ಬಂಟ್ವಾಳ: ಲಕ್ಷ್ಷಾಂತರ ರುಪಾಯಿ ಮೌಲ್ಯದ ಚಿನ್ನಾಭರಣ ಸಹಿತ ನಗದು ಕಳವುಗೈದ ಘಟನೆ ಗೋಳ್ತಮಜಲು ಗ್ರಾಮಪಂಚಾಯಿತಿ ವ್ಯಾಪ್ತಿಯ ಅಮ್ಟೂರಿನಲ್ಲಿ ಬೆಳಕಿಗೆ ಬಂದಿದೆ. ಇಲ್ಲಿನ ನಿವಾಸಿ ಹಾಗೂ ಗೋಳ್ತಮಜಲು ಗ್ರಾ.ಪಂ.ಸದಸ್ಯ ಇಲಿಯಾಸ್ ಡಿಸೋಜಾ ಎಂಬವರ ಮನೆಯಲ್ಲಿ ಈ ಕಳವು ನಡೆದಿದ್ದು, 30 ಪವನ್ ಚಿನ್ನ ಹಾಗೂ 7 ಸಾವಿರ ರೂಪಾಯಿ ನಗದನ್ನು ಕಳ್ಳರು ದೋಚಿರುವುದಾಗಿ ತಿಳಿದು ಬಂದಿದೆ.

ಅಮ್ಟೂರಿನ ಸಂತ ಆಂತೋಣಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಸಂಜೆ ಶತಮಾನೋತ್ತರ ಸಂಭ್ರಮದ ಕಾರ್ಯಕ್ರಮದ ಹಿನ್ನಲೆಯಲ್ಲಿ ಮನೆಮಂದಿ ಕಾರ್ಯಕ್ರಮ ವೀಕ್ಷಿಸಲು ಶಾಲೆಗೆ ತೆರಳಿದ್ದರು. ಈ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತಪಡಿಸಿಕೊಂಡ ಕಳ್ಳರು ಹಿಂಭಾಗದ ಕೌಂಪೌಡ್ ಹಾರಿ ಹಿಂಬಾಗಿಲ ಚಿಲಕ ಮುರಿದು ಮನೆ ಪ್ರವೇಶಿಸಿದ್ದಾರೆ. ಬೆಡ್ರೋನಲ್ಲಿದ್ದ ಕಪಾಟನ್ನು ಸಂಪೂರ್ಣ ಜಾಲಾಡಿ ಅದರಲ್ಲಿದ್ದ ಚಿನ್ನಾಭರಣ ಹಾಗೂ ನಗದನ್ನು ಎಗರಿಸಿದ್ದಾರೆ. ಕಾರ್ಯಕ್ರಮ ಮುಗಿಸಿ ರಾತ್ರಿ 12 ಗಂಟೆಯ ಬಳಿಕ ಮನೆಮಂದಿ ಮನೆಗೆ ಬಂದಾಗ ಕಳವು ನಡೆದಿರುವುದು ಮನೆಮಂದಿಗೆ ಗೊತ್ತಾಗಿದೆ. ಕಳವಾಗಿರುವ ಸೊತ್ತಿನ ಒಟ್ಟು ಮೌಲ್ಯ 6 ಲಕ್ಷ ರುಪಾಯಿ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸೈ ಗಂಗಾಧರಪ್ಪ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆರಳಚ್ಚು ತಜ್ಞರನ್ನು ಕರೆಸಿಕೊಳ್ಳಲಾಗಿದೆ. ತಾಲೂಕು ಪಂಚಾಯಿತಿ ಸದಸ್ಯರಾದ ಐಡಾ ಸುರೇಶ್, ದಿನೇಶ್ ಅಮ್ಟೂರು, ಗೋಳ್ತಮಜಲು ಗ್ರಾ,ಪಂ.ಅಧ್ಯಕ್ಷೆ ಜಯಲಕ್ಷ್ಮೀ, ನ್ಯಾಯವಾದಿ ಅಶ್ವನಿ ಕುಮಾರ್ ರೈ ಮನೆಗೆ ಭೇಟಿ ನೀಡಿದರು.



