ಬಂಟ್ವಾಳ: ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರ ವರ್ಗಾವಣೆ ಆದೇಶವನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿ ಸರ್ಕಾರಿ ಶಾಲೆ ಉಳಿಸಿ ಹೋರಾಟ ನಡೆಸುತ್ತಿರುವ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾಫ್ರೆಂಡ್ಸ್ ಕ್ಲಬ್ ನೇತೃತ್ವದಲ್ಲಿ ಸಮಾನ ಮನಸ್ಕ ಶಿಕ್ಷಣಾಸಕ್ತರ ಸಂಘಟನೆಗಳ ಒಗ್ಗೂಡುವಿಕೆಯೊಂದಿಗೆ ಬೃಹತ್ ಹೋರಾಟಕ್ಕೆ ವೇದಿಕೆ ಸಿದ್ದಗೊಂಡಿದೆ. ಶಿಕ್ಷಣ ಇಲಾಖೆಯ ಗೊಂದಲದ ಹೇಳಿಕೆಗಳಿಂದಾಗಿ ಕಳೆದ ಹಲವು ಸಮಯಗಳಿಂದ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು ಹಾಗೂ ಶಾಲಾಭಿವೃದ್ದಿ ಸಮಿತಿ ಸದಸ್ಯರು ಆತಂಕಕ್ಕೀಡಾಗಿದ್ದಾರೆ. ಈ ಬಗ್ಗೆ ಈಗಾಗಲೇ ಜಿಲ್ಲೆಯ ವಿವಿಧ ಶಾಲೆಗಳಲ್ಲಿ ಪೋಷಕರು ಪ್ರತಿಭಟನೆ ನಡೆಸಿದರೂ ಕೂಡ ಶಿಕ್ಷಣ ಇಲಾಖೆ ತನ್ನ ನಿರ್ಧಾರದಿಂದ ಹಿಂದೆ ಸರಿಯುವ ಪ್ರಯತ್ನ ನಡೆಸಿಲ್ಲ. ಈ ನಿಟ್ಟಿನಲ್ಲಿ ಈಗಾಗಲೇ ಶ್ರೀದುರ್ಗಾ ಫ್ರೆಂಡ್ಸ್ ಕ್ಲಬ್ ಅಪರ ಜಿಲ್ಲಾಧಿಕಾರಿಯವರಿಗೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದ್ದಲ್ಲದೆ ಬೇಡಿಕೆ ಈಡೇರಿಕೆಗಾಗಿ 15 ದಿನಗಳ ಗಡುವನ್ನು ವಿಧಿಸಿದೆ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಶುಕ್ರವಾರ ಮಂಗಳೂರಿನ ಪಡಿ ಸಂಸ್ಥೆಯ ಕಚೇರಿಯಲ್ಲಿ ಸಮಾನ ಮನಸ್ಕ ಶಿಕ್ಷಣಾಸಕ್ತರ ಸಂಘಟನೆಗಳ ಪ್ರಮುಖರು ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ದಪಡಿಸಿದರು.BTW_JULY29_3
ಆ.8ಕ್ಕೆ ಬೃಹತ್ ಪ್ರತಿಭಟನೆ:
ಶಿಕ್ಷಕರ ವರ್ಗಾವಣೆ ಆದೇಶವನ್ನು ತಕ್ಷಣ ಕೈಬಿಡುವ ನಿಟ್ಟಿನಲ್ಲಿ ಎಲ್ಲಾ ಶಾಲಾಭಿವೃದ್ದಿ ಸಮಿತಿಯ ಸದಸ್ಯರನ್ನು ಸೇರಿಸಿಕೊಂಡು ತಾಲೂಕುಮಟ್ಟದಲ್ಲಿ ಸಮಾಲೋಚನಾ ಸಭೆ ನಡೆಸಿ ಮುಂದಿನ ಆ.8ರಂದು ಮಂಗಳೂರಿನಲ್ಲಿ ಜಿಲ್ಲಾಮಟ್ಟದ ಹೋರಾಟ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು. ಇದರ ಮುಂದುವರಿದ ಭಾಗವಾಗಿ ಲೋಕಾಯುಕ್ತಕ್ಕೆ ದೂರು ಸಲ್ಲಿಸಿ ಕಾನೂನು ಹೋರಾಟ ರೂಪಿಸುವ ಬಗ್ಗೆಯೂ ಚರ್ಚಿಸಲಾಯಿತು. ಸರ್ಕಾರಿ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ಪರಿಹಾರ ಸಿಗುವವರೆಗೂ ಚಳುವಳಿ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು. ಶ್ರೀ ದುರ್ಗಾ ಫ್ರೆಂಡ್ಸ್ ಕ್ಲಬ್‍ನ ಅಧ್ಯಕ್ಷ ಪ್ರಕಾಶ್ ಅಂಚನ್ ಮಾತನಾಡಿ ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳನ್ನು ಉಳಿಸುವ ನಿಟ್ಟಿನಲ್ಲಿ ಕ್ಲಬ್ ವತಿಯಿಂದ ಜನಜಾಗೃತಿ ಆಂದೋಲನ ನಡೆಸಲಾಗುತ್ತಿದೆ. ಇದೀಗ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಿಂದಾಗಿ ಸರ್ಕಾರಿ ಶಾಲೆಯ ಅಸ್ಥಿತ್ವಕ್ಕೆ ಧಕ್ಕೆ ಉಂಟಾಗಿದ್ದು ಮೊದಲ ಆದ್ಯತೆಯಾಗಿ ಶಿಕ್ಷಕರ ವಗಾವಣೆಯನ್ನು ಕೈ ಬಿಡುವ ಹೋರಾಟಕ್ಕೆ ಮುಂದಾಗಬೇಕಾಗಿದೆ ಎಂದರು.
ವೆಲ್‍ರೋಡ್ ನಿರ್ದೇಶಕ ರೆನ್ನಿಡಿಸೋಜಾ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳಿಪ್ಪಾಡಿ, ದುರ್ಗಾ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಪ್ರಕಾಶ್ ಅಂಚನ್ ಸದಸ್ಯರಾದ ರಾಮಚಂದ್ರ ಕರೆಂಕಿ, ವಿಠಲ ಡಿ.ದೇವಿನಗರ, ಮರಕಡ ಸರ್ಕಾರಿ ಶಾಲೆಯ ಹಳೆವಿದ್ಯಾರ್ಥಿ ಸಂಘದ ಕಾರ್ಯದರ್ಶಿ ರಹಿಮಾನ್ ಖಾನ್, ಪುತ್ತೂರು ಹಾರಾಡಿ ಶಾಲೆಯ ಹಳೆವಿದ್ಯಾರ್ಥಿ ಲೋಕೆಶ್‍ಗೌಡ ಅಲುಂಬುಡ, ಅಪ್ನಾದೇಶ್ ಅಸೋಷಿಯೇಷನ್‍ನ ದ.ಕ.ಜಿಲ್ಲಾ ಸಂಚಾಲಕ ಅಶೋಕ್ ಭಟ್, ಮಂಗಳೂರು ತಾಲೂಕು ಎಸ್‍ಡಿಎಂಸಿ ಅಧ್ಯಕ್ಷೆ ಉಷನಾಯಕ, ಮಂಗಳೂರು ಶಿಕ್ಷಣ ಸಂಪನ್ಮೂಲ ಕೇಂದ್ರದ ಕಮಲಾಗೌಡ ಮತ್ತಿತರು ಸಭೆಯಲ್ಲಿ ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.

By suddi9

Leave a Reply

Your email address will not be published. Required fields are marked *