ಬಂಟ್ವಾಳ: ಹಿರಿಯ ಯಕ್ಷಗಾನ ಕಲಾವಿದ ಧರ್ಣಪ್ಪ ಶೆಟ್ಟಿ ಪುಂಜಾಲಕಟ್ಟೆ (87) ಅವರು ಎ.3ರಂದು ರಾತ್ರಿ ಮೇರಮಜಲಿನ ಶ್ರೀಮಾತಾ ಲಕ್ಷಣಿ ವೃದ್ಧಾಶ್ರಮದಲ್ಲಿ ನಿಧನ ಹೊಂದಿದರು.
ಮೂಲತಃ  ಪುಂಜಾಲಕಟ್ಟೆ ಸಮೀಪದ ಕಾಡಿಮಾರ್ನವರಾದ ಧರ್ಣಪ್ಪ ಶೆಟ್ಟಿ ಅವರು ಮೂರನೇ ಕ್ಲಾಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಯಕ್ಷಗಾನ ಮೇಳದಲ್ಲಿ ಸೇರಿಕೊಂಡು ಬಳಿಕ ಯಕ್ಷಗಾನ ಕಲೆಯನ್ನು ಕರಗತ ಮಾಡಿಕೊಂಡರು. ಬೋಳಾರ ನಾರಾಯಣ ಶೆಟ್ಟಿ ಅವರ ಗರಡಿಯಲ್ಲಿ ಪಳಗಿದ ಅವರು ಸುಮಾರು 35 ವರ್ಷಗಳ ಕಾಲ ತೆಂಕುತಿಟ್ಟಿನ ಹೆಚ್ಚಿನ ಎಲ್ಲಾ ಮೇಳಗಳಲ್ಲಿ ವ್ಯವಸಾಯ ನಡೆಸಿದ್ದರು.

0404pktG1(Dharnappa Shetty)
ಕುಂಡಾವು ಮೇಳದ ಮೂಲಕ ರಂಗ ಪ್ರವೇಶಿಸಿದ ಅವರು ಕರ್ನಾಟಕ, ದೇಲಂಪುರಿ, ಸುಬ್ರಹ್ಮಣ್ಯ,ಬಪ್ಪನಾಡು, ಅರುವ, ಕಾಂತಾವರ, ಪುತ್ತೂರು, ಸುರತ್ಕಲ್, ಮಧೂರು ಮೇಳಗಳಲ್ಲಿ ತಿರುಗಾಟ ನಡೆಸಿದ್ದಲ್ಲದೇ ಹಲವಾರು ಊರುಗಳ ಸಂಘ ಸಂಸ್ಥೆಗಳ ಯಕ್ಷಗಾನ ಪ್ರದರ್ಶನಗಳಲ್ಲಿ ವೇಷ ಮಾಡಿದ್ದರು. ಪೌರಾಣಿಕ ಮತ್ತು ಸಾಮಾಜಿಕ ಯಕ್ಷಗಾನಗಳಲ್ಲಿ ಪಾತ್ರ ವಹಿಸುತ್ತಿದ್ದ ಅವರು ಹೆಚ್ಚಾಗಿ ಖಳ ಪಾತ್ರಗಳಲ್ಲಿ ಮಿಂಚಿದ್ದರು. ಅವರ ಕಂಸ, ಕಾಲಜಂಘ, ಶುಂಭ, ಮಹಿಷಾಸುರ, ಘೋರರೂಪಿ, ಭಸ್ಮಾಸುರ ಪಾತ್ರಗಳಲ್ಲದೇ ಅರ್ಜುನ, ಭೀಮ, ಕಾರ್ತವೀರ್ಯ,ಯಮ, ವೀರವರ್ಮ, ಬಾಹುಕ, ಭೈರಾಗಿ, ವಾವರ, ಕಾಂತಣ್ಣಾಕಾರಿ ಪಾತ್ರಗಳನ್ನು ವಹಿಸಿದ್ದರು. ಅರುವ ಮೇಳದ ಪರಕೆದ ಪಿಂಗಾರ ಪ್ರಸಂಗದ ಕಾಡುಗಳ್ಳನ ಪಾತ್ರ ಅವರಿಗೆ ಖ್ಯಾತಿ ತಂದಿತ್ತು. ತಮ್ಮ 76ರ ಹರೆಯದಲ್ಲೂ ಪಾತ್ರ ವಹಿಸುತ್ತಿದ್ದ ಅವರು ಅನಾರೋಗ್ಯ ಬಳಿಕ ನಿವೃತ್ತಿ ಹೊಂದಿದ್ದರು. ಹಲವಾರು ಸಂಘ ಸಂಸ್ಥೆಗಳಿಂದ ಪ್ರಶಸ್ತಿ, ಸಮ್ಮಾನ ಪಡೆದಿದ್ದರು. ಮಾಜಿ ರಕ್ಷಣಾ ಸಚಿವ ಜಾರ್ಜ್  ಫೆರ್ನಾಂಡೀಸ್ ಅವರೊಂದಿಗೆ ಯಕ್ಷಗಾನ ಪಾತ್ರ ವಹಿಸಿದ್ದು  ಹೆಗ್ಗಳಿಕೆಯಾಗಿತ್ತು. ಪುಂಜಾಲಕಟ್ಟೆ ಶ್ರೀ ಶಾರದೋತ್ಸವದಲ್ಲಿ  ನಿರಂತರ 25 ವರ್ಷಗಳ ಕಾಲ ಪಾತ್ರ ವಹಿಸಿದ್ದರು.
ನಿವೃತ್ತಿ ನಂತರ ಅಸಹಾಯಕರಾಗಿ ಶ್ರೀಮಾತಾ ಲಕ್ಷಣಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದರು. ಮೃತರ ಅಂತಿಮ ಸಂಸ್ಕಾರ ಆಶ್ರಮದಲ್ಲಿ ನೆರವೇರಿತು.

By suddi9

Leave a Reply

Your email address will not be published. Required fields are marked *