ಬಂಟ್ವಾಳ : ಯಕ್ಷಗಾನವನ್ನು ನೋಡಿ ಆನಂದಿಸುವುದೇ ಕಲಾವಿದರ ಪ್ರತಿಭೆಗೆ ನೀಡುವ ಪ್ರೋತ್ಸಾಹವಾಗಿದೆ. ಸಹೃದಯರ ಪಾಲ್ಗೊಳ್ಳುವಿಕೆಯಿಂದ ಯಕ್ಷಗಾನ ಪರಂಪರೆ ಉಳಿಯಲು ಸಾಧ್ಯವಾದಿತು ಎಂದು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ ನುಡಿದರು. ಅವರು ಪಾಣೆಮಂಗಳೂರು ಮೆಲ್ಕಾರಿನಲ್ಲಿ ಎಡನೀರು ಶ್ರೀ ಗೋಪಾಲ್ ಕೃಷ್ಣ ಯಕ್ಷಗಾನ ಸಪ್ತಾಹ ಸಮಿತಿ ಬಿ.ಸಿ.ರೋಡ್ ಇದರ ವತಿಯಿಂದ ಏರ್ಪಡಿಸಲಾದ ಯಕ್ಷಗಾನ ಸಪ್ತಾಹವನ್ನು ಉದ್ಘಾಟಿಸಿ ಆಶೀರ್ವವಚನವಿತ್ತರು.

ಮುಖ್ಯ ಅತಿಥಿಯಾಗಿ ಜನಜಾಗೃತಿ ವೇದಿಕೆ ಪುತ್ತೂರು ಇದರ ಅಧ್ಯಕ್ಷ ದಂಬೆಕಾನ ಸದಾಶಿವ ರೈ ಮಾತನಾಡಿ ಮಠಗಳ ಗುರುಗಳ ಪರಂಪರೆಯಿಂದ ಯಕ್ಷಗಾನ ಉಳಿದದ್ದು ದೇ ಶದ ಸಂಸ್ಕೃತಿಗೆ ದೊಡ್ಡ ಕೊಡುಗೆಯಾಗಿದೆ. ಮೆಲ್ಕಾರಿನಲ್ಲಿ ಯಕ್ಷಗಾನ ಸಪ್ತಾಹ ನಿರಂತರವಾಗಿ ನಡೆಯಲಿ ಎಂದರು.
ಶಾಲಾ ಕಾಲೇಜುಗಳಲ್ಲಿ ಪಠ್ಯೇತರ ಚಟುವಟಿಕೆಯಾಗಿ ಯಕ್ಷಗಾನಕ್ಕೆ ಅವಕಾಶ ನೀಡಬೇಕು, ಕಲೆ ಕಲಾವಿದರಿಗೆ ಗೌರವ ಸಿಗಬೇಕು ಎಂದು ವೇದಮೂತರ್ಿ ಶಿವರಾಮ ಮಯ್ಯ ಸಜಿಪ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಮುಖರಾದ ಸುಬ್ರಹ್ಮಣ್ಯ ರಾವ್ ನಂದಾವರ , ಕೃಷ್ಣ ಶರ್ಮ ಬಿ.ಸಿ.ರೋಡ್, ಕೊಳಕೆ ಗಂಗಾಧರ ಭಟ್, ಡಿ.ಎಂ.ಕುಲಾಲ್, ಜಯಾನಂದ ಪೆರಾಜೆ, ಲೋಕೇಶ್ ಹೆಗಡೆ ಪುತ್ತೂರು, ಅನಂತ ಪ್ರಭು ನೇರಳಕಟ್ಟೆ , ಡಾ.ವಿಶ್ವನಾಥ ನಾಯಕ್, ಲಯನ್ ದಾಮೋದರ ಬಿ.ಎಂ.ಮೆಲ್ಕಾರ್, ನಿವೃತ್ತ ತಹಶೀಲ್ದಾರ್ ಮೋಹನ್ ರಾವ್, ತು ಳು ಲಿಪಿ ಶಿಕ್ಷಕ ತಮ್ಮಯ್ಯ, ರಾಮ್ ಗಣೇಶ್ ಪ್ರಭು ಕೈಕುಂಜೆ ಉಪಸ್ಥಿತರಿದ್ದರು.
ಸಮಿತಿ ಗೌರವಾಧ್ಯಕ್ಷ ಎ.ಸಿ.ಭಂಡಾರಿ ಸ್ವಾಗತಿಸಿದರು. ಅಧ್ಯಕ್ಷ ಕೈಯೂರು ನಾರಾಯಣ ಭಟ್ ಪ್ರಸ್ತಾವನೆಗೈದರು. ಕಾರ್ಯದರ್ಶಿ ಎನ್.ಶಿವಶಂಕರ್ ವಂದಿಸಿ, ಉಪನ್ಯಾಸಕ ವಿ.ಸು.ಭಟ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಗೋಪಾಲ್ ಕೃಷ್ಣ ಕೃಪಾಪೋಷಿತ ಯಕ್ಷಗಾನ ಕಲಾ ಮಂಡಳಿ ಕಾಸರಗೋಡ್ ಇವರಿಂದ ಕುರಿಯ ವಿಠಲ ಶಾಸ್ತ್ರಿ ಭಾಗವತಿಕೆಯಲ್ಲಿ ಭಕ್ತ ಸುಧಾಮ ಕೃಷ್ಣಾರ್ಜುನ ಕಾಳಗ ಯಕ್ಷಗಾನ ಪ್ರದರ್ಶನ ನಡೆಯಿತು. ಪ್ರತಿದಿನ ಸಂಜೆ 6.30ರಿಂದ 10.30ರವರೆಗೆ ವಿವಿಧ ಯಕ್ಷಗಾನ ಪ್ರದರ್ಶನವಿದೆ.