ಬಂಟ್ವಾಳ: ರೈಲು ಡಿಕ್ಕಿಯಾಗಿ ಯುವಕನೊಬ್ಬ ಮೃತಪಟ್ಟ ಘಟನೆ ಮಾರ್ನಬೈಲು ಎಂಬಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ. ಇಲ್ಲಿನ ತನಿಯ ಎಂಬವರ ಮಗ ಭರತ್(20) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಈತ ಬುಟ್ಟಿ ನೇಯುವ ಕೆಲಸ ಮಾಡುತ್ತಿದ್ದಾನೆ. ಶುಕ್ರವಾರ ರಾತ್ರಿ ಮಾರ್ನಬೈಲು ಪರಿಸರದಲ್ಲಿ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸಿ ಮುಂಜಾನೆ ಮನೆಗೆ ತೆರಳುತ್ತಿದ್ದ ವೇಳೆ ರೈಲೊಂದು ಡಿಕ್ಕಿ ಹೊಡೆದ ಪರಿಣಾಮ ತೀವ್ರ ಸ್ವರೂಪದ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಯಕ್ಷಗಾನಕ್ಕೆಂದು ಹೋದ ಭರತ್ ಬೆಳಿಗ್ಗೆ 7 ಗಂಟೆಯಾದರೂ ಮನೆಗೆ ಬಾರದಿದ್ದುದರಿಂದ ಕಂಗಾಲಾದ ಮನೆಮಂದಿ ಹುಡುಕಿಕೊಂಡು ಬಂದಾಗ ರೈಲು ಹಳಿಯಲ್ಲಿ ಈತನ ಮೃತದೇಹ ಪತ್ತೆಯಾಗಿದೆ. ಸುದ್ಧಿ ತಿಳಿದ ರೈಲ್ವೇ ಪೊಲೀಸರು ಸ್ಥಳಕ್ಕೆ ಆಗಮಿಸಿ ಮುಂದಿನ ಕ್ರಮ ಕೈಗೊಂಡರು.