ಬಂಟ್ವಾಳ: ತಾಲ್ಲೂಕಿನ ತುಂಬೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಎರಡನೇ ಅಣೆಕಟ್ಟೆಗೆ ಸಂಬಂಧಿಸಿದಂತೆ ಮುಳುಗಡೆ ಭೀತಿ ಎದುರಿಸುತ್ತಿರುವ ಸಂತ್ರಸ್ತರು ಮತ್ತು ರೈತ ಸಂಘದ ಪ್ರತಿಭಟನೆ ಹಿನ್ನೆಲೆಯಲ್ಲಿ ಸಜಿಪಮುನ್ನೂರುಗೆ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಇದೇ 23ರಂದು ಬೆಳಿಗ್ಗೆ ಭೇಟಿ ನೀಡಿ ಮಾತುಕತೆ ನಡೆಸಲಿದ್ದಾರೆ.
ಇಲ್ಲಿನ ತುಂಬೆ, ಸಜಿಪಮುನ್ನೂರು, ನರಿಕೊಂಬು, ಕಳ್ಳಿಗೆ, ಬಿ.ಮೂಡ ಮತ್ತಿತರ ಗ್ರಾಮಗಳಲ್ಲಿ ಮುಳುಗಡೆ ಭೀತಿ ಎದುರಿಸುತ್ತಿರುವ ಕೃಷಿಭೂಮಿ ಸರ್ವೇ ಕಾರ್ಯವನ್ನು ಜಿಲ್ಲಾಧಿಕಾರಿ ಸೂಚನೆಯಂತೆ ಮಂಗಳೂರು ಮಹಾನಗರ ಪಾಲಿಕೆಅಧಿಕಾರಿಗಳು ಇದೇ 8ರಿಂದ ಕೈಗೊಂಡು ಏಳು ಮೀಟರ್ ಮುಳುಗಡೆ ಪ್ರದೇಶಗಳಲ್ಲಿ ಗುರುತು ಹಾಕಲು ಮುಂದಾಗಿತ್ತು. ಇದರಲ್ಲಿ ಮೂವರು ಸರ್ವೆಯರ್ ಮತ್ತು ಮೂವರು ಮನಾಪ ಅಧಿಕಾರಿಗಳು ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.
ಜಮೀನು ಸರ್ವೆಗೆ ಸಂಬಂಧಿಸಿದಂತೆ ಮನಪಾ ಅಧಿಕಾರಿಗಳು ಪ್ರತೀ ಕೃಷಿಕರಿಗೆ ಪ್ರತ್ಯೇಕ ನೋಟೀಸು ನೀಡದೆ ಇಲ್ಲಿನ ಕಂದಾಯ ಇಲಾಖೆಗೆ ಮಾತ್ರ ನೀಡಿದೆ. ಮಾತ್ರವಲ್ಲದೆ ಈಚೆಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಅಣೆಕಟ್ಟೆಗೆ ಸಂಬಂಧಿಸಿದ ಸಭೆ ಬಗ್ಗೆ ಮಾಹಿತಿ ಹಕ್ಕಿನಡಿ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಆರೋಪಿಸಿ ಇಲ್ಲಿನ ರೈತ ಸಂಘ ಮತ್ತು ಹಸಿರುಸೇನೆ ಸಹಿತ ತುಂಬೆ ವೆಂಟೆಡ್ ಡ್ಯಾಂ ಸಂತ್ರಸ್ತರ ಹೋರಾಟ ಸಮಿತಿ ವತಿಯಿಂದ ಇದೇ 18ರಿಂದ ದಿಡೀರ್ ಪ್ರತಿಭಟನೆ ಕೈಗೊಂಡಿದೆ.
ಇದೇ ವೇಳೆ ಸರ್ವೆಗೆ ಬಳಸುವ ಮೌಲ್ಯಯುಕ್ತ ಯಂತ್ರವೊಂದನ್ನು ಕೃಷಿಕರ ಮನೆಯಲ್ಲಿ ತೆಗೆದಿರಿಸಿದ ಬಗ್ಗೆ ಅಧಿಕಾರಿಗಳು ಜಿಲ್ಲಾಧಿಕಾರಿಗೆ ದೂರಿಕೊಂಡ ಹಿನ್ನೆಲೆಯಲ್ಲಿ ಇದೇ 23ರಂದು ಬೆಳಿಗ್ಗೆ ಸಜಿಪಮುನ್ನೂರು ಕೊಪ್ಪಳ ಗದ್ದೆ ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಸಂತ್ರಸ್ತರೊಂದಿಗೆ ಮಾತುಕತೆ ನಡೆಸುವರು ಎಂದು ತಹಶೀಲ್ದಾರ್ ಪುರಂದರ ಹೆಗ್ಡೆ ತಿಳಿಸಿದ್ದಾರೆ.