ಬಂಟ್ವಾಳ: ಖಾಸಗಿ ದೂರಸಂಪರ್ಕ ಸಂಸ್ಥೆಯೊಂದು ಕೇಬಲ್ ಅಳವಡಿಸಲು ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೆ ಗುಂಡಿ ಅಗೆದಿರುವುದರಿಂದ ವಾಹನ ಸವಾರರು ಸಂಕಷ್ಟ ಅನುಭವಿಸಬೇಕಾದ ಸ್ಥಿತಿ ಎದುರಾಗಿದೆ. ತಾಲೂಕಿನ ಜಕ್ರಿಬೆಟ್ಟು ಬಳಿ ಏರ್ಟೆಲ್ ಸಂಸ್ಥೆ ರಾಷ್ಟ್ರೀಯ ಹೆದ್ದಾರಿಗೆ ತಾಗಿಕೊಂಡೆ ಹೊಂಡ ತೋಡಿದ್ದು ಈಗಾಗಲೇ ಕೆಲವು ದ್ವಿಚಕ್ರ ವಾಹನ ಸವಾರರು ಹೊಂಡಕ್ಕೆ ಬಿದ್ದು ತೊಂದರೆ ಅನಿಭವಿಸಿದ್ದಾರೆ.

ಬಂಟ್ವಾಳ- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಬದಿ ಕಳೆದ ಹಲವು ದಿನಗಳಿಂದ ದೂರಸಂಪರ್ಕ ಕೇಬಲ್ ಅಳವಡಿಸಲು ಗುಂಡಿ ತೋಡುವ ಕಾಮಗಾರಿ ನಡೆಯುತ್ತಿದೆ. ವಿಚಿತ್ರವೆಂದರೆ ರಾ.ಹೆದ್ದಾರಿ ಅಂಚನ್ನೇ ಅಗೆದು ಹೊಂಡ ತೋಡಿರುವುದು ಅಪಾಯಕಾರಿ ಸ್ಥಿತಿಯನ್ನು ತಂದೊಡ್ಡಿದೆ. ರಾತ್ರಿಯ ವೇಳೆಯಂತೂ ವಾಹನ ಸವಾರರು ಸ್ವಲ್ಪ ಎಚ್ಚರ ತಪ್ಪಿದರೂ ಹೊಂಡಕ್ಕೆ ಬಿದ್ದು ಮೈ ಮೂಳೆ ಮುರಿದು ಕೊಳ್ಳುವುದು ಗ್ಯಾರಂಟಿ. ರಸ್ತೆಯ ತಿರುವು ಬಳಿಯೇ ಅವೈಜ್ಞಾನಿಕ ಕಾಮಾಗಾರಿ ಕೈಗೊಂಡಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ.
ಕಾಮಗಾರಿ ನಡೆಯುತ್ತಿರುವ ಬಗ್ಗೆ ಸೂಚನ ಫಲಕವನ್ನು ಅಳವಡಿಸದೇ ಇರುವುದು ಕೂಡ ಸಂಸ್ಥೆಯ ನಿರ್ಲಕ್ಷ ಮನೋಭಾವವನ್ನು ಎತ್ತಿ ತೋರಿಸುತ್ತಿದೆ. ಹೊಂಡ ತೋಡಿ ಕೇಬಲ್ ಅಳವಡಿಸದೇ ಹಾಗೆಯೇ ಬಿಡಲಾಗಿದೆ. ಈ ಅಪಾಯದಿಂದ ಯಾವಾಗ ಮುಕ್ತಿ ಸಿಗುತ್ತದೆ ಎಂದು ಸಾರ್ವಜನಿಕರು ಕಾಯಬೇಕಾದ ಸ್ಥಿತಿ ನಿರ್ಮಾಣಗೊಂಡಿದೆ.
