ಕಾರ್ಮಿಕನ ಮೈಮೇಲೆ ಬಂದ ‘ಆವೇಶ ‘
ಬಂಟ್ವಾಳ:ತಾಲ್ಲೂಕಿನ ನರಿಕೊಂಬು ಗ್ರಾಮದ ಪೆÇಯಿತ್ತಾಜೆ ಎಂಬಲ್ಲಿ ಮಂಗಳವಾರ ಮಧ್ಯಾಹ್ನ ಕಾರ್ಮಿಕರಿಬ್ಬರು ಮರ ಕಡಿಯುತ್ತಿದ್ದ ವೇಳೆ ತುಳುನಾಡಿನ ಕಾರಣಿಕ ದೈವವೊಂದರ ಕಬ್ಬಿಣದ ಹಳೆಯ ತ್ರಿಶೂಲ ಪತ್ತೆಯಾಗಿ ಮರದ ಗೆಲ್ಲು ಕಡಿದ ಕಾರ್ಮಿಕರೊಬ್ಬರ ಮೈಮೇಲೆ ‘ದೈವ ದರ್ಶನ’ ಆವೇಶ ಬಂದ ಘಟನೆ ನಡೆದಿದೆ.
ಇಲ್ಲಿನ ನಿವಾಸಿ ಶ್ರೀಧರ ನಾಯ್ಕ್ ಎಂಬವರ ಜಮೀನಿನ ಗುಡ್ಡದಲ್ಲಿ ಮಂಗಳವಾರ ಮಧ್ಯಾಹ್ನ ಇಲ್ಲಿನ ಚಾಮುಂಡಿ ದೈವ ಬನಕ್ಕೆ ಸಂಬಂಧಿಸಿದ ಮರದ ಗೆಲ್ಲನ್ನು ಮುಸ್ಲಿಂ ಕಾರ್ಮಿಕರೊಬ್ಬರು ಕಡಿಯುತ್ತಿದ್ದಂತೆಯೇ ಅವರು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಇವರ ಮೈಮೇಲೆ ಆವೇಶ ಬಂದು ಜೊತೆಗಿದ್ದ ಕಾರ್ಮಿಕರೊಂದಿಗೆ ‘ನನ್ನ ಮರದ ಗೆಲ್ಲು ಕಡಿಯಲು ಹೇಳಿದವರು ಯಾರು…? ನಿಮಗೆ ಹಕ್ಕು ನೀಡಿದವರು ಯಾರು…? ಎಂದು ಪ್ರಶ್ನಿಸುತ್ತಾ ಕತ್ತಿ ಬೀಸತೊಡಗಿದ್ದಾರೆ. ಇದೇ ವೇಳೆ ಜೊತೆಗಿದ್ದ ಕಾರ್ಮಿಕರು ಭಯಭೀತರಾಗಿ ಓಡಿದಾಗ ಅವರನ್ನು ಮತ್ತೆ ಬೆನ್ನಟ್ಟಿ ಬಂದಿದೆ.

ಈ ನಡುವೆ ಸಮೀಪದಲ್ಲೇ ಬಾವಿ ತೋಡುವ ಕೆಲಸ ಮಾಡುತ್ತಿದ್ದ ಕಾರ್ಮಿಕರು ಕೂಡಾ ಆವೇಶಧಾರಿಯನ್ನು ಕಂಡು ಹೆದರಿ ಚೆಲ್ಲಾಪಿಲ್ಲಿಯಾಗಿ ಜೀವ ಭಯದಿಂದ ಓಡಿ ಹೋಗಿ ತಪ್ಪಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ತಿಳಿಯುತ್ತಿದ್ದಂತೆಯೇ ಯಜಮಾನ ಶ್ರೀಧರ ನಾಯ್ಕ್ ಸಹಿತ ಅಪಾರ ಮಂದಿ ಸ್ಥಳೀಯರು ಧಾವಿಸಿ ಬಂದಾಗ ಆವೇಶಧಾರಿ ವ್ಯಕ್ತಿ ಮಾತನಾಡಿ, ‘ಯಾರೂ ತನ್ನ ಬನ (ವನ) ಮುಟ್ಟಬಾರದು ಎಂದು ಎಚ್ಚರಿಸಿದರು.
ಇದೇ ವೇಳೆ ಶ್ರೀಧರ ನಾಯ್ಕ್ ಪ್ರತಿಕ್ರಿಯಿಸಿ, ಕಾರ್ಮಿಕರು ಹೊಟ್ಟೆಪಾಡಿಗಾಗಿ ಮರ ಕಡಿಯುವ ಕೆಲಸ ಮಾಡಿದ್ದು, ತಪ್ಪಾಗಿರುವುದನ್ನು ಕ್ಷಮಿಸಬೇಕು. ಮುಂದಿನ ದಿನಗಳಲ್ಲಿ ದೈವಬನ ಸಂರಕ್ಷಿಸುವುದಾಗಿ ಭರವಸೆ ನೀಡಿದರು. ಇದಕ್ಕೆ ಆವೇಶಧಾರಿ ವ್ಯಕ್ತಿ ಒಂದು ಕೊಡಪಾಣ ನೀರನ್ನು ತರುವಂತೆ ಸೂಚಿಸಿ ಬಳಿಕ ಅದನ್ನು ತನ್ನ ತಲೆಗೆ ಸುರಿಯುತ್ತಿದ್ದಂತೆಯೇ ಆವೇಶ ನಿಂತಿದೆ.
ಒಟ್ಟಿನಲ್ಲಿ ಇಲ್ಲಿನ ತ್ರಿಶೂಲ ಮತ್ತು ಆವೇಶದ ಸುದ್ದಿ ತಿಳಿಯುತ್ತಿದ್ದಂತೆಯೇ ಅಪಾರ ಮಂದಿ ಕುತೂಹಲದಿಂದ ಪಾಳು ಬಿದ್ದ ದೈವ ಬನ ವೀಕ್ಷಿಸಲು ಆಗಮಿಸುತ್ತಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
—