ಬಂಟ್ವಾಳ:ತಾಲ್ಲೂಕಿನಲ್ಲಿ ಈ ಬಾರಿ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸುವ ಮೂಲಕ ಗಮನ ಸೆಳೆದಿದ್ದ ಗ್ರಾಮೀಣ ಪ್ರದೇಶ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳು ಪ್ರಜಾಪ್ರಭುತ್ವ ಮಾದರಿಯಲ್ಲಿ ಚುನಾವಣೆ ನಡೆಸಿ ಶಾಲಾ ಸಂಸತ್ತು ರಚಿಸಿದ್ದಾರೆ.

ಪುಸ್ತಕ ಚಿಹ್ನೆಯಡಿ ಸ್ಪರ್ಧಿಸಿದ್ದ 10ನೇ ತರಗತಿ ವಿದ್ಯಾರ್ಥಿನಿ ಭವ್ಯಾ ಶಾಲಾ ನಾಯಕಿಯಾಗಿ ಆಯ್ಕೆಯಾಗಿದ್ದು, ಒಂಭತ್ತನೇ ತರಗತಿ ವಿದ್ಯಾರ್ಥಿ ನೆವಿಲ್ ಲಸ್ರಾದೊ ಉಪನಾಯಕನಾಗಿ ಆಯ್ಕೆಗೊಂಡಿದ್ದಾರೆ.
ಕಾರ್ಯದರ್ಶಿಯಾಗಿ 10ನೇ ತರಗತಿ ವಿದ್ಯಾರ್ಥಿನಿ ಲಾವಣ್ಯ ಆಯ್ಕೆಗೊಂಡರು. ಕ್ರೀಡಾ ಮಂತ್ರಿಯಾಗಿ 9ನೇ ತರಗತಿ ವಿದ್ಯಾರ್ಥಿನಿ ತೇಜಶ್ರೀ ಗೆಲುವು ದಾಖಲಿಸಿದರು.
ಇವರಿಗೆ ಪುಸ್ತಕ, ಪೆನ್ನು, ಸೂರ್ಯ, ಹೂವು, ಚೆಂಡು ಮತ್ತಿತರ ಚಿಹ್ನೆ ನೀಡಲಾಗಿದ್ದು, ಚುನಾವಣಾಧಿಕಾರಿಯಾಗಿ ಶಿಕ್ಷಕ ಪ್ರಕಾಶ ನಾಯ್ಕ್ ಕಾರ್ಯ ನಿರ್ವಹಿಸಿದ್ದರು. ಮುಖ್ಯಶಿಕ್ಷಕ ಅಶೋಕ್ ಕುಮಾರ್ ಸಹಿತ ಇತರ ಶಿಕ್ಷಕರು ಮತದಾನ ಪ್ರಕಿಯೆಯಲ್ಲಿ ಪಾಲ್ಗೊಂಡರು.
