ಬಂಟ್ವಾಳ:ತಾಲ್ಲೂಕಿನ ಸಂಗಬೆಟ್ಟು ಗ್ರಾಮದ ಮುಗೇರು ಎಂಬಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಮರಳನ್ನು ಇಲ್ಲಿನ ಕಂದಾಯ ಇಲಾಖೆ ಹಾಗೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡ ಘಟನೆ ಬುಧವಾರ ಸಂಜೆ ನಡೆದಿದೆ.
ಇಲ್ಲಿನ ನಿವಾಸಿ ವಲೇರಿಯನ್ ಗೋವಿಯಸ್ ಮತ್ತು ರತ್ನಕುಮಾರ್ ಚೌಟ ಎಂಬವರಿಗೆ ಸೇರಿದ ಜಮೀನಿನಲ್ಲಿ ಸ್ಥಳೀಯ ಕರ್ಪೆ ಮತ್ತು ಕುಕ್ಕಿಪಾಡಿ ನಿವಾಸಿಗಳಾದ ಹನೀಫ್ ಮತ್ತಿತರರು ಕಳೆದ ಕೆಲವು ಸಮಯದಿಂದ ಭಾರೀ ಪ್ರಮಾಣದಲ್ಲಿ ಅಕ್ರಮ ಮರಳು ದಾಸ್ತಾನು ಮಾಡುತ್ತಿದ್ದರು ಎನ್ನಲಾಗಿದೆ. ಈ ಬಗ್ಗೆ ಮಂಗಳೂರು ಉಪವಿಭಾಗಾಧಿಕಾರಿ ಡಾ.ಡಿ.ಆರ್.ಅಶೋಕ್ ಅವರಿಗೆ ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆಯಲ್ಲಿ ಅವರ ಸೂಚನೆಯಂತೆ ಬಂಟ್ವಾಳ ಕಂದಾಯ ಇಲಾಖೆ ಹಾಗೂ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಬುಧವಾರ ಸಂಜೆ ದಿಢೀರ್ ಜಂಟಿ ಕಾರ್ಯಾಚರಣೆ ನಡೆಸಿ ಲಕ್ಷಾಂತರ ಮೌಲ್ಯದ ಸುಮಾರು 3,600 ಮೆಟ್ರಿಕ್ ಟನ್ ಅಕ್ರಮ ಮರಳನ್ನು ವಶಪಡಿಸಿಕೊಂಡು ಲೋಕೋಪಯೋಗಿ ಇಲಾಖೆ ದಾಸ್ತಾನು ಘಟಕಕ್ಕೆ ಹಸ್ತಾಂತರಿಸಿರುವುದಾಗಿ ತಿಳಿಸಿದ್ದಾರೆ.
ಇಲ್ಲಿನ ಫಲ್ಗುಣಿ ಹೊಳೆಯಿಂದ ತೆಗೆದ ಮರಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವುದು ತನಿಖೆ ವೇಳೆ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.
ತಹಶೀಲ್ದಾರ್ ಪುರಂದರ ಹೆಗ್ಡೆ, ಭೂವಿಜ್ಞಾನಿ ಗಿರೀಶ ಮೋಹನ್, ಪಿಡಬ್ಲ್ಯುಡಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಉಮೇಶ್ ಭಟ್, ಕಿರಿಯ ಎಂಜಿನಿಯರ್ ಅರುಣ್ ಪ್ರಕಾಶ್, ಕಂದಾಯ ನಿರೀಕ್ಷಕ ನವೀನ್ ಕುಮಾರ್, ಗ್ರಾಮಕರಣಿಕರಾದ ಜನಾರ್ದನ, ಬಸಪ್ಪ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.