ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡ್ ಸಮೀಪದ ಪಲ್ಲಮಜಲು ಮಾತ್ರವಲ್ಲದೆ ಕನ್ಯಾನ, ಕಡೇಶಿವಾಲಯ ಸಹಿತ ವಿವಿಧ ಕಡೆಗಳಲ್ಲಿ ಮನೆ ಮತ್ತು ಅಂಗಡಿಗಳ ಮೂಲಕ ವ್ಯಾಪಕವಾಗಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದ್ದು, ಇದರಿಂದಾಗಿ ಗರಿಷ್ಟ ಸಂಖ್ಯೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಸಮುದಾಯ ದುಶ್ಚಟಕ್ಕೆ ಬಲಿಯಾಗುತ್ತಿದೆ. ಈ ಬಗ್ಗೆ ಕೂಡಲೇ ಎಚ್ಚೆತ್ತು ಕಡಿವಾಣ ಹಾಕದಿದ್ದಲ್ಲಿ ಅಬಕಾರಿ ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ದಲಿತ ಮುಖಂಡರು ಎಚ್ಚರಿಸಿದರು.
ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ ಅಧ್ಯಕ್ಷತೆಯಲ್ಲಿ ಬುಧವಾರ ಬಿ.ಸಿ.ರೋಡ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕುಂದು ಕೊರತೆ ಸಭೆಯಲ್ಲಿ ಸದಸ್ಯರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ಇಲ್ಲಿನ ಪಲ್ಲಮಜಲು ಎಂಬಲ್ಲಿ ಅಕ್ರಮ ಮದ್ಯ ಮಾರಾಟ ಜೊತೆಗೆ ಕಳ್ಳಭಟ್ಟಿ ತಯಾರಿಕೆಯೂ ನಡೆಯುತ್ತಿದೆ ಎಂದು ದಲಿತ ಮುಖಂಡ ರಾಜಾ ಪಲ್ಲಮಜಲು ಆರೋಪಿಸಿದರು. ಕಡೇಶಿವಾಲಯ ಗ್ರಾಮ ಒಂದರಲ್ಲೇ ಒಟ್ಟು 23 ಕಡೆ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ ಎಂದು ಜಯ ಕಡೇಶಿವಾಲಯ ದೂರಿಕೊಂಡರು. ಇದಕ್ಕೆ ಪ್ರತಿಯಾಗಿ ಅಬಕಾರಿ ಇಲಾಖೆಯು ತಲಾ ರೂ 300ರಂತೆ ಅಂಗಡಿ ಮಾಲೀಕರಿಂದ ಪ್ರತೀ ತಿಂಗಳು ಹಣ ವಸೂಲಿ ಮಾಡುತ್ತಿದೆ ಎಂದು ಸುರೇಶ ಮಂಡಾಡಿ ಆರೋಪಿಸಿದರು.

ಜಕ್ರಿಬೆಟ್ಟು ವೈನ್ ಶಾಪ್ ಬಾರ್ ಮಾದರಿಯಲ್ಲಿ ಚಿಲ್ಲರೆ ಮದ್ಯ ಮಾರಾಟ ಮತ್ತು ವಿತರಣೆಯಾಗುತ್ತಿದ್ದು, ಇಲ್ಲಿ ಮಹಿಳೆಯರು ಮತ್ತು ಮಕ್ಕಳು ರಸ್ತೆಯಲ್ಲಿ ನಡೆದಾಡಲು ಕೂಡಾ ಹಿಂದೇಟು ಹಾಕುತ್ತಿದ್ದಾರೆ ಎಂದು ವಿಶ್ವನಾಥ ಚೆಂಡ್ತಿಮಾರು ಟೀಕಿಸಿದರು. ಬೆಂಜನಪದವು ಎಂಬಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಹಿತ ಸರ್ಕಾರಿ ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜು, ಎಂಜಿನಿಯರಿಂಗ್ ಕಾಲೇಜು ಇರುವ ಜನವಸತಿ ಪ್ರದೇಶದಲ್ಲಿ ವ್ಯಕ್ತಿಯೊಬ್ಬರಿಗೆ ಬಾರ್ ತೆರೆಯಲು ಅಬಕಾರಿ ಇಲಾಖೆ ಸಹಕರಿಸುತ್ತಿದೆ. ಇದನ್ನು ತಡೆಯದೇ ಇದ್ದಲ್ಲಿ ಅಬಕಾರಿ ಕಚೇರಿ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಜನಾರ್ದನ ಚೆಂಡ್ತಿಮಾರ್ ಎಚ್ಚರಿಸಿದರು. ಪೂಪಾಡಿಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ಸ್ಥಳದಾನಿ ಆಗಿರುವ ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದಲಿತೆ ಎಂಬ ಕಾರಣಕ್ಕಾಗಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಾರೋಹಣ ನಡೆಸಲು ಅವಕಾಶ ನೀಡದಿರುವ ಅಲ್ಲಿನ ಮುಖ್ಯಶಿಕ್ಷಕಿ ವಿರುದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.
ಪುರಸಭಾ ವ್ಯಾಪ್ತಿಯ ಕೈಕಂಬದಲ್ಲಿ ಸಂಚಾರಿ ಗಿರಿಜನ ಆರೋಗ್ಯ ಕೇಂದ್ರದಲ್ಲಿ ಗ್ರೂಪ್ ಡಿ ನೌಕರರೊಬ್ಬರು ದರ್ಪದಿಂದ ವರ್ತಿಸುತ್ತಾ ಕರ್ತವ್ಯ ಲೋಪ ಎಸಗುತ್ತಿದ್ದು, ಅವರನ್ನು ಕೂಡಲೇ ತೆರವುಗೊಳಿಸಬೇಕು ಎಂದು ತಾಲೂಕು ವೈದ್ಯಾಧಿಕಾರಿ ಡಾ. ದೀಪಾ ಪ್ರಭು ಅವರನ್ನು ಆಗ್ರಹಿಸಿದರು. ಇಲ್ಲಿನ ಕೆಲವೊಂದು ಕ್ರೈಸ್ತರ ಆಡಳಿತ ಹೊಂದಿರುವ ಶಾಲೆಗಳಲ್ಲಿ ಧರ್ಮಗುರುವನ್ನು ವಿದ್ಯಾರ್ಥಿಗಳು ‘ಫಾದರ್’ ಎಂದು ಕರೆಯಲು ಅಲ್ಲಿನ ಶಿಕ್ಷಕರೇ ಕಲಿಸುತ್ತಿದ್ದಾರೆ. ನಮಗೆ ನಮ್ಮ ತಂದೆ ಮಾತ್ರ ‘ಫಾದರ್’ ಆಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಎಚ್ಚೆತ್ತು ಶಿಕ್ಷಕರಿಗೆ ಸ್ಪಷ್ಟ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳು ‘ಧರ್ಮಗುರು’ ಎಂದು ಉಚ್ಚರಿಸುವುದು ಸರಿಯಾದ ಕ್ರಮ ಎಂದು ವಿಶ್ವನಾಥ ಚೆಂಡ್ತಿಮಾರು ಸಭೆಯಲ್ಲಿ ವಿವರಿಸಿದರು.
ಬಂಟ್ವಾಳ ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮ ಪರಾರಿ ಪರಿಶಿಷ್ಟ ಕಾಲೊನಿಯಲ್ಲಿ ರಸ್ತೆ ಕಾಂಕ್ರಿಟೀಕರಣಕ್ಕೆ ರೂ 5ಲಕ್ಷ ಮೊತ್ತದ ಅನುದಾನ ಮಂಜೂರಾಗಿದ್ದರೂ ಕಾಮಗಾರಿ ಕೈಗೊಂಡಿಲ್ಲ. ಇಲ್ಲಿಗೆ ದಾರಿ ದೀಪವನ್ನೂ ಅಳವಡಿಸಿಲ್ಲ. ಇದೇ ಪರಿಸರದಲ್ಲಿ ಅಲ್ಪಸಂಖ್ಯಾತ ಸಮುದಾಯ ಹೊಂದಿರುವಲ್ಲಿ ಕಾಂಕ್ರಿಟೀಕರಣ ಕಾಮಗಾರಿ ತ್ವರಿತವಾಗಿ ನಡೆದಿದೆ. ಇಂತಹ ತಾರತಮ್ಯ ನೀತಿಯನ್ನು ಮುಖ್ಯಾಧಿಕಾರಿ ಎಂ.ಎಚ್.ಸುಧಾಕರ್ ಸರಿಪಡಿಸಬೇಕು ಎಂದು ಗಂಗಾಧರ ಗಾಂದೋಡಿ ಒತ್ತಾಯಿಸಿದರು.
ಕಳೆದ ಐದು ವರ್ಷಗಳ ಹಿಂದೆ ಬಿ.ಸಿ.ರೋಡ್ನಲ್ಲಿ ನಡೆದ ದಲಿತ ಸಮಾವೇಶದಲ್ಲಿ ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮುಖ್ಯವೃತ್ತಕ್ಕೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ಇಡುವಂತೆ ಆಗ್ರಹಿಸಿ ಅಂದಿನ ಜಿಲ್ಲಾಧಿಕಾರಿ ಸಹಿತ ವಿವಿಧ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಕೆಲವೊಂದು ರಾಜಕೀಯ ವ್ಯಕ್ತಿಗಳು ನೀಡಿದ ಮನವಿಗೆ ತ್ವರಿತವಾಗಿ ಸ್ಪಂದಿಸಿದ ಇಲ್ಲಿನ ಪುರಸಭೆ ತನ್ನ ಅಧಿಕಾರ ವ್ಯಾಪ್ತಿ ಮೀರಿ ‘ಬ್ರಹ್ಮಶ್ರೀ ನಾರಾಯಣ ಗುರು’ ಹೆಸರಿಡಲು ನಿರ್ಣಯ ಕೈಗೊಂಡಿರುವ ಔಚಿತ್ಯವೇನು …? ಎಂದು ಮುಖ್ಯಾಧಿಕಾರಿಯನ್ನು ಪ್ರಶ್ನಿಸಿದರು.
ಇದೇ ವೇಳೆ ಜಿಲ್ಲಾ ದಲಿತ ನಾಗರಿಕ ಹಿತರಕ್ಷಣಾ ಯುವ ವೇದಿಕೆ ವತಿಯಿಂದ ಬಿ.ಸಿ.ರೋಡ್ ಮುಖ್ಯವೃತ್ತಕ್ಕೆ ಡಾ. ಬಿ.ಆರ್.ಅಂಬೇಡ್ಕರ್ ಹೆಸರು ಇಡುವಂತೆ ಆಗ್ರಹಿಸಿ ಪ್ರತ್ಯೇಕ ಮನವಿ ಸಲ್ಲಿಸಿದರು. ಇನ್ನೊಂದೆಡೆ ಅರಣ್ಯ ಇಲಾಖೆ ಅಧಿಕಾರಿಯೊಬ್ಬರು ಪರಿಶಿಷ್ಟ ಜಾತಿ ಪಂಗಡ ಶಬ್ದಕ್ಕೆ ಬದಲಾಗಿ ಹರಿಜನ ಎಂದು ಉಚ್ಚರಿಸಿದ್ದನ್ನು ಪ್ರಶ್ನಿಸಿ ಜನಾರ್ದನ ಚೆಂಡ್ತಿಮಾರ್ ಅವರು ಮೈಕ್ ಎಳೆದು ಅವರನ್ನು ತರಾಟೆಗೆ ತೆಗೆದುಕೊಂಡು ಕ್ಷಮೆ ಕೇಳುವಂತೆ ಆಗ್ರಹಿಸಿದರು. ಇದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ಅವರು ನಾನು ಕೂಡಾ ಸ್ವತಃ ಪರಿಶಿಷ್ಟ ಜಾತಿಗೆ ಸೇರಿದವನಾಗಿದ್ದು, ಪದಬಳಕೆಯಲ್ಲಿ ಉಂಟಾದ ವ್ಯತ್ಯಾಸಕ್ಕೆ ವಿಷಾಧ ವ್ಯಕ್ತಪಡಿಸಿದಾಗ ಸದಸ್ಯರು ಸದ್ದಿಲ್ಲದೆ ಮೌನಕ್ಕೆ ಶರಣಾದರು.
ಅಂಬೇಡ್ಕರ್ ಭವನಕ್ಕೆ ಜಮೀನು:
ಬಿ.ಸಿ.ರೋಡ್ನಸರ್ವೆ ನಂ.66/1ಎ2ರಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಿಟ್ಟ 25 ಸೆಂಟ್ಸ್ ಜಮೀನಿಗೆ ಕಳೆದ ಸಭೆಯಲ್ಲಿ ಸಲ್ಲಿಸಿದ ಬೇಡಿಕೆಯಂತೆ ಉಳಿಕೆ 20 ಸೆಂಟ್ಸ್ ಜಮೀನು ಮತ್ತೆ ಹೆಚ್ಚುವರಿಯಾಗಿ ನೀಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸಮಿತಿ ಪ್ರಮುಖರಾದ ಸೇಸಪ್ಪ ಬೆದ್ರಕಾಡು, ಪದ್ಮನಾಭ ನರಿಂಗಾನ, ನಾರಾಯಣ ಪುಂಚಮೆ, ಬೇಬಿ ಮೈರನ್ಪಾದೆ, ಸದಾಶಿವ ಪುದು ಮತ್ತಿತರರು ಚರ್ಚೆಯಲ್ಲಿ ಪಾಲ್ಗೊಂಡರು. ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕಿ ದಯಾವತಿ, ಸಮಾಜ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನರೇಂದ್ರ ಬಾಬು ಮತ್ತಿತರರು ಇದ್ದರು.
