಸರತ್ತು ನಡೆಯಿತು. ಶಿಕ್ಷಕಿ ಸುಶ್ಮಿತಾ ಸ್ವಾಗತಿಸಿ, ಮುಖ್ಯಶಿಕ್ಷಕಿ ಸಬಿತಾ ಲವಿನ ಪಿಂಟೊ ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕಿಯರಾದ ಶಮಿತಾ ವಂದಿಸಿ, ಚೈತ್ರಾ ಕಾರ್ಯಕ್ರಮ ನಿರೂಪಿಸಿದರು.
