ಬಂಟ್ವಾಳ: ನಿರಂತರ ಟ್ರಾಫಿಕ್ ಜಾಮ್ನಿಂದ ಸಾರ್ವಜನಿಕರು ಹಾಗೂ ವಾಹನ ಚಾಲಕರು ಇನ್ನಿಲ್ಲದ ಸಂಕಷ್ಟ ಪಡೆಯುತ್ತಿದ್ದ ಬಿ.ಸಿ.ರೋಡ್, ಮೆಲ್ಕಾರ್, ನರಹರಿ ಪ್ರದೇಶಗಳಲ್ಲಿ ರಸ್ತೆಗಳನ್ನು ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಡುವ ಮೂಲಕ ಸಾರ್ವತ್ರಿಕ ಪ್ರಶಂಸೆಗೆ ಪಾತ್ರರಾಗಿರುವ ಬಂಟ್ವಾಳ ಟ್ರಾಫಿಕ್ ಎಸ್ಸೈ ಚಂದ್ರಶೇಕರಯ್ಯ ಶನಿವಾರ ಪಾಣೆಮಂಗಳೂರಿನ ಕಲ್ಲುರ್ಟಿ ದೈವಸ್ಥಾನ ಪ್ರದೇಶದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಸಮಸ್ಯೆ ನಿವಾರಣೆಗೆ ಮುಹೂರ್ತ ಹಾಡಿದ್ದಾರೆ.

ಬಿ.ಸಿ.ರೋಡ್, ಮೆಲ್ಕಾರ್, ನರಹರಿ ಪ್ರದೇಶಗಳಲ್ಲಿ ನಿರಂತರವಾಗಿ ಉಂಟಾಗುತ್ತಿದ್ದ ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರು ಇನ್ನಿಲ್ಲದ ಸಂಕಷ್ಟ ಎದುರಿಸುತ್ತಿದ್ದರು. ಇದನ್ನು ಮನಗಂಡ ಎಸ್ಸೈ ಚಂದ್ರಶೇಕಯ್ಯ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ದಾನಿಗಳ ನೆರವಿನೊಂದಿಗೆ ಈ ಭಾಗದ ರಸ್ತೆಯನ್ನು ಅಗಲೀಕರಿಸುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ. ಈ ಎಲ್ಲ ಭಾಗದ ಟ್ರಾಫಿಕ್ ಸಮಸ್ಯೆ ಬಹುತೇಕ ನಿವಾರಣೆಯಾದರೂ ಪಾಣೆಮಂಗಳೂರು ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ರಸ್ತೆಯಲ್ಲಿ ನಿರಂತರ ಟ್ರಾಫಿಕ್ ಜಾಮ್ ಕಿರಿಕಿರಿ ಸಾರ್ವಜನಿಕರನ್ನು ಹಾಗೂ ವಾಹನ ಸವಾರರನ್ನು ಕಾಡುತ್ತಿತ್ತು. ಈ ಬಗ್ಗೆ ಸಾರ್ವಜನಿಕರ ಹಾಗೂ ವಾಹನ ಸವಾರರ ಬೇಡಿಕೆಯನ್ನು ಮನಗಂಡ ಎಸ್ಸೈ ಚಂದ್ರಶೇಕರಯ್ಯ, ಸ್ಥಳೀಯ ಗ್ರಾಮ ಪಂಚಾಯತ್ ಹಾಗೂ ದಾನಿಗಳ ನೆರವಿನೊಂದಿಗೆ ಕಲ್ಲುರ್ಟಿ ದೈವಸ್ಥಾನದ ಮುಂಭಾಗದ ರಸ್ತೆಯ ಅಗಲೀಕಣಕ್ಕೂ ಮುಂದಾಗಿದ್ದಾರೆ.
ಸ್ಥಳೀಯ ಗ್ರಾಮ ಪಂಚಾಯತ್ನ ನೆರವಿನೊಂದಿಗೆ ಕಲ್ಲುರ್ಟಿ ದೇವಾಲಯದ ಎದುರಿನ ರಸ್ತೆ ಬದಿಯಿದ್ದ ಅನಧಿಕೃತ ಅಂಗಡಿಗಳಿಗೆ ಸೂಕ್ತ ವ್ಯವಸ್ಥೆ ಹಾಗೂ ಆಟೊ ನಿಲ್ದಾಣಕ್ಕೆ ಪ್ರತ್ಯೇಕ ಸ್ಥಳ ಒದಗಿಸುವ ಮೂಲಕ ರಸ್ತೆ ಅಗಲೀಕರಣಕ್ಕೆ ಚಾಲನೆ ನೀಡಿದ್ದಾರೆ. ಜೆಸಿಬಿ ಯಂತ್ರದ ಮೂಲಕ ರಸ್ತೆ ಬದಿಯ ಹೊಂಡಗಳಿಗೆ ಮಣ್ಣು ಹಾಕಿ ಮುಚ್ಚುವ ಮೂಲಕ ರಸ್ತೆ ಅಗಲೀಕರಣ ನಡೆಸಲಾಯಿತು. ಕಾಮಗಾರಿ ಪೂರ್ಣಗೊಂಡ ಬಳಿಕ ಇಲ್ಲಿನ ಟ್ರಾಫಿಕ್ ಸಮಸ್ಯೆಯೂ ಬಗೆಹರಿಯಲಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.