ಬಂಟ್ವಾಳ: ಯುವ ಜನರಿಗೆ ನಾಯಕತ್ವ, ವ್ಯಕ್ತಿತ್ವ ವಿಕಸನ ತರಬೇತಿಯೊಂದಿಗೆ ಮಾನವೀಯತೆಯನ್ನು ಕಲಿಸಿಕೊಡುವ ಜಗತ್ತಿನ ಏಕೈಕ ಸಂಸ್ಥೆಯಿದ್ದರೆ ಅದು ಜೇಸಿಐ ಮಾತ್ರ. ತನ್ನ ಬೆಳವಣಿಗೆಯೊಂದಿಗೆ ಸಮಾಜದ ಬೆಳೆವಣಿಗೆಗೆ ಜೇಸಿ ಸಂಸ್ಥೆ ನೀಡುತ್ತಿರುವ ಕೊಡುಗೆ ಅಪಾರ ಎಂದು ಜೇಸಿ ತರಬೇತುದಾರ ಬಿ.ರಾಮಚಂದ್ರ ರಾವ್ ಹೇಳಿದರು. ಜೇಸಿಐ ಬಂಟ್ವಾಳದ ವತಿಯಿಂದ ಬಿ.ಸಿ.ರೋಡಿನ ಯುವವಾಹಿನಿ ಸಭಾಂಗಣದಲ್ಲಿ ಭಾನುವಾರ ಜೇಸಿ ಸದಸ್ಯರಿಗೆ ನಡೆದ ತರಬೇತಿ ಕಾರ್ಯಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಜೇಸಿಐ ಬಂಟ್ವಾಳದ ಅಧ್ಯಕ್ಷ ಸಂತೋಷ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಯುವ ಜೇಸಿ ವಿಭಾಗದ ವಲಯ ಸಂಯೋಜಕ ರಾಧಕೃಷ್ಣ ಬಂಟ್ವಾಳ ಕಾರ್ಯಗಾರ ಉದ್ಘಾಟಿಸಿದರು. ವೇದಿಕೆಯಲ್ಲಿ ವಲಯ 15ರ ಉಪಾದ್ಯಕ್ಷ ಕೃಷ್ಣ ನಾರಾಯಣ ಮುಳಿಯ, ಪೂರ್ವ ರಾಷ್ಟ್ರೀಯ ನಿರ್ದೇಶಕ ಸಂಪತ್ ಬಿ. ಸುವರ್ಣ ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಲೋಕೇಶ್ ಸುವರ್ಣ ಕಾರ್ಯಗಾರ ಸಂಯೋಜಿಸಿದ್ದರು. ಕಾರ್ಯದರ್ಶಿ ಡಾ. ಬಾಲಕೃಷ್ಣ ಕುಮಾರ್ ವಂದಿಸಿದರು. ಇದೇ ಸಂದರ್ಭ ಬಂಟ್ವಾಳ ತಾಲೂಕು ಪತ್ರಕರ್ತರ ಸಂಘದ ರಜತ ವರ್ಷಚರಣೆಯ ಪ್ರಯುಕ್ತ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಪೋಡಿಯಂನ್ನು ಕೊಡುಗೆಯಾಗಿ ನೀಡಲಾಯಿತು.