ಮುಂಬಯಿ: ನವಿಮುಂಬಯಿ ಅಲ್ಲಿನ ನೆರೂಲ್ ಪೂರ್ವದ ಸೆಕ್ಟರ್ 29ರಲ್ಲಿರುವ ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ ನವಿ ಮುಂಬಯಿ ಇದರ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದಲ್ಲಿ ಡಿ. 20ರಂದು ಭಾನುವಾರ ಧಾರ್ಮಿಕ ವಿಧಿ ವಿದಾನಗಳೊಂದಿಗೆ ಇಪ್ಪತ್ತಾರನೇ ವರ್ಷದ ಶ್ರೀ ಅಯ್ಯಪ್ಪ ಮಹಾಪೂಜೆ ವಿಜೃಂಭನೆಯಿಂದ ಜರಗಿತು.
ಮುಂಜಾನೆ ಶರಣು ಘೋಷದೊಂದಿಗೆ ಕಾರ್ಯಕ್ರಮಗಳು ಆದಿಗೊಂಡಿದ್ದು, ತದಾನಂತರ ಗಣಹೋಮ, ದೀಪಾರಾಧನೆ, ಲಕ್ಷನಾಮ ಪುಷ್ಪಾರ್ಚನೆ, ಮಧ್ಯಾಹ್ನ ಗಂಟೆಯಿಂದ ಶ್ಲೋಕ ಪಠಣ, ಪಡಿಪೂಜೆ, ಶ್ರೀ ಅಯ್ಯಪ್ಪ ದೇವರಿಗೆ ಮಹಾಪೂಜೆ ನೆರವೇರಿಸಿ ಮಹಾ ಆರತಿಗೈದು ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಿತು . ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಪ್ರಧಾನ ಆರ್ಚಕ ಗುರುಪ್ರಸಾದ್ ಭಟ್ ವೈಧಿಕವಾಗಿ ಪೂಜಾಧಿಗಳನ್ನು ನೆರವೇರಿಸಿದರು. ಹರೀಶ್ ಗುರುಸ್ವಾಮಿ ನೇತೃತ್ವದಲ್ಲಿ ಅಯ್ಯಪ್ಪ ದೇವರ ಪೂಜಾಧಿಗಳು ನಡೆಸಲ್ಪಟ್ಟವು.
ಧಾರ್ಮಿಕ ಕಾರ್ಯಕ್ರಮದ ಮಧ್ಯಾಂತರದಲ್ಲಿ 50ನೇ ವಾರ್ಷಿಕ ಶಬರಿಮಲೆ ಯಾತ್ರೆ ಪೂರೈಸಿದ ಮಣಿ ಸ್ವಾಮಿ ದಾಸನ್ ಡೊಂಬಿವಿಲಿ ಹಾಗೂ ಈ ಬಾರಿ 25ನೇ ವಾರ್ಷಿಕ ಶಬರಿಮಲೆ ಯಾತ್ರೆಗೈಯುವ ಗುರುಸ್ವಾಮಿ ಶ್ರೀ ಹರೀಶ್ ಎನ್.ಶೆಟ್ಟಿ ಮತ್ತು ಧರ್ಮಶಾಸ್ತ ಚಾರಿಟೇಬಲ್ ಟ್ರಸ್ಟ್ ನವಿಮುಂಬಯಿ ಇದರ ಸದಸ್ಯರಾಗಿದ್ದು, ಇತ್ತೀಚೆಗೆ ಯುನಾಟೆಡ್ ಸ್ಟೇಟ್ ಆಫ್ ಅಮೇರಿಕಾ ಅಲ್ಲಿನ ಕಿಂಗ್ಸ್ ಯುನಿವರ್ಸಿಟಿಯಿಂದ ಡಾಕ್ಟರೇಟ್ ಪದವಿಯೊಂದಿಗೆ ಗೌರವಿಸಲ್ಪಟ್ಟ ಡಾ| ಶಿವ ಎಂ.ಮೂಡುಗೆರೆ ಅವರನ್ನು ಸಂಸ್ಥೆಯ ಪದಾಧಿಕಾರಿ ಗಳು ಸನ್ಮಾನಿಸಿ ಗೌರವಿಸಿದರು. ಅಂತೆಯೇ ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಅಧ್ಯಕ್ಷ ಅಣ್ಣಿ ಸಿ ಶೆಟ್ಟಿ ಮತ್ತು ದಾನಿಗಳಾದ ಪ್ರಕಾಶ್ ಕದಂ ಅವರಿಗೆ ಪ್ರಸಾದ ರೂಪವಾಗಿ ಸತ್ಕರಿಸಿದರು.
ವಾರ್ಷಿಕ ಕಾರ್ಯಕ್ರಮದ ಪ್ರಯುಕ್ತ ಶ್ರೀ ಮೂಕಾಂಬಿಕಾ ಭಜನಾ ಮಂಡಳಿ ಘನ್ಸೋಲಿ, ಶ್ರೀ ಶನೀಶ್ವರ ಭಜನಾ ಮಂಡಳಿ ನೆರೂಲ್, ಶ್ರೀ ಸದ್ಗುರು ನಿತ್ಯಾನಂದ ಭಜನಾ ಮಂಡಳಿ ಸಾಕಿನಾಕ, ಧರ್ಮಶಾಸ್ತ ಭಕ್ತ ವೃಂದ, ನವಿಮುಂಬಯಿ ಮತ್ತಿತರ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಸಲ್ಪಟ್ಟಿತು.
ಕಾರ್ಯಕ್ರಮದಲ್ಲಿ ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷ ಸಂಜೀವ ಎನ್.ಶೆಟ್ಟಿ, ಉಪಾಧ್ಯಕ್ಷ ಪ್ರಕಾಶ್ ಮಹಾಧೀಕ್, ಗೌರವ ಕೋಶಾಧಿಕಾರಿ ಸದಾಶಿವ ಎನ್.ಶೆಟ್ಟಿ, ಜೊತೆ ಕಾರ್ಯದರ್ಶಿ ರಾಮಕೃಷ್ಣ ಎಸ್.ಶೆಟ್ಟಿ, ಜೊತೆ ಕೋಶಾಧಿಕಾರಿ ನಿತ್ಯಾನಂದ ವಿ.ಶೆಟ್ಟಿ, ನೆರೂಲ್ ಶ್ರೀ ಮಣಿಕಂಡ ಸೇವಾ ಸಂಗಮ್ನ ಅಧ್ಯಕ್ಷ ಕಿಶೋರ್ ಕುಮಾರ್ ಎಂ.ಶೆಟ್ಟಿ, ಉಪಾಧ್ಯಕ್ಷ ದಾಮೋದರ್ ಎಸ್.ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿ ಸುಂದರ್ ವಿ.ಪೂಜಾರಿ, ಗೌರವ ಕೋಶಾಧಿಕಾರಿ ಸುರೇಶ್ ಜಿ.ಶೆಟ್ಟಿ, ಜೊತೆ ಕಾರ್ಯದರ್ಶಿ ಹರಿ ಎಲ್.ಶೆಟ್ಟಿ, ಜೊತೆ ಕೋಶಾಧಿಕಾರಿ ರಾಜೇಂದ್ರ ಪ್ರಸಾದ್ ಮಾಡಾ, ಮಾಜಿ ನಗರ ಸೇವಕ ಸಂತೋಷ್ ಡಿ.ಶೆಟ್ಟಿ ಸೇರಿದಂತೆ ಉಭಯ ಸಂಸ್ಥೆಗಳ ಸದಸ್ಯರನೇಕರು ಮತ್ತು ನೂರಾರು ಸಂಖ್ಯೆಯ ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಶ್ರೀ ಅಯ್ಯಪ್ಪ ದೇವರ ಕೃಪೆಗೆ ಪಾತ್ರರಾದರು. ರಾತ್ರಿ ಮಹಾ ಮಂಗಳಾರತಿ ಪ್ರಸಾದ ವಿತರಣೆಯೊಂದಿಗೆ ವಾರ್ಷಿಕ ಮಹೋತ್ಸವ ಸಮಾಪನ ಗೊಂಡಿತು.
ನೆರೂಲ್ ಶ್ರೀ ಮಣಿಕಂಡ ಸೇವಾ ಸಂಗಮ್ನ ಕಾರ್ಯಾಧ್ಯಕ್ಷ ದಡ್ದಂಗಡಿ ಚೆಲ್ಲಡ್ಕ ಕುಸುಮೋದರ ಡಿ.ಶೆಟ್ಟಿ ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ ಈ ಅಯ್ಯಪ್ಪ ಮಂದಿರ ಈ ಪ್ರದೇಶದಲ್ಲಿ ಈಶ್ವರನ ಮೂರನೇ ಕಣ್ಣು ಇದ್ದಂತೆ. ಘನ್ಸೋಲಿ ಶ್ರೀ ಮೂಕಾಂಬಿಕಾ ಅಮ್ಮನ ನೆಲೆ, ನೆರೂಲ್ನಲ್ಲಿ ಶ್ರೀ ಶನೈಶ್ವರ ದೇವರು ಮತ್ತು ಇದೀಗ ನೆರೂಲ್ ಪೂರ್ವದಲ್ಲಿ ಶ್ರೀ ಅಯ್ಯಪ್ಪ ದೇವರ ನೆಲೆ ಇವೆಲ್ಲವೂ ಪಾವನ ಕ್ಷೇತ್ರಗಳಾಗಿ ಸರ್ವರ ಸಮೃದ್ಧಿಯ ಬಾಳಿಗೆ ಪೂರಕವಾಗಿವೆ. ಇಲ್ಲಿನ ಪದಾಧಿಕಾರಿಗಳು ಬರೇ ನೆಪವಾಗಿದ್ದಾರೆ. ಎಲ್ಲಾ ಭಕ್ತರು ಮಂದಿರದ ಸರ್ವಸ್ವವಾಗಿದ್ದಾರೆ ಎಂದರು. ಧರ್ಮಶಾಸ್ತ ಭಕ್ತವೃಂದ ಚಾರಿಟೇಬಲ್ ಟ್ರಸ್ಟ್ನ ಗೌರವ ಪ್ರಧಾನ ಕಾರ್ಯದರ್ಶಿ ಮೋಹನ್ದಾಸ್ ಕೆ.ರೈ ಧನ್ಯವಾದ ಸಮರ್ಪಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್









