ಮೂಡುಬಿದಿರೆ: ಧಾರ್ಮಿಕ ಆಚರಣೆಗಳಲ್ಲಿ ವಿಗ್ರಹ ಆರಾಧನೆಯು ಒಂದು. ನಿಷ್ಕಳಂಕ ಮನಸ್ಸಿನಿಂದ ಪೂಜೆ, ಆರಾಧನೆಯನ್ನು ಮಾಡಿದಾದ ಭಗವಂತನ ಅನುಗ್ರಹ ಲಭಿಸುತ್ತದೆ ಎಂದು ನಾಳ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕ ರಾಘವೇಂದ್ರ ಅಸ್ರಣ್ಣ ಹೇಳಿದರು.
ಶ್ರೀ ಗಣೇಶ ಸೇವಾ ಟ್ರಸ್ಟ್ ಕಲ್ಲಬೆಟ್ಟು ಮತ್ತು ಸ್ವರ್ಣಗೌರಿ ಮಾತೃ ಮಂಡಳಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಕಲ್ಲಬೆಟ್ಟು ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರ ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ನಡೆದ ಸಭಾ ಕಾರ್ಯಕ್ರದಮಲ್ಲಿ ಆಶೀರ್ವಚನ ನೀಡಿದರು. ಗಣೇಶ ಚತುರ್ಥಿಯಂದು ಪೂಜಿಸುವ ಗಣಪತಿ ಕೇವಲ ಮಣ್ಣಿನ ಮಾರ್ತಿಯಾಗಿರದೆ ದೇವರ ಚೈತನ್ಯದ ಪ್ರತೀಕವಾಗಿದೆ. ಹಿಂದೂ ಧರ್ಮದಲ್ಲಿ ಆರಾಧನೆಗೆ ಮಹತ್ವದ ಸ್ಥಾನವಿದೆ. ಚೌತಿ, ತುಳಸಿ ಪೂಜೆ, ಗೋಪೂಜೆ ಹೀಗೆ ಬೇರೆ ಬೇರೆ ಹಬ್ಬಗಳನ್ನು ನಾವು ಆಚರಿಸುತ್ತೇವೆ. ಇಂತಹ ಆಚರಣೆಗಳಿಂದ ಧಾರ್ಮಿಕ ಜಾಗೃತಿ ಹೆಚ್ಚುವುದರ ಜತೆಗೆ ಹಿಂದೂ ಸಮಾಜವನ್ನು ಸಂಘಟಿಸುವುದಕ್ಕೆ ನೆರವಾಗುತ್ತದೆ ಎಂದರು.
ಶ್ರೀ ಗಣೇಶ ಸೇವಾ ಟ್ರಸ್ಟ್‍ನ ಅಧ್ಯಕ್ಷ ಕೆ. ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದರು.

ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ದೈವ ಪಾತ್ರಿ ಪೂವಪ್ಪ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಭಾರತಜ್ಯೋತಿ ಪ್ರಶಸ್ತಿ ಪುರಸ್ಕøತ ಎಂ. ಬಾಹುಬಲಿ ಪ್ರಸಾದ್, ರಾಷ್ಟ್ರ ಪ್ರಶಸ್ತಿ ಪುರಸ್ಕøತ ಬಾಲಪ್ರತಿಭೆ ಪಂಚಮಿ ಮಾರೂರು ಅವರನ್ನು ಅಭಿನಂದಿಸಲಾಯಿತು.
ಉದ್ಯಮಿ ಪ್ರಸಾದ್ ಶೆಟ್ಟಿ ಮಂಗಳೂರು, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸೂರ್ಯ ಆರ್. ರಾವ್ ಉಪಸ್ಥಿತರಿದ್ದರು.
ಸ್ವರ್ಣ ಗೌರಿ ಮಾತೃಮಂಡಳಿ ಅಧ್ಯಕ್ಷೆ ವೀಣಾ ಸುರೇಶ್ ಪೈ ಸ್ವಾಗತಿಸಿದರು. ಸುಶಾಂತ್ ಕರ್ಕೇರಾ ವಂದಿಸಿದರು. ರೂಪಾಶ್ರೀ ವಂದಿಸಿದರು.