ರಜೆಯಲ್ಲಿ ದುಡಿಮೆ, ಅಡ್ಡಿಯಾಗದ ಬಡತನ
ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯ ಮುಗ್ಡಾಲ್ಗುಡ್ಡೆ ನಿವಾಸಿ ಭೋಜ ಪೂಜಾರಿ ಎಂಬವರ ಪುತ್ರ ಶಶಾಂತ್ ಕಡು ಬಡತನದ ನಡುವೆಯೂ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ 614 ಅಂಕ ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ಬಂಟ್ವಾಳ ಎಸ್ವಿಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿಯಾಗಿರುವ ಶಶಾಂತ್ ಇವರ ತಂದೆ ಭೋಜ ಪೂಜಾರಿ ಕೂಲಿ ಕಾರ್ಮಿಕನಾಗಿದ್ದು, ತಾಯಿ ವನಿತಾ ಬೀಡಿ ಕಟ್ಟುವ ಕಾಯಕ ಮಾಡುತ್ತಿದ್ದಾರೆ. ಇದರಿಂದಾಗಿ ಈ ವಿದ್ಯಾರ್ಥಿ ಬೇಸಿಗೆ ರಜೆಯಲ್ಲಿ ವಿವಿಧ ಹೋಟೆಲ್ನಲ್ಲಿ ಕೆಲಸ ಮಾಡುವ ಮೂಲಕ ಶೈಕ್ಷಣಿಕ ಖರ್ಚು ವೆಚ್ಛಗಳನ್ನು ಸರಿದೂಗಿಸುತ್ತಿರುವ ಬಗ್ಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಮುಂದಕ್ಕೆ ವಿಜ್ಞಾನ ವಿಭಾಗ ಆಯ್ದುಕೊಂಡು ಉಪನ್ಯಾಸಕನಾಗಬೇಕು ಎಂಬ ಹಂಬಲ ವ್ಯಕ್ತ ಪಡಿಸಿದ್ದಾರೆ.

ಶೇ. ನೂರು ಫಲಿತಾಂಶ:
ಬಂಟ್ವಾಳ ಎಸ್.ವಿ.ಎಸ್.ದೇವಳ ಆಂಗ್ಲ ಮಾಧ್ಯಮ ಶಾಲೆ
ಇಲ್ಲಿನ ಒಟ್ಟು 82 ವಿದ್ಯಾರ್ಥಿಗಳ ಪೈಕಿ 32 ಮಂದಿಗೆ ಎ+ ಮತ್ತು 22 ಮಂದಿಗೆ ಎ ಗ್ರೇಡ್ ದೊರೆತು ಶಾಲೆಯು ಶೇ.100 ಫಲಿತಾಂಶ ದಾಖಲಿಸಿದೆ.
ತಾಲ್ಲೂಕಿನ ವಗ್ಗ ಸರ್ಕಾರಿ ಪ್ರೌಢಶಾಲೆಯ ಒಟ್ಟು 43 ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿದ್ದಾರೆ. ಇನ್ನೊಂದೆಡೆ ನಯನಾಡು ಸರ್ಕಾರಿ ಪ್ರೌಢಶಾಲೆಯ ಒಟ್ಟು 38 ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಯಾಗುವ ಮೂಲಕ ಶೇ.100 ಫಲಿತಾಂಶ ದಾಖಲಿಸಿ ಗಮನ ಸೆಳೆದಿದೆ.
ತಾಲ್ಲೂಕಿನ ಪಾಣೆಮಂಗಳೂರು ಎಸ್ಎಲ್ಎನ್ಪಿ ವಿದ್ಯಾಲಯದಲ್ಲಿ ಒಟ್ಟು 50 ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆ ಹೊಂದಿ ಶೇ. 100 ಫಲಿತಾಂಶ ಸಾಧಿಸಿದ್ದಾರೆ. ಇಲ್ಲಿನ ವಿದ್ಯಾರ್ಥಿನಿ ತೃಪ್ತಿ ನಾಯಕ್ ಒಟ್ಟು 617 ಅಂಕ ಪಡೆದು ಗಮನ ಸೆಳೆದಿದ್ದಾರೆ.
ತಾಲ್ಲೂಕಿನ ತುಂಬೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಒಟ್ಟು 46ಮಂದಿ ವಿದ್ಯಾರ್ಥಿಗಳ ಪೈಕಿ ಎಲ್ಲರೂ ತೇರ್ಗಡೆಯಾಗಿ ಶೇ.100 ಫಲಿತಾಂಶ ದಾಖಲಿಸಿದ್ದಾರೆ.
—