ಶಿಕ್ಷಣದಲ್ಲಿ ಕೌಶಲ್ಯ ಅಭಿವೃದ್ಧಿಗೆ ಚಿಂತನೆ: ಟಿ.ಬಿ ಜಯಚಂದ್ರ
ಮೂಡುಬಿದರೆ: ವಿಶ್ವದಲ್ಲಿ ನಡೆಯುವ ಸಂಶೋಧನೆಗಳಲ್ಲಿ ಭಾರತದ ಕೊಡುಗೆ ಅಪಾರ. ಉನ್ನತ ಶಿಕ್ಷಣದಲ್ಲಿ ಸರ್ಕಾರದ ಜೊತೆ ಕೈಜೋಡಿಸುವ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೂ ಹೆಚ್ಚಿನ ಅಧ್ಯತೆ ನೀಡಬೇಕು. ವಿದ್ಯಾರ್ಥಿಗಳಲ್ಲಿ ಸಂಶೋಧನಾ ಮನೋಭಾವನೆ ಬೆಳೆಸುವ ಹಾಗೂ ಶಿಕ್ಷಣವನ್ನು ಮತ್ತಷ್ಟು ಸುಧಾರಿಸುವ ದೃಷ್ಠಿಯಿಂದ ಕೌಶಲ್ಯ ಅಭಿವೃದ್ಧಿಗೆ ಯೋಜನೆಗಳನ್ನು ಜಾರಿಗೊಳಿಸುವಲ್ಲಿ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಟಿ. ಬಿ. ಜಯಚಂದ್ರ ಹೇಳಿದರು.
ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್‍ನ ಆಡಳಿತಕ್ಕೊಳಪಟ್ಟಿರುವ ಮೂಡುಬಿದರೆ ಮಹಾವೀರ ಕಾಲೇಜಿನಲ್ಲಿ ಶುಕ್ರವಾರ ನಡೆದ ಸುವರ್ಣ ಮಹೋತ್ಸವ ಮತ್ತು ಸ್ಥಾಪಕರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕರ್ನಾಟಕದ ಕರಾವಳಿಗೆ ಶೈಕ್ಷಣಿಕ ಗುಣವಿದೆ. ಗುಣಮಟ್ಟದ ಶಿಕ್ಷಣದಿಂದಾಗಿ ರಾಷ್ಟ್ರ-ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಿಭಜಿತ ದ.ಕ ಜಿಲ್ಲೆ ಗಮನಸೆಳೆದಿದೆ. ಇಲ್ಲಿ ಸಿಗುವ ಮೌಲ್ಯಯುತ ಶಿಕ್ಷಣ ದೇಶಕ್ಕೆ ಮಾದರಿ. ದೇಶದಲ್ಲಿ ಮೂರು ಕೋಟಿ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣ ಸಿಗುತ್ತಿದ್ದು, ಪ್ರಮಾಣ ಹೆಚ್ಚಾಗಬೇಕಾದರೆ ದೇಶದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಹೆಚ್ಚಾಗಬೇಕು ಎಂದರು.
ಕೇಂದ್ರದ ಮಾಜಿ ಸಚಿವ, ರಾಜ್ಯ ಸಭಾ ಸದಸ್ಯೆ ಆಸ್ಕರ್ ಫೆರ್ನಾಂಡಿಸ್ ಮಾತನಾಡಿ ಖಾಸಗಿ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣ ನೀಡಬಹುದು ಎಂಬುದನ್ನು ದೇಶಕ್ಕೆ ತೋರಿಸಿಕೊಟ್ಟಿರುವುದು ಮಣಿಪಾಲದ ಶಿಕ್ಷಣ ಸಂಸ್ಥೆಗಳು. ಸೇವಾ ಮನೋಭಾವನೆಯಿಂದ ಹುಟ್ಟಿಕೊಂಡ ಈ ಸಂಸ್ಥೆಗಳು ಇನ್ನಷ್ಟು ಬಲಿಷ್ಠವಾದ ಬೆಳೆಯಬೇಕು. ಮುಂದೆಯೂ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಹೇಳಿದರು.
ಮಣಿಪಾಲ ಅಕಾಡೆಮಿಯ ಕುಲಸಚಿವ ಡಾ. ರಾಮದಾಸ್ ಪೈ ಅಧ್ಯಕ್ಷತೆ ವಹಿಸಿದ್ದರು. ಸಚಿವ, ಮಹಾವೀರ ಕಾಲೇಜು ಆಡಳಿತ ಮಂಡಳಿಯ ಅದ್ಯಕ್ಷ ಕೆ. ಅಭಯಚಂದ್ರ ಜೈನ್ ಕಾಲೇಜಿನ ಸ್ಥಾಪನೆ ಹಾಗೂ ಅದಕ್ಕಾಗಿ ಶ್ರಮಿಸಿದವರನ್ನು ಸ್ಮರಿಸಿ ಕಾಲೇಜನ್ನು ಮತ್ತಷ್ಟು ಆಧುನೀಕರಣಗೊಳಿಸಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುವುದು. ಸಹ ಸಂಸ್ಥೆ ಎಸ್.ಎನ್.ಎಂ ಪೊಲಿಟೆಕ್ನಿಕ್‍ನಲ್ಲಿ 19 ಹುದ್ದೆಗಳು ಖಾಲಿ ಇದ್ದು, ಅದನ್ನು ಭರ್ತಿಗೊಳಿಸುವುದರೊಂದಿಗೆ ಅನುದಾನ ಒದಗಿಸಬೇಕು ಎಂದರು. ಮಣಿಪಾಲ ಅಕಾಡಮಿ ಆಫ್ ಜನರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ. ಎಚ್. ಎಸ್. ಬಲ್ಲಾಳ್ ಮಂಗಳೂರಿನ ಉದ್ಯಮಿ ಮನೋಹರ್ ಎಸ್.ಎನ್ ಮೂಡುಬಿದಿರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜಿನ ಸ್ಥಾಪಕ ಸದಸ್ಯ ಪಿ.ಎಸ್ ಭಟ್ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಘವೇಂದ್ರ ಪ್ರಭು, ಮಹಾವೀರ ಕಾಲೆಜು ಟ್ರಸ್ಟ್‍ನ ಉಪಾದ್ಯಕ್ಷ ಸಂಪತ್ ಸಾಮ್ರಾಜ್ಯ ಮಹಾವೀರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರಮೇಶ್ ಭಟ್, ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಹರೀಶ್, ವಿದ್ಯಾರ್ಥಿ ಸಂಘದ ಅಧ್ಯಕ್ಷ ನೀಲ್ ಕೆನೆತ್‍ವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಇದೇ ಸಂಧರ್ಭದಲ್ಲಿ ನಿವೃತ್ತ ಪ್ರಾಂಶುಪಾಲರು, ವರ್ಗಾಯುತ ಅಧ್ಯಾಪಕರು, ಕಚೇರಿ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು. ಸಂಪತ್ ಸಾಮ್ರಾಜ್ಯ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಶೇಖರ್ ದೀಕ್ಷಿತ್ ವರದಿ ವಾಚಿಸಿದರು. ಗ್ರಂಥ ಪಾಲಕಿ ನಳಿನಿ ವಂದಿಸಿದರು. ಆಶಾ ಶಾಲೆಟ್ ಡಿ’ಸೋಜ ಕಾರ್ಯಕ್ರಮ ನಿರ್ವಹಿಸಿದರು.
—-