ಬಂಟ್ವಾಳ : ಜಿಲ್ಲಾ ಉಸ್ತುವಾರಿ ಸಚಿವ ಬಿ ರಮಾನಾಥ ರೈ ಅವರ ಸ್ವಚ್ಛ ಬಂಟ್ವಾಳ ಕನಸಿಗೆ ಇಲ್ಲಿಗೆ ಪುರಸಭೆ ಇನ್ನೂ ಸ್ಪಂದಿಸುವಂತೆ ಕಂಡುಬರುತ್ತಿಲ್ಲ. ಬಿ ಸಿ ರೋಡು ಮುಖ್ಯ ಪೇಟೆಯ ಫ್ಲೈ ಓವರ್ ಅಡಿಭಾಗದಲ್ಲಿ ವಾಣಿಜ್ಯ ಸಂಕೀರ್ಣಗಳ ಮುಂಭಾಗದಲ್ಲೇ ಪುರಸಭೆಯ ಕಸ-ಕಡ್ಡಿಗಳನ್ನು ನಿತ್ಯ ತಂದು ರಾಶಿ ಹಾಕಿ ಪ್ರತಿದಿನ ಮುಂಜಾನೆ ಬೆಂಕಿ ಹಾಕಿ ಸುಡುವುದು ವಾಡಿಕೆಯಾಗಿ ಹೋಗಿದೆ.
ಈ ರೀತಿಯಾಗಿ ಹಾಕುವ ಬೆಂಕಿ ಕೆನ್ನಾಲಗೆ ಭಾನುವಾರ ಬೆಳಿಗ್ಗೆ ಮಾತ್ರ ವಿಪರೀತವಾಗಿ ವ್ಯಾಪಿಸಿದ್ದು, ಮಧ್ಯಾಹ್ನದವರೆಗೂ ಅಗ್ನಿಜ್ವಾಲೆಯಾಗಿ ಉರಿಯುತ್ತಿದ್ದ ದೃಶ್ಯ ಕಂಡು ಬರುತ್ತಿತ್ತು. ಇದನ್ನು ನಂದಿಸುವ ಗತಿ ಇಲ್ಲದೆ ಹೋಗಿತ್ತು. ಕೊನೆಗೂ ಸಮೀಪದ ಅಂಗಡಿ ಮಾಲಕರು ನೀರು ಹಾಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ. ಆದರೂ ಸಂಜೆವರೆಗೂ ಬೆಂಕಿಯ ಅವೇಶಷದಲ್ಲಿ ದಟ್ಟ ಹೊಗೆ ಹೊರಸೂಸುತ್ತಲೇ ಇತ್ತು. ಅತ್ತಿಂದಿತ್ತ ಸಂಚರಿಸುವ ಸಾರ್ವಜನಿಕರು ಹಾಗೂ ವಾಹನ ಸವಾರರ ಪಾಲಿಗೆ ಇದೊಂದು ಅಗ್ನಿ ಪರೀಕ್ಷೆಯಂತಾಗಿತ್ತು.
ಇಲ್ಲಿ ನಿತ್ಯ ಕಸ-ತ್ಯಾಜ್ಯ ರಾಶಿ ಹಾಕಿ ಬೆಂಕಿ ಹಾಕುತ್ತಿರುವ ಬಗ್ಗೆ ಇಲ್ಲಿ ವರ್ತಕರು ಸಾಕಷ್ಟು ಬಾರಿ ಪುರಸಭಾಧಿಕಾರಿಗಳ ಗಮನಕ್ಕೆ ತಂದಿದ್ದರೂ, ಮುಖ್ಯಾಧಿಕಾರಿಯಾಗಲೀ, ಆರೋಗ್ಯಾಧಿಕಾರಿಯಾಗಲೀ ಈ ಬಗ್ಗೆ ಕಿಂಚಿತ್ತೂ ಗಮನ ಹರಿಸಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ. ಅಲ್ಲದೆ ಸಮೀಪದ ಫ್ಲೈ ಓವರ್ ಅಡಿಭಾಗದಲ್ಲಿ ಅನಧಿಕೃತ ಫಾಸ್ಟ್ ಫುಡ್ ಗಾಡಿಗಳು ತೀರಾ ಇತ್ತೀಚೆಗೆ ವ್ಯಾಪಕವಾಗಿ ಬೀಡುಬಿಟ್ಟು ಪರಿಸರವನ್ನು ಹಾಳುಗೆಡಹುತ್ತಿರುವ ಬಗ್ಗೆಯೂ ದೂರಿಕೊಳ್ಳಲಾಗಿದ್ದರೂ ಆರೋಗ್ಯಾಧಿಕಾರಿ ಇದ್ಯಾವುದೂ ನನ್ನ ವ್ಯಾಪ್ತಿಗೆ ಬರುವುದೇ ಇಲ್ಲ ಎಂಬಂತೆ ಮಗುಮ್ಮಾಗಿಯೆ ಮಲಗಿದ್ದಾರೆ ಎನ್ನುವ ಸಾರ್ವಜನಿಕರು ಈ ಬಗ್ಗೆ ಸಂಬಂಧಪಟ್ಟವರು ತಕ್ಷಣ ಕ್ರಮ ಕೈಗೊಳ್ಳದೆ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪುರಸಭಾ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.