ಮೂಡುಬಿದರೆ: ಸುವರ್ಣನಗರ (ಬಗ್ಗಜಾಲ್)ದಲ್ಲಿ ರಾಜೀವ್‍ಗಾಂಧಿ ವಸತಿ ನಿಗಮದಿಂದ 25,000ರೂ ಸಾಲ ಪಡೆದುಕೊಂಡು ಆಶ್ರಯ ಮನೆಗಳನ್ನು ನಿರ್ಮಿಸಿರುವ 95 ಮಂದಿ ಫಲಾನುಭವಿಗಳಿಗೆ ಸಾಲ ಮನ್ನಾ ತಿಳುವಳಿಕೆ ಪತ್ರವನ್ನು ಭಾನುವಾರ ವಿತರಿಸಲಾಯಿತು.
ಯುವಜನ ಸೇವೆ ಮತ್ತು ಮೀನುಗಾರಿಕೆ ಸಚಿವ ಕೆ.ಅಭಯಚಂದ್ರ ಜೈನ್ ಸಾಲಮನ್ನಾ ಪತ್ರ ವಿತರಿಸಿ, ಬಡವರ ಪರವಾಗಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಬಡವರಿಗಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿರುತ್ತಾರೆ. ಅವುಗಳಲ್ಲಿ ಸಾಲ ಮನ್ನಾ ಯೋಜನೆಯೂ ಒಂದಾಗಿದ್ದು ಇವುಗಳ ಬಗ್ಗೆ ಜನಸಾಮಾನ್ಯರು ತಿಳಿದುಕೊಳ್ಳಬೇಕಾಗಿದೆ. ಮೂಡುಬಿದರೆ ಪುರಸಭಾ ವ್ಯಾಪ್ತಿಯಲ್ಲಿ ಅಲಂಗಾರು, ಮಾರೂರು ಹಾಗೂ ಸುವರ್ಣನಗರದಲ್ಲಿ ಆಶ್ರಯ ಯೋಜನೆಯಲ್ಲಿ ಸಾಲ ಪಡೆದುಕೊಂಡು ಮನೆ ನಿರ್ಮಿಸಿದವರ ಎಲ್ಲಾ ಸಾಲಗಳನ್ನು ಮನ್ನಾ ಮಾಡಲಾಗುವುದು. ಅದರಂತೆ ಸುವರ್ಣನಗರದ 95 ಫಲಾನುಭವಿಗಳ 55 ಲಕ್ಷ ರೂ ಸಾಲವನ್ನು ಮಾಡಲಾಗುತ್ತಿದೆ. ಅಲ್ಲದೆ ಕಾಲನಿಗೆ ಬೇಕಾದ ನೀರಿನ ಮತ್ತು ರಸ್ತೆಯ ವ್ಯವಸ್ಥೆಗಳನ್ನು ಪುರಸಭೆಯಿಂದ ಒದಗಿಸಲಾಗಿದೆ ಎಂದು ತಿಳಿಸಿದರು.
ಪುರಸಭಾ ಅಧ್ಯಕ್ಷೆ ರೂಪಾ ಸಂತೋಷ್ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಸದಸ್ಯರುಗಳಾದ ಬಾಹುಬಲಿ ಪ್ರಸಾದ್, ರತ್ನಾಕರ ದೇವಾಡಿಗ, ಅಬ್ದುಲ್ ಬಶೀರ್, ಎಲಿಜಾ ಮಿನೇಜಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ, ಆಶ್ರಯ ಸಮಿತಿಯ ಸದಸ್ಯರುಗಳಾದ ಸುಂದರ ಪೂಜಾರಿ ಮತ್ತು ಸತೀಶ್ ಕೋಟ್ಯಾನ್ ಉಪಸ್ಥಿತರಿದ್ದರು.
ಅನಿಲ್ ಸಿಪ್ರಿಯಾನ್ ಲೊಬೋ ಸ್ವಾಗತಿಸಿದರು. ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಪಿಎಂಸಿ ಸದಸ್ಯ ಜೊಸ್ಸಿ ಮಿನೇಜಸ್ ಕಾರ್ಯಕ್ರಮ ನಿರೂಪಿಸಿ, ಫಲಾನುಭವಿಗಳ ವರದಿ ನೀಡಿದರು. ಅಂಗನವಾಡಿ ಕಾರ್ಯಕರ್ತೆ ಸುಮತಿ ವಂದಿಸಿದರು.