ಮೂಡುಬಿದರೆ: ವಿಜಯನಗರ ಅರಸರ ಕಾಲದಲ್ಲಿ ನಿರ್ಮಾಣವಾದ, ಬೋವಿ ಸಮಾಜದ ಆಡಳಿತಕ್ಕೆ ಒಳಪಟ್ಟಿರುವರುವ ಕಾರಣಿಕ ಕ್ಷೇತ್ರ ಮಾರಿಗುಡಿಯಲ್ಲಿ (ಶ್ರೀ ಆದಿಶಕ್ತಿ ಮಹಾದೇವಿ ದೇವಸ್ಥಾನ) ದೇವಿಯ ಬಿಂಬಪ್ರತಿಷ್ಠೆ, ಬ್ರಹ್ಮಕಲಶ ಸಂಭ್ರಮ. ಸಂಪೂರ್ಣ ಶಿಲಾಮಯವಾಗಿ ಕಂಗೊಳಿಸುತ್ತಿರುವ ದೇವಸ್ಥಾನವು ಇತಿಹಾಸ ಹಾಗೂ ವರ್ತಮಾನದಲ್ಲಿ ಆದಿಶಕ್ತಿ ಭಕ್ತಿ ಕೊಂಡಿಯಾಗಿ ಕಂಗೊಳಿಸುತ್ತಿದೆ.
ಹನುಮ-ಮಾರಿಯಮ್ಮ:mdb_march29_1 Moola Moorthi

* ನವೀಕೃತ ಶಿಲಾಮಯ ದೇವಳ * ರೂ. 2 ಕೋಟಿ ರೂ ವೆಚ್ಚದಲ್ಲಿ ನವೀಕರಣmdb_march29_1 (1)


ನವೀಕೃತ ಶಿಲಾಮಯ ದೇವಳದಲ್ಲಿ ಮೂಡುಬಿದರೆಯ ಮಾರಿಯಮ್ಮmdb_march29_1 (2)

14ನೇ ಶತಮಾನದ ವಿಗ್ರಹ:
ವಿಜಯನಗರದ ಅರಸರ ಕಾಲಕ್ಕೆ ಅವರ ಸಾಮಂತರಾಗಿದ್ದ ಚೌಟರಸರ ಪ್ರತಿನಿಧಿಗಳಾಗಿ ಶ್ರೀನಿವಾಸ ಮಲ್ಯರ ನಿಯೋಗವೊಂದು ವಿಜಯನಗರಕ್ಕೆ ತೆರಳಿ ವಿವಾದವೊಂದಕ್ಕೆ ಸಂಬಂಧಿಸಿ ಅರಸರ ಮನವೊಲಿಸಿದಾಗ ಪ್ರಕರಣ ಸುಖಾಂತ್ಯ. ಇದಕ್ಕೆ ಪ್ರತಿಯಾಗಿ ಮರಳಿ ಹೊರಟ ಮೂಡುಬಿದರೆಯ ರಾಜ ನಿಯೋಗಕ್ಕೆ ಸಂದ ವಿಜಯನಗರದ ಅರಸರ ವೈಭವದ ಕೊಡುಗೆಗಳ ಸಾಲಿನಲ್ಲಿ ಮೂಡುಬಿದರೆಗೆ ಬಂದ ಬೋವಿ ಸಮಾಜದವರ ಆರಾಧ್ಯ ದೇವಿಯೇ ಆದಿಶಕ್ತಿ ಮಾರಿಯಮ್ಮ. ಮೀನಿನ ಬಲೆಯಲ್ಲಿ ಆನೆಗೊಂದಿಯ ಹೊಳೆಯಲ್ಲಿ ಈ ಆದಿಶಕ್ತಿ ದೊರೆತವಳು ಎನ್ನಲಾಗಿದೆ. ಈ ದೇವಿಯ ವಿಗ್ರಹ ಇಲ್ಲಿಗೆ ಬಂದದ್ದು 14 ನೇ ಶತಮಾನದಲ್ಲಿ ಎಂದು ಹೇಳಲಾಗಿದೆ.
ವಿಜಯನಗರದಿಂದ ಮೂಡುಬಿದರೆಗೆ ಬಂದಾಗ ಈ ಮೂಲ ದೇವಿಯ ವಿಗ್ರಹವನ್ನು ತಂದವರು ವೀರಬೋವಿ. ಮೊದಲು ಈ ವಿಗ್ರಹಕ್ಕೆ ಪೇಟೆಯ ಹಳೆಯ ಬಸ್ ನಿಲ್ದಾಣದ ಬಳಿ ದೇವಾಲಯ ನಿರ್ಮಿಸಿ ಪೂಜಿಸಲಾಗಿತ್ತು. ಮುಂದೆ ಸ್ವರಾಜ್ಯ ಮೈದಾನದಲ್ಲಿ ಹೊಸ ದೇವಾಲಯ ನಿರ್ಮಾಣವಾದಾಗ ಕಾರಣಾಂತರಗಳಿಂದ ಅಲ್ಲಿ ದೇವಿಯ ಹೊಸ ಮೂರ್ತಿ ಪ್ರತಿಷ್ಠಾಪನೆಯಾಯಿತು. ಬೋವಿ ಸಮಾಜದವರ ಮೂಲ ಮೂರ್ತಿಗೆ ಕ್ರಮೇಣ ಇದೇ ಸ್ವರಾಜ್ಯ ಮೈದಾನದಲ್ಲಿ ನೂತನ ಮಾರಿಗುಡಿಯ ಎಡಭಾಗದಲ್ಲಿ ರಸ್ತೆಯ ಪಕ್ಕದಲ್ಲಿ ಗುಡಿ ಕಟ್ಟಲಾಯಿತೆಂದೂ ಪಕ್ಕದಲ್ಲೇ ಮತ್ತೆ ಹೊಸದಾಗಿ ಈ ಪುರಾತನ ಆದಿಶಕ್ತಿಗೆ ದೇವಸ್ಥಾನವನ್ನು ಕಟ್ಟುವಲ್ಲಿ ಅಬ್ಬುಬೋವಿ ಮುಂದಾಳುವಾಗಿ ಶ್ರಮಿಸಿದ್ದರು ಎನ್ನಲಾಗಿದೆ.
ಆಸೀನ ಭಂಗಿಯಲ್ಲಿರುವ ಈ ಶಿಲಾ ವಿಗ್ರಹದ ದೇವಿ ಚತುರ್ಭುಜೆ, ಬಲಕೈಗಳಲ್ಲಿ ತ್ರಿಶೂಲ, ಖಡ್ಗ, ಎಡಕೈಗಳಲ್ಲಿ ಢಮರು, ಪಾನಪಾತ್ರೆ, ಹಿಂಬಂದಿಯಲ್ಲಿ ಪಂಚನಾಗರ ಹೆಡೆಯಿದೆ. ಕಾಳೀ ಕಲ್ಪ ಈಶ್ವರ ಅಂಶವೆನ್ನಲಾಗುವ ದೇವಿ ಚಂಪಕ ಹೇಮವರ್ಣದ ಸಮುದ್ರರತ್ನವಾಗಿದ್ದಾಳೆ. ಸೃಷ್ಟಿ, ಸ್ಥಿತಿ, ಲಯ ಹೀಗೆ ಮೂರು ಅವತಾರಗಳ ಸ್ವರೂಪ, ಸುವರ್ಣ, ವಸ್ತ್ರ, ಪುಷ್ಪಾದಿಗಳ ಪ್ರಿಯೆ ಎನ್ನುವುದು ತಿಳಿದು ಬರುತ್ತದೆ.
60 ವರ್ಷಗಳ ಹಿಂದೆ ಇದೇ ಮಾರಿಗುಡಿಯಲ್ಲಿ (ಮೇ 13-17,1966)ಅಷ್ಟಮಂಗಳ ಪ್ರಶ್ನೆಯಲ್ಲಿ ಜ್ಯೋತಿಷಿ ಶ್ರೀ ಕುಂಞಿ ಕಣ್ಣನ್ ಪೊದುವಾಳರು ಹೇಳಿದಂತೆ ಕಾಲಗಣನೆ ಮಾಡಿದರೆ ದೇವಿಯ ಆಗಮನವಾಗಿ ಇಂದಿಗೆ 944 ವರ್ಷಗಳಾಗುತ್ತಿವೆ. ಪ್ರಾರ್ಥನೆಗೆ ತಕ್ಕಂತೆ ಫಲವೀಯುವ ದೇವಿ ಇಲ್ಲಿ ಮಹಿಳೆಯ ಚಿನ್ನಾಭರಣಗಳಿಂದ ಅಲಂಕರಿಸಿಕೊಂಡು ತನ್ನ ದರ್ಶನಕ್ಕೆ ಬರುವುದನ್ನು ಇಷ್ಟಪಡುವುದಿಲ್ಲ ಎನ್ನಲಾಗಿದೆ. ಇದೊಂದು ದೋಷ ನಿವೃತ್ತಿಯ ಕ್ಷೇತ್ರವಾಗಿ ಬೆಳಗಲಿದೆ ಎನ್ನುವುದನ್ನೂ ಹೇಳಲಾಗಿದೆ. ಪ್ರಸ್ತುತ ಬೋವಿ ಸಮಾಜದವರೇ ಮುಂದಾಳುಗಳಾಗಿ ಸನ್ನಿಧಿಯ ಸೇವೆಯನ್ನು ಮುಂದುವರೆಸುತ್ತಿದ್ದಾರೆ.
ಹಲವು ದಶಕಗಳ ಕನಸು ಇದೀಗ ಕೊನೆಗೂ ನನಸಾಗಿದೆ. ಅಂದಾಜು ರೂ. 2 ಕೋಟಿ ರೂ ವೆಚ್ಚದಲ್ಲಿ ಶಿಲಾಮಯವಾಗಿ ಅತ್ಯಂತ ಮನೋಹರವಾಗಿ ನವೀಕರಣಗೊಂಡ ದೇವಾಲಯ ಇದೀಗ ದೇವಿಯ ಪುನಃ ಪ್ರತಿಷ್ಠೆಗೆ ಸಜ್ಜಾಗಿದೆ. ವಾಸ್ತು ತಜ್ಞ ಪ್ರಸಾದ್ ಮುನಿಯಂಗಳ ಅವರ ಮಾರ್ಗದರ್ಶನದಲ್ಲಿ ಮೂಡುಬಿದಿರೆಯ ಜಿ.ರಾಮದಾಸ ಶೆಣೈ ದೇವಾಲಯ ನಿರ್ಮಾಣದ ತಾಂತ್ರಿಕ ಮೇಲ್ವಿಚಾರಣೆ ನಡೆಸಿದ್ದಾರೆ. ಕಾರ್ಕಳದ ಶಿಲ್ಪಿ ಮಂಜುನಾಥ ಅವರ ಸಿಬಂದಿಗಳು ಶಿಲಾಮಯ ದೇಗುಲವನ್ನು ಅರಳಿಸಿದ್ದಾರೆ.
ಗರ್ಭಗೃಹ, ದರ್ಶನ ಮಂಟಪ,ಮುಖ ಮಂಟಪ, ಉಚ್ಚಂಗಿ ಮಂಟಪ, ಎಡನಾಳಿ ಹೊಂದಿರುವ ದೇಗುಲಕ್ಕೆ ಮೂಡುಬಿದಿರೆಯ ಎಂ.ಎಸ್. ಜಗದೀಶ ಆಚಾರ್ಯ, ಶಿಲ್ಪಿ ನಾರಾಯಣ ಆಚಾರ್ಯ ಕಾಷ್ಠ ಶಿಲ್ಪದ ಕೆಲಸಗನ್ನು ನಾಜೂಕಿನಿಂದ ನಿರ್ವಹಿಸಿದ್ದಾರೆ.
ಈಗಿನ ಸ್ಥಳವನ್ನು ಎತ್ತರಿಸಿ ಕಟ್ಟಲಾದ ದೇವಾಲಯವೂ ಅತ್ಯಂತ ಎತ್ತರವಾಗಿರುವುದು ವಿಶೇಷ. ಇಲ್ಲಿನ ಏಕಶಿಲಾ ಸ್ಥಂಬಗಳು, ಭಿತ್ತಿ ಸ್ಥಂಭಗಳು, ನಾಲ್ಕು ಅಡಿ ಎತ್ತರದ ಕೃಷ್ಣ ಶಿಲೆಯ ಪಾಣಿಪೀಠ, ಎಲ್ಲವೂ ವಿಶೇಷವೇ. ಎದುರು ಗುಳಿಗ ಸ್ಥಾನ, ಹಿಂದೆ ನಾಗಾಲಯ, ದೈವಸ್ಥಾನ , ಕಲಾತ್ಮಕ ಬಾವಿ ಹೀಗೆ ನೂತನ ದೇವಾಲಯ ನಯನ ಮನೋಹರವಾಗಿದೆ.

ಪುನಃಪ್ರತಿಷ್ಠೆ, ಬ್ರಹ್ಮ ಕಲಶೋತ್ಸವ:
ನವೀಕೃತ ಶಿಲಾಮಯ ದೇವಸ್ಥಾನದಲ್ಲಿ ಶ್ರೀ ದೇವಿಯ ಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಮಾ 28ರಿಂದ 31ರವರೆಗೆ ನಡೆಯಲಿದೆ. ಬಳಿಕ ವರ್ಷಾವಧಿ ರಾಶಿಪೂಜಾ ಮಹೋತ್ಸವ ಎ5ರಿಂದ 8ರವರೆಗೆ ನಡೆಯಲಿವೆ.
ಭಕ್ತಾದಿಗಳ ಸಹಕಾರದಿಂದ ಶ್ರೀಧರ ಬೋವಿ ಅಧ್ಯಕ್ಷತೆಯಲ್ಲಿ ಎಂ. ಉಮೇಶ ಬೋವಿ ( ಪ್ರಧಾನ ಕಾರ್ಯದರ್ಶಿ) ಎಂ.ಲಕ್ಮಣ ಬೋವಿ (ಕಾರ್ಯದರ್ಶಿ ) ಎಂ.ಸುಂದರ ಬೋವಿ (ಕೋಶಾಧಿಕಾರಿ) ಅವರ ಸಮಿತಿ ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಂಡಿದೆ.

ಹನುಮ-ಮಾರಿಯಮ್ಮ:
ಮೂಡುಬಿದಿರೆಯ ಸೀಯಾಳಾಭಿಷೇಕ ಪ್ರಿಯ ಆಂಜನೇಯನಿಗೂ ಆದಿಶಕ್ತಿಗೂ ಅನನ್ಯ ಬಾಂಧವ್ಯ ಇದೆ ಎನ್ನುವುದು ಇತಿಹಾಸದ ಪುಟಗಳಲ್ಲಿಯೂ ಕಾಣಸಿಗುತ್ತದೆ. ಆದಿಶಕ್ತಿಯ ಮೂಡುಬಿದಿರೆ ಬಂದ ಸಂದರ್ಭವೇ ಆಂಜನೇಯನೂ ಅದೇ ವಿಜಯನಗರದಿಂದ ಮೂಡುಬಿದಿರೆಗೆ ಬಂದದ್ದು.ಬೋವಿ ಸಮಾಜದವರಿಗೂ ಈ ಆಂಜನೇಯ ಆರಾಧ್ಯ. ದೇವಿಯ ವರ್ಷವಧಿ ರಾಶಿ ಪೂಜೆಗೆ ಹನುಮಂತ ದೇವಸ್ಥಾನದಿಂದ ಬಂಗಾರ ತರುವ ಸಂಪ್ರದಾಯ ಹಿಂದಿನಿಂದೂ ಇದೆ. ರಾಶಿ ತರುವುದು ಮಹಾಮ್ಮಾಯಿ ದೇವಸ್ಥಾನದಿಂದಲೇ.

By suddi9

Leave a Reply

Your email address will not be published. Required fields are marked *