ಬಂಟ್ವಾಳ : ಸುಮಾರು 800 ವರ್ಷಗಳ ಐತಿಹಾಸಿಕ ಹಿನ್ನೆಲೆಯುಳ್ಳ ಬಂಟ್ವಾಳ-ಬೆಳ್ತಂಗಡಿ ತಾಲೂಕುಗಳ ಗಡಿಭಾಗದ ಆರಂಬೋಡಿ ಪೂಂಜ ಶ್ರೀ ಪಂಚದುರ್ಗಾಪರಮೇಶ್ವರೀ ದೇವಸ್ಥಾನದ ಬ್ರಹ್ಮಕಲಶೋತ್ಸವ ಮತ್ತು ವರ್ಷದ ಮಹೋತ್ಸವ ಮಾ.14 ರಿಂದ ಮಾ.27 ರವರೆಗೆ ಜರಗಲಿದ್ದು ಅದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಫೆ.17ರಂದು ದೇವಸ್ಥಾನದ ವಠಾರದಲ್ಲಿ ಜರಗಿತು. 
ಮೂಡಬಿದಿರೆ ಆಳ್ವಾಸ್ ಫೌಂಡೇಶನ್ನ ವ್ಯವಸ್ಥಾಪಕ ಡಾ|ಮೋಹನ ಆಳ್ವ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ ನಮ್ಮ ದೇಶ ಪುರಾತನ ಸಂಸ್ಕೃತಿ ಇತಿಹಾಸವನ್ನು ಹೊಂದಿದೆ. ಸಾವಿರಾರು ವರ್ಷಗಳ ನಾಗರೀಕತೆಯ ನಮ್ಮ ದೇಶದಲ್ಲಿ ಧಾರ್ಮಿಕ ಚಿಂತನೆ ರಕ್ತಗತವಾಗಿದ್ದು ಯಂತ್ರ ತಂತ್ರಜ್ಞಾನಗಳ ಸಹಕಾರವಿಲ್ಲದೆ ಶಕ್ತಿ ಮಾರ್ಗದಿಂದ ಅದ್ಭುತ ದೇವಸ್ಥಾನಗಳ ನಿಮರ್ಾಣವಾಗಿತ್ತು. ಇಂದು ಧರ್ಮದ ಮೇಲೆ ಜಾಗತೀಕರಣದ ದಾಳಿಯಾಗುತ್ತಿದ್ದು ಧಾರ್ಮಿಕ ಪ್ರಜ್ಞೆ ನಾಶವಾಗುತ್ತಿದೆ. ಧರ್ಮವನ್ನು ರೂಪಿಸಲು ದೇವಸ್ಥಾನಗಳಲ್ಲಿ ಧಾರ್ಮಿಕ ಚಿಂತನೆಯ ವೈಭವೀಕರಣವಾಗಿ ಧರ್ಮ ಉಳಿಯಬೇಕು ಎಂದು ನುಡಿದರು. ದೇವಸ್ಥಾನಗಳ ಮೂಲಕ ಪೂರ್ವಜರ ಧರ್ಮ ಸಂಸ್ಕೃತಿಗಳನ್ನು ಉಳಿಸಿಕೊಂಡು ಬರಬೇಕು. ಆಚರಣೆ,ಉತ್ಸವಗಳು, ಕಾಟಾಚಾರಕ್ಕೆ ನಡೆಯದೆ ಎಲ್ಲರೂ ಒಗ್ಗೂಡಿ ಸಹಕರಿಸಬೇಕು.
ಉದ್ಯಮಿ ಶ್ರೀಪತಿ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ದೇಶ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವುದು ಪೂರ್ವಜರ ಕೊಡುಗೆಯಾಗಿದೆ. ದೇವಸ್ಥಾನಗಳು ಜನರಿಗೆ ಸುಜ್ಞಾನ ಕೊಡುವ ಕೇಂದ್ರಗಳು.ಭಕ್ತಾಗಳೇ ದೇವಸ್ಥಾನಕ್ಕೆ ಕೊಡುಗೆಯಾಗಿದ್ದಾರೆ ಎಂದ ಅವರು ಬ್ರಹ್ಮಕಲಶೋತ್ಸವ ಕಾರ್ಯದಲ್ಲಿ ಭಾಗಿಯಾಗುವುದರಿಂದ ಭಗವಧನುಗ್ರಹ ದೊರಕುತ್ತದೆ ಎಂದು ಹೇಳಿದರು.
ಕ್ಷೇತ್ರದ ಪ್ರಧಾನ ಅರ್ಚಕ , ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಅನಂತಾಚಾರ್ಯ ಅವರು ಮಾತನಾಡಿ ದೇವಾಲಯಕ್ಕೆ ಸುಮಾರು 800 ವರ್ಷಗಳ ಇತಿಹಾಸವಿದ್ದು ಅಪಾರ ಸಂಖ್ಯೆಯ ಭಕ್ತರನ್ನು ಹೊಂದಿರುವ ಪಾವನ ಕ್ಷೇತ್ರವಾಗಿದೆ. ಈಗಾಗಲೇ ಹಲವಾರು ಅಭಿವೃದ್ಧಿ ಕಾರ್ಯಗಳು ನಡೆದಿದ್ದು ಪ್ರಸ್ತುತ ಶಿಲಾಮಯ ಸುತ್ತುಪೌಳಿ, ಪ್ರಧಾನ ಗೋಪುರ, ಶಿಲಾಮಯ ಗರ್ಭಗುಡಿ,ಮುಖಮಂಟಪ ನಿರ್ಮಾಣ ಪೂರ್ಣಗೊಂಡು ಬ್ರಹ್ಮಕಲಶೋತ್ಸವಕ್ಕೆ ಸಿದ್ಧಗೊಂಡಿದೆ ಎಂದು ಹೇಳಿದರು.
ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ರಾಜೇಶ್ ನಾಕ್ ಉಳಿಪಾಡಿಗುತ್ತು, ಶ್ರೀ ಕ್ಷೇತ್ರದ ತಂತ್ರಿ ಪಿ.ಕೃಷ್ಣಪ್ರಸಾದ್ ಆಚಾರ್ಯ, ಪ್ರಗತಿಪರ ಕೃಷಿಕ ಪ್ರಫುಲ್ಲ ರೈ ಮಂಜನದೊಟ್ಟು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಸಂತ ಶೆಟ್ಟಿ ಕೇದಗೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಪದಾಕಾರಿಗಳು, ಸದಸ್ಯರು ಹಾಗೂ ಎಲಿಯಮಾಗಣೆ ಗ್ರಾಮಸ್ಥರು ಭಾಗವಹಿಸಿದ್ದರು.
ನ್ಯಾಯವಾದಿ ಸುರೇಶ್ ಶೆಟ್ಟಿ ಪೂವಳ ಅವರು ಸ್ವಾಗತಿಸಿದರು.ಕಾರ್ಯಾಧ್ಯಕ್ಷ ರಮೇಶ್ ಮಂಜಿಲ ಅವರು ವಂದಿಸಿದರು. ಉಮೇಶ್ ಶೆಟ್ಟಿ ಪಾಲ್ಯ ಅವರು ಕಾರ್ಯಕ್ರಮ ನಿರೂಪಿಸಿದರು.
ವೇ|ಮೂ| ಬಾಲಕೃಷ್ಣ ಪಾಂಗಣ್ಣಾಯ ಅವರ ನೇತೃತ್ವದಲ್ಲಿ ಮಾ.14 ಸೋಮವಾರದಿಂದ ಮಾ.18ಶುಕ್ರವಾರದವರೆಗೆ ವಿವಿಧ ವೈದಿಕ,ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಅಷ್ಠಬಂಧ ಬ್ರಹ್ಮಕಲಶೋತ್ಸವ ಜರಗಲಿದೆ.ಮಾ.23ರಿಂದ ಮಾ.27ರವರೆಗೆ ವರ್ಷದ ಮಹೋತ್ಸವ ಜರಗಲಿದೆ.