ಹಿಂದುತ್ವದ ದಾರದಿಂದ ಬಂಧಿತರಾದಾಗ ಸಂಘ ಶಕ್ತಿ : ಪ್ರಕಾಶ್ ಪಿ.ಎಸ್.
ಮೂಡುಬಿದಿರೆ: ಇಂದು ಸಮಾಜದಲ್ಲಿ ಮತಾಂತರ, ಗೋ ಹತ್ಯೆ, ಭಯೋತ್ಪಾದನೆಗಳಿಂತ ಬೌದ್ಧಿಕ ಭಯೋತ್ಪಾದನೆ ಅಪಾಯಕಾರಿಯಾಗಿ ಬೆಳೆಯುತ್ತಿದೆ. ವಿಚಾರವಂತರೇ ದೇಶವನ್ನು ಒಡೆಯುವ ಕೆಲಸದಲ್ಲಿ ತೊಡಗಿದ್ದಾರೆ. ಇದನ್ನು ವಿರೋಧಿಸುವವರೇ ತಪ್ಪಿತಸ್ಥರು ಎನ್ನುವ ಮಾಧ್ಯಮಗಳೂ ಇವೆ. ಇಂತಹ ವಾತಾವರಣದಲ್ಲಿ ಮಾತೃಭೂಮಿಯ ರಕ್ಷಣೆಯ, ಹಿಂದೂ ಸಮಾಜವನ್ನು ಶಕ್ತಿಶಾಲಿಯನ್ನಾಗಿಸುವ ಸಂಕಲ್ಪದ ಜವಾಬ್ದಾರಿ ದೊಡ್ಡದು. ನಾವೆಲ್ಲರೂ ಹಿಂದುತ್ವದ ದಾರದಿಂದ ಬಂಧಿತರಾದಾಗ ಮಾತ್ರ ಸಂಘ ಶಕ್ತಿ ಬಲಿಷ್ಠವಾಗುತ್ತದೆ ಎಂದು ಆರೆಸ್ಸೆಸ್ ದಕ್ಷಿಣ ಪ್ರಾಂತ ಸಹ ಸಂಪರ್ಕ ಪ್ರಮುಖ್ ಪ್ರಕಾಶ್ ಪಿ.ಎಸ್. ಹೇಳಿದರು. ಅವರು ಗುರುವಾರ ಸಂಜೆ ಇಲ್ಲಿನ ಸಮಾಜ ಮಂದಿರದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವತಿಯಿಂದ ಆಯೋಜಿಸಲಾಗಿದ್ದ ರಕ್ಷಾಬಂಧನ ಕಾರ್ಯಕ್ರಮದಲ್ಲಿ ಪ್ರಧಾನ ಬೌದ್ಧಿಕ್ ನೀಡಿದರು.

ಜೆ.ಎನ್.ಯು ವಿವಿಯ ಘಟನೆ, ಬೆಂಗಳೂರಿನಲ್ಲಿ ಸೈನಿಕರ ವಿರೋಧಿ ಹೇಳಿಕೆಗಳು ವಿಘಟನೆಯ ಹಾದಿಯನ್ನು ಬೆಂಬಲಿಸುತ್ತಿವೆ.ಇಂತಹ ಬೌದ್ಧಿಕ ದಿವಾಳಿತನವನ್ನು ಸರಿಪಡಿಸಬೇಕಾದ ಗುರುತರ ಜವಾಬ್ದಾರಿಯನ್ನು ಸಂಘ ತನ್ನದಾಗಿಸಿಕೊಂಡು ಸ್ವಾಭಿಮಾನದ ಜಾಗೃತಿ ಮೂಡಿಸುತ್ತಾ ಬಂದಿದೆ ಎಂದ ಅವರು ಸಹೋದರತ್ವ ನಂಬಿಕೆಯ ದೇಶ ಭಾರತ, ಈ ಭೂಮಿ ತಾಯಿ ನನ್ನ ತಾಯಿ ಎಂದೆಣಿಸಿದಾಗ ಸಹೋದರ ಭಾವನೆ ಬಲಗೊಳ್ಳುತ್ತದೆ. ವೈವಿಧ್ಯ ಪೂರ್ಣ ದೇಶದಲ್ಲಿ ವ್ಯತ್ಯಾಸಗಳಿದ್ದು ಸಾಮಾಜಿಕ ಸಮಸ್ಯೆಯಾಗಿರುವುದು ಮಾತ್ರವಲ್ಲ ಸಾಮರಸ್ಯ ಕದಡಿ ಹಿಂದೂ ಸಮಾಜಕ್ಕೆ ಶಾಪವಾಗಿ ಪರಿಣಮಿಸಿದೆ.ಸಹೋದರತ್ವದ ಮೂಲಕ ಜಗತ್ತನ್ನೇ ಗೆದ್ದ ಸ್ವಾಮಿ ವಿವೇಕಾನಂದರೇ ನಮಗೆ ಆದರ್ಶವಾಗಬೇಕು. ಸಹೋದರತೆಯ ಮೂಲಕ ಜಾಗತಿಕ ಶಾಂತಿಗಾಗಿ ಸಮಾಜವನ್ನು ನಾವು ಒಂದಾಗಿಸಬೇಕು. ಅದಕ್ಕಾಗಿ ಭಾರತ ಶಕ್ತಿಶಾಲಿಯಾಗಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ನಾಗರಾಜ ಬಿ ಮಾತನಾಡಿ ಭಾರತೀಯ ಯುವಶಕ್ತಿ ಏಕತೆ ಮತ್ತು ಅಭಿವೃದ್ಧಿಯ ದೃಷ್ಟಿಕೋನದಿಂದ ಮುನ್ನಡೆಯಬೇಕಾಗಿದೆ. ಈ ನಿಟ್ಟಿನಲ್ಲಿ ಮಾದರಿಯಾಗಿರುವ ಆರೆಸ್ಸೆಸ್ ಆಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿಯವರಂತಹ ರಾಷ್ಟ್ರ ನಾಯಕರನ್ನು ನೀಡಿರುವುದು ಗಮನಾರ್ಹ ಎಂದರು.
ಚೇತನ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸೂರಜ್ ಅಮೃತ ವಚನ ವಾಚಿಸಿದರು. ದೇವಿ ಪ್ರಸಾದ್ ಶೆಟ್ಟಿ ದೇಶಭಕ್ತಿಗೀತೆ ಹಾಡಿದರು. ಹರೀಶ್ ಎಂ.ಕೆ ರಕ್ಷಾಬಂಧನ ಸಂದೇಶ ವಾಚಿಸಿದರು. ಲಕ್ಷ್ಮಣ ಪೂಜಾರಿ ವಂದಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದವರು ಪರಸ್ಪರ ರಕ್ಷೆಗಳನ್ನು ವಿನಿಮಯ ಮಾಡಿ ಕಟ್ಟಿಸಿಕೊಂಡರು. ಬಳಿಕ ಸಿಹಿವಿತರಣೆ ನಡೆಯಿತು.
—
ಭಾರತ ಮತ್ತು ಲೋಕ ಹಿತ
ಆಧುನಿಕ ಜಗತ್ತಿನ ಎಲ್ಲ ಅನ್ವೇಷಣೆಗಳೂ ವೇದಗಳಲ್ಲಿ ಅಡಗಿವೆ ಎಂಬ ಸತ್ಯದ ಅರಿವಾಗುತ್ತಿದ್ದು ಜಗತ್ತೇ ಭಾರತವನ್ನು ಇಲ್ಲಿನ ವೇದ, ಭಗವದ್ಗೀತೆ, ಕುಟುಂಬ ಪದ್ಧತಿ ಹೀಗೆ ಒಪ್ಪಿಕೊಳ್ಳುವ ದಿನಗಳು ದೂರವಿಲ್ಲ. ಇದಕ್ಕಾಗಿ ಭಾರತೀಯರೆಲ್ಲರೂ ಒಂದಾಗಬೇಕು. ಸಂಸ್ಕಾರವಂತರಾಗಿ ಸಂಘಟಿತರಾಗಬೇಕು. ಲೋಕ ಹಿತಕ್ಕಾಗಿ ನಿತ್ಯವೂ ನಾಲ್ಕಾರು ಕೋಟಿ ಸಂಕಲ್ಪಗಳಾಗುವ ಜಗತ್ತಿನ ಏಕೈಕ ಸ್ಥಾನವೆಂದರೆ ಅದು ಭಾರತದ ದೇವಾಲಯಗಳಲ್ಲಿ ಮಾತ್ರ.