ಬಂಟ್ವಾಳ, ಮಾ. 17: ಕೇಂದ್ರ ಸರಕಾರದ ಸ್ಮಾರ್ಟ್ ವಿಲೇಜ್ ಯೋಜನೆಯಲ್ಲಿ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ಕಳ್ಳಿಗೆ ಗ್ರಾಮವನ್ನು ಸೇರ್ಪಡೆ ಮಾಡುವಂತೆ ಗ್ರಾ.ಪಂ. ಉಪಾಧ್ಯಕ್ಷ ಪುರುಷ ಎನ್. ಸಾಲಿಯಾನ್ ನೆತ್ರೆಕೆರೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಬರೆದ ಪತ್ರಕ್ಕೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯ ಸಂಬಂಧಪಟ್ಟ ಇಲಾಖೆಗೆ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಿ ಪತ್ರ ಬರೆದಿದೆ.
ಕಳ್ಳಿಗೆ ಗ್ರಾಮದ ದರಿಬಾಗಿಲು-ನೆತ್ರೆಕೆರೆ-ಬೆಂಜನಪದವು- ಜಾರಂದಗುಡ್ಡೆ – ಕನಪಾಡಿ- ಬೆದ್ರಾಡಿವರೆಗಿನ ಸಂಪರ್ಕದ 6 ಕಿ.ಮೀ. ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಸಹಿತ ದಿನಕ್ಕೆ ಸಹಸ್ರಾರು ಮಂದಿ ಸಂಚರಿಸುತ್ತಾರೆ. ತೀರಾ ಹದಗೆಟ್ಟು ವಾಹನ ಸಂಚಾರ, ಕಾಲುನಡಿಗೆ ಅಸಾಧ್ಯವಾಗಿದೆ.

ಗ್ರಾಮ ಪಂಚಾಯತ್ಗೆ ರಸ್ತೆ ದುರಸ್ತಿ ಬಗ್ಗೆ ದಿನವೊಂದಕ್ಕೆ ನೂರಾರು ದೂರುಗಳು ಬರುತ್ತಿದೆ. ರಸ್ತೆಯ ದುಸ್ಥಿತಿಯಿಂದ ಜನ ಗ್ರಾಮ ಪಂಚಾಯತ್ ಬಗ್ಗೆ ನಂಬಿಕೆ ಕಳೆದುಕೊಳ್ಳುತ್ತಿದೆ. ಗ್ರಾಮ ಸಭೆ, ವಾರ್ಡ್ ಸಭೆ ನಡೆಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಸಭೆ ನಡೆಸಿದರೆ ಜನ ರಸ್ತೆಯ ಬಗ್ಗೆ ಬೇಡಿಕೆ ಮಂಡಿಸುತ್ತಾರೆ. ರಸ್ತೆ ಅಭಿವೃದ್ದಿಯ ಯಾವ ಕೆಲಸವನ್ನು ಮಾಡಲು ಸಾಧ್ಯವಾಗಿಲ್ಲ.
ಹಾಗಾಗಿ ಸ್ಮಾರ್ಟ್ ಗ್ರಾಮ ಸೇರ್ಪಡೆ ಮೂಲಕ ಅನುದಾನ ನೀಡಿ ರಸ್ತೆ ಅಭಿವೃದ್ದಿ ಮಾಡಿಸಲು ಮನವಿ ಮಾಡಿದ್ದಾಗಿ ತಿಳಿಸಿದ್ದಾರೆ.
ಗ್ರಾಮವು 6 ಸಾವಿರ ಹೆಕ್ಟೇರ್ ವಿಸ್ತೀರ್ಣ ಹೊಂದಿದ್ದು, ಶೇ. 80 ಭೂಭಾಗ ಕೃಷಿಯಿಂದ ಕೂಡಿದೆ. ನೂರಕ್ಕೂ ಅಕ ಎಕ್ರೆ ವಿಸ್ತೀರ್ಣ ಸರಕಾರಿ ಜಮೀನಿದೆ.ಗ್ರಾಮದಲ್ಲಿ ಅಕ ಸಂಖ್ಯೆಯ ಕೃಷಿಕೂಲಿ ಕಾರ್ಮಿ ಕರಿದ್ದಾರೆ. ಹಾಗಾಗಿ ಸ್ಮಾರ್ಟ್ ವಿಲೇಜ್ ಗ್ರಾಮ ಶಿಫಾರಸಿಗೆ ಯೋಗ್ಯವಾಗಿದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.
ಗ್ರಾಮದ ಮಧ್ಯಭಾಗದಲ್ಲಿ ಮಂಗಳೂರು-ಬೆಂಗಳೂರು ಸಂಪರ್ಕದ ರೈಲ್ವೆ ಹಳಿ ಹಾದುಹೋಗುತ್ತದೆ. ಇಲ್ಲಿನ ಬ್ರಹ್ಮರಕೂಟ್ಲು, ನೆತ್ರಕೆರೆಯಲ್ಲಿ ರೈಲ್ವೆ ಸ್ಟೇಷನ್ ನಿರ್ಮಿಸಿ ಬಸ್ಸನ್ನೇ ಅವಲಂಬಿಸಿರುವ ನೂರಾರು ಮಂದಿಗೆ ರೈಲ್ವೆ ಸಂಚಾರಕ್ಕೂ ಅವಕಾಶ ಕಲ್ಪಿಸಬೇಕು ಎಂದು ಕೋರಿದ್ದಾರೆ.
ಕೇಂದ್ರ ಸರಕಾರದಿಂದ ರಸ್ತೆ ಅಭಿವೃದ್ದಿಗೆ ಬರುವ ಸಿಆರ್ಎಫ್, ನಬಾರ್ಡ್ , ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯ ಯಾವುದೇ ಅನುದಾನ ಕಳ್ಳಿಗೆ ಗ್ರಾಮಕ್ಕೆ ಬಂದಿಲ್ಲ ಎಂದು ಪತ್ರದಲ್ಲಿ ನಮೂದಿಸಿದ್ದಾರೆ. ಗ್ರಾಮದ ಅಭಿವೃದ್ದಿ ಉದ್ದೇಶಕ್ಕೆ ಪ್ರಧಾನ ಮಂತ್ರಿಗಳನ್ನು ಭೇಟಿಯಾಗಿ ಮಾತನಾಡಲು ಅವಕಾಶ ಕಲ್ಪಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದ್ದಾರೆ.