ಬಂಟ್ವಾಳ,ಸೆ.12: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿ ಸಹಿತ ಹಿಂದೂ ದೇವರ ದೇವತೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಪದಪ್ರಯೋಗ ನಿಂದನೆ ಮಾಡುತ್ತಾ ಹಿಂದೂ ಧರ್ಮದ ಅವಹೇಳನ, ಹಿಂದೂ ಸಂಸ್ಕೃತಿ ಬಗ್ಗೆ ಅವಹೇಳನ ಮಾಡಿ ಕೋಮು ಪ್ರಚೋದನೆ ಕೆರಳಿಸುವ ಮತಾಂದ ಶಕ್ತಿಗಳ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ವಾಮದಪದವು ನೀಲಿ ಶ್ರೀ ನೀಲಕಂಠೇಶ್ವರ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಭಕ್ತಾಧಿಗಳ ವತಿಯಿಂದ ಬೃಹತ್ ಪ್ರತಿಭಟನೆ ಬಂಟ್ವಾಳ ತಾಲೂಕಿನ ವಾಮದಪದವಿನಲ್ಲಿ ಸೋಮವಾರ ಜರಗಿತು.
ಈ ಸಂದರ್ಭದಲ್ಲಿ ಪ್ರತಿಭಟನಾಕಾರರು ಕಾಲ್ನಡಿಗೆ ಮೂಲಕ ವಾಮದಪದವು ಶ್ರೀ ಗಣೇಶ ಮಂದಿರದಿಂದ ಶ್ರೀ ನೀಲಕಂಠೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು. ಜಿ.ಪಂ. ಸದಸ್ಯ ಎಂ. ತುಂಗಪ್ಪ ಬಂಗೇರ, ಬಿ.ಜೆ.ಪಿ ಕಾರ್ಯಕಾರಿಣಿ ಸದಸ್ಯೆ ಸುಲೋಚನಾ ಭಟ್, ಶ್ರೀ ನೀಲಕಂಠೇಶ್ವರ ದೇವಸ್ಥಾನ ಅಧ್ಯಕ್ಷ ವಿಜಯ ರೈ ಆಲದಪದವು, ಪ್ರಮುಖರಾದ ಕೆ.ಲಕ್ಷ್ಮಿನಾರಾಯಣ ಉಡುಪ, ಜಿ.ಕೆ.ಭಟ್ ಪುರುಷೋತ್ತಮ ಶೆಟ್ಟಿ, ಯಶೋಧರ ಶೆಟ್ಟಿ, ಶ್ಯಾಮ್ ಪ್ರಸಾದ್ ಪೂಂಜ, ರಮೇಶ್ ಶೆಟ್ಟಿ ವಾಮದಪದವು, ಸಂಜೀವ, ಮೋಹನ್ದಾಸ್, ವಕೀಲ ಡಿ.ಪದ್ಮನಾಭ ಕುಮಾರ್, ಶ್ರೀ ನೀಲಕಂಠೇಶ್ವರ ದೇವಸ್ಥಾನದ ಸಮಿತಿ ಸದಸ್ಯರು ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.
ಗೃಹ ಸಚಿವರಿಗೆ ಮನವಿ: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಚಿತ್ರಿಸಿರುವುದು ಧಾರ್ಮಿಕ ಭಾವನೆಗೆ ನೋವು ತಂದಿದೆ. ಇಂತಹ ಘಟನೆ ಮತ್ತೆ ಮರುಕಳಿಸಬಾರದು. ತಪ್ಪಿತಸ್ಥರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಇದೇ ವೇಳೆ ಶ್ರೀ ನೀಲಕಂಠೇಶ್ವರ ದೇವಸ್ಥಾನ ಅಧ್ಯಕ್ಷ ವಿಜಯ ರೈ ಅವರು ಪುಂಜಾಲಕಟ್ಟೆ ಪೊಲೀಸ್ ಠಾಣಾಧಿಕಾರಿಯ ಮೂಲಕ ರಾಜ್ಯಗೃಹ ಮಂತ್ರಿ ಜಿ. ಪರಮೇಶ್ವರ ಅವರಿಗೆ ಮನವಿ ನೀಡಿದರು.
