ಬಂಟ್ವಾಳ:ತಾಲ್ಲೂಕಿನ ವಿವಿಧ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಅವೈಜ್ಞಾನಿಕವಾಗಿ ಸಿದ್ಧಪಡಿಸಿದ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆಗೊಳಿಸುವ ಮೂಲಕ ಸರ್ಕಾರವು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಆರೋಪಿಸಿ ಇಲ್ಲಿನ ಶಾಲಾಭಿವೃದ್ಧಿ ಸಮಿತಿ ಮತ್ತು ಸ್ಥಳೀಯ ನಾಗರಿಕರು ಬಿ.ಸಿ.ರೋಡ್ನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಮಗವಾರ ದಿಢೀರ್ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ತಾಲ್ಲೂಕಿನ ಒಟ್ಟು 51 ಮಂದಿ ಶಿಕ್ಷಕರನ್ನು ಹೆಚ್ಚುವರಿ ಶಿಕ್ಷಕರ ನೆಪದಲ್ಲಿ ವರ್ಗಾವಣೆಗೊಳಿಸಲು ಮಂಗಳವಾರ ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಕೌನ್ಸೆಲಿಂಗ್ ನಡೆಸಲು ಆಹ್ವಾನಿಸಿರುವುದು ಅಲ್ಲಿನ ಶಾಲಾಭಿವೃದ್ಧಿ ಸಮಿತಿ ಮತ್ತು ನಾಗರಿಕರನ್ನು ಕೆರಳಿಸಿತ್ತು. ಇನ್ನೊಂದೆಡೆ ಇಲ್ಲಿನ ಪ್ರಾಥಮಿಕ ಶಿಕ್ಷಕರ ಸಂಘವೂ ಸರ್ಕಾರಿ ಶಾಲೆಗಳ ಸಬಲೀಕರಣ ದೃಷ್ಟಿಯಿಂದ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಕೈಬಿಡುವಂತೆ ಆಗ್ರಹಿಸಿ ತಹಶೀಲ್ದಾರರ ಮೂಲಕ ಸೋಮವಾರವೇ ಸರ್ಕಾರಕ್ಕೆ ಮನವಿ ಸಲ್ಲಿಸಿ ಕೌನ್ಸಿಲಿಂಗ್ ಬಹಿಷ್ಕರಿಸಿದೆ.

ಈಗಾಗಲೇ ತೀರಾ ಕಡೆಗಣಿಸಲ್ಪಟ್ಟ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಸ್ಥಳೀಯ ನಾಗರಿಕರು ವಿವಿಧ ಮೂಲಭೂತ ಸೌಕರ್ಯ ಸಹಿತ ಆಂಗ್ಲ ಮಾಧ್ಯಮ ಶಿಕ್ಷಣ ಆರಂಭಿಸುವ ಮೂಲಕ ವಿಶೇಷ ಮುತುವರ್ಜಿ ವಹಿಸಿದ್ದರೂ ಸರ್ಕಾರ ಮಾತ್ರ ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳ ಒತ್ತಡಕ್ಕೆ ಮಣಿದು ಸರ್ಕಾರಿ ಶಾಲೆಗಳನ್ನು ಮುಚ್ಚಲು ಹೊರಟಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಪ್ರತಿಕ್ರಿಯಿಸಿ, ಈಗಾಗಲೇ 21 ಜಿಲ್ಲೆಯಲ್ಲಿ ಅನುಷ್ಠಾನಗೊಂಡ ಈ ಪ್ರಕ್ರಿಯೆ ಸ್ಥಗಿತಗೊಳಿಸಲು ನಮಗೆ ಸಾಧ್ಯವಿಲ್ಲ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಕಂಬಳಿ, ಪ್ರಮುಖರಾದ ರಾಜೇಶ ಕೊಟ್ಟಾರಿ, ರಮ್ಲಾನ್, ಹುಸೇನ್, ದಯಾನಂದ ಸಪಲ್ಯ, ಹರೀಶ ಆಚಾರ್ಯ, ಯಶೋಧ ಮತ್ತಿತರರು ಇದ್ದರು. ತಾಲ್ಲೂಕಿನ ಕೆದಿಲ, ಎರ್ಮಾಳ್, ಕಲ್ಲಡ್ಕ, ಪುದು, ಮಾರಿಪಳ್ಳ ಮತ್ತಿತರ ಕಡೆಗಳಿಂದ ಅಪಾರ ಮಂದಿ ಪಾಲ್ಗೊಂಡಿದ್ದರು.