ಬಂಟ್ವಾಳ: ಉದ್ಯೊಗದ ನಿಮಿತ್ತ ಊರಿಂದ ಊರಿಗೆ ಅಲೆದಾಡುವ ಅನಿವಾರ್ಯತೆ ಕೆಲವು ಅಧಿಕಾರಿಗಳಿಗೆ ಇರುತ್ತದೆ. ಸರ್ಕಾರಿ ಉದ್ಯೋಗಿಗಳ ಈ ಬವಣೆಯನ್ನು ತಪ್ಪಿಸುವ ಸಲುವಾಗಿ ಸರ್ಕಾರ ಅವರಿಗೆ ವಸತಿಗೃಹ ಸೌಲಭ್ಯ ಒದಗಿಸಿದೆ. ಇದನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವ ಜವಾಬ್ದಾರಿ ಮಾತ್ರ ಆಯಾಯ ಅಧಿಕಾರಿಗಳಿಗೆ ಸಂಬಂಧಪಟ್ಟದ್ದು. ಸೌಕರ್ಯವಿದ್ದೂ ಯಾರಿಂದಲೂ ಉಪಯೋಗಿಸಲ್ಪಡದೆ ಪಾಳು ಬಿದ್ದಿದೆ ಸರ್ಕಾರಕ್ಕೆ ಸೇರಿದ ಒಂದು ಸುಸಜ್ಜಿತ ವಸತಿಗೃಹ.

dsc_5851

ಉದ್ಯೋಗಿಗಳ ಹಿತದೃಷ್ಟಿಯಿಂದಲೇ ಬಂಟ್ವಾಳದ ಕಸ್ಬಾ ಗ್ರಾಮದ ಮಂಡಾಡಿ ಎಂಬಲ್ಲಿ ಸರ್ಕಾರ ನಿರ್ಮಿಸಿದ 184/2ಬಿ ಸರ್ವೇ ನಂಬರ್‍ನ ಕೃಷಿ ಸಹಾಯಕ ಕ್ವಾಟ್ರಸ್ ಎಂಬ ಸುಸಜ್ಜಿತ ವಸತಿ ಗೃಹವು ಸುಮಾರು ಎಂಟು ವರ್ಷಗಳಿಂದ ಜನರ ವಾಸವಿಲ್ಲದೆ ಪಾಳು ಬಿದ್ದಿದೆ. ಇದು ಬಂಟ್ವಾಳ ತಾಲೂಕಿನ ಕೃಷಿ ಇಲಾಖೆಯ ಅಧೀನದಲ್ಲಿದೆ. ಮೂಲಭೂತ ಸೌಲಭ್ಯಗಳಾದ ನೀರಿನ ವ್ಯವಸ್ಥೆ, ವಿದ್ಯುತ್ ವ್ಯವಸ್ಥೆ ಎಲ್ಲವೂ ಚೆನ್ನಾಗಿದೆ. ಜೊತೆಗೆ ಸಮರ್ಪಕವಾದ ರಸ್ತೆಯೂ ಇದೆ.. ಆದರೆ ಇದನ್ನು ಸರಿಯಾಗಿ ಬಳಸಿಕೊಳ್ಳುವವರಿಲ್ಲದೆ ಈ ಕಟ್ಟಡವು ಗಿಡ ಪೊದೆಗಳಿಂದ ತುಂಬಿ ಹೋಗಿದೆ. ಮನುಷ್ಯರಿಗೆ ವಾಸಸ್ಥಾನವಾಗಬೇಕಿದ್ದ ಈ ಕಟ್ಟಡ ಇದೀಗ ಇಲಿ, ಹೆಗ್ಗಣ ಮತ್ತು ನಾಯಿಗಳಿಗೆ ಆಶ್ರಯತಾಣವಾಗಿದೆ.

dsc_5856

1980-84 ರ ಸಮಯದಲ್ಲಿ ವಿಶ್ವಬ್ಯಾಂಕ್‍ನ ಎಎಪಿ ಯೋಜನೆಯ ಅಡಿಯಲ್ಲಿ ಈ ಕಟ್ಟಡವನ್ನು ನಿರ್ಮಿಸಲಾಗಿತ್ತು. ಸುಮಾರು 14 ಸೆಂಟ್ಸ್ ಜಾಗದಲ್ಲಿ ಉತ್ತಮ ಸೌಲಭ್ಯಗಳ ಮೂಲಕ ಇದನ್ನು ನಿರ್ಮಿಸಲಾಗಿತ್ತು. ಈ ಕಟ್ಟಡವು ಕೃಷಿ ಸಹಾಯಕ ಅಧಿಕಾರಿಗಳಿಗೋಸ್ಕರವೇ ನಿರ್ಮಿಸಲ್ಪಟ್ಟಿತು. ಕಾಲಾನಂತರ ಆ ಹುದ್ದೆಯಲ್ಲಿದ್ದ ವ್ಯಕ್ತಿ ನಿವೃತ್ತಿ ಹೊಂದಿದರು. ತದನಂತರ ಈ ಹುದ್ದೆಯೆ ಇಲ್ಲವಾಗಿ ಹೋಯಿತು. ಹಿಂದೆ ಹೆಚ್ಚು ಹುದ್ದೆಗಳಿದ್ದು ಈಗ ಕೆಲವೇ ಹುದ್ದೆಗಳಿವೆ. ಆದುದರಿಂದ ಕಟ್ಟಡದ ಅವಶ್ಯಕತೆಯೇ ಇಲ್ಲವಾಯಿತು ಎಂಬುದು ಕೃಷಿ ಅಧಿಕಾರಿಗಳ ಮಾತು.

dsc_5855

ಮೂಲಭೂತ ಸೌಕರ್ಯಗಳ ಕೊರತೆ ಅನುಭವಿಸುತ್ತಿರುವ ಅನೇಕ ಇಲಾಖೆಗಳು ಇರುವಾಗ ಇದ್ದ ಸೌಲಭ್ಯವನ್ನು ಹಾಳಾಗಲು ಬಿಡುತ್ತಿರುವುದು ದುರಂತವೇ ಸರಿ. ಸರ್ಕಾರ ಆದಷ್ಟು ಬೇಗ ಎಚ್ಚೆತ್ತುಕೊಳ್ಳಬೇಕು. ಸರ್ಕಾರದ ವಸ್ತುವನ್ನು ಹಾಳಾಗದಂತೆ ಕಾಪಾಡಬೇಕು. ಆದಷ್ಟು ಬೇಗ ಸೂಕ್ತ ವ್ಯವಸ್ಥೆ ಸರಕಾರ ಮಾಡಬೇಕು. ಸರಕಾರದ ಸೌಲಭ್ಯ ಪ್ರತಿಯೊಬ್ಬರಿಂದ ಸರಿಯಾದ ರೀತಿಯಲ್ಲಿ ಬಳಕೆಯಾಗಬೇಕು. ಹತ್ತಿರದಲ್ಲೇ ಇರುವ ಅಂಗನವಾಡಿಗೆ ಸ್ಥಳಾವಕಾಶದ ಅಭಾವ ಇದೆ. ಹೀಗಿರುವಾಗ ಯಾರೂ ಉಪಯೋಗಿಸದೆ ಇರುವ ಕಟ್ಟಡವನ್ನು ಅಂಗನವಾಡಿಗೆ ಒದಗಿಸಿಕೊಟ್ಟರೆ ಮಕ್ಕಳಿಗೆ ಬೇಕಾದ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುತ್ತದೆ ಎನ್ನುವುದು ಸ್ಥಳೀಯರೊಬ್ಬರ ಅಭಿಪ್ರಾಯ.

ನಮ್ಮಲ್ಲಿ ಈಗ ಸಿಬ್ಬಂದಿಗಳ ಸಂಖ್ಯೆ ಕಡಿಮೆ. ಹಾಗಾಗಿ ವಸತಿಗೃಹದ ಅವಶ್ಯಕತೆ ನಮಗೆ ಖಂಡಿತ ಇಲ್ಲ. ಬೇಕಾದರೆ ಆ ಕಟ್ಟಡವನ್ನು ಬೇರೆ ಇಲಾಖೆಗೆ ನೀಡಬಹುದು. ನಮ್ಮ ಅಭ್ಯಂತರವೇನಿಲ್ಲ ಎಂಬುದು ಬಂಟ್ವಾಳದ ಕೃಷಿ ಇಲಾಖೆಯ ಅಧಿಕಾರಿಗಳ ಅಂಬೋಣ. ಈ ವಸತಿ ಗೃಹ ಕೃಷಿ ಇಲಾಖೆಗೆ ಸೇರಿದೆ. ಹಾಗಾಗಿ ಅದು ಪಾಳು ಬಿದ್ದಿದ್ದರೂ ನಾವು ಏನೂ ಮಾಡಲು ಸಾಧ್ಯವಾಗುತ್ತಿಲ್ಲ. ಇದನ್ನು ನೋಡುವಾಗ ನಮಗೆ ಬೇಸರವಾಗುತ್ತದೆ. ಆದರೆ ನಮ್ಮ ಕೈಯಲ್ಲಿ ಏನೂ ಇಲ್ಲ. ಒಂದು ವೇಳೆ ಇದು ಪುರಸಭೆಗೆ ಸೇರಿದ್ದರೆ ಅದನ್ನು ಜನರ ಉಪಯೋಗಕ್ಕಾಗಿ ಹೇಗಾದರೂ ಉಪಯೋಗಿಸುತ್ತಿದ್ದೆವು- ದೇವದಾಸ ಶೆಟ್ಟಿ, ಪುರಸಭಾ ಸದಸ್ಯ

ಈ ಕಟ್ಟಡದ ಸಮೀಪದಲ್ಲೇ ನಮ್ಮ ಹಾಲಿನ ಡಿಪೋ ಇದೆ. ಸ್ಥಳಾವಕಾಶದ ಅಭಾವ ಇರುವುದರಿಂದ ತುಂಬಾ ಕಷ್ಟಪಟ್ಟು ವ್ಯವಸ್ಥೆ ಮಾಡುತ್ತಿದ್ದೇವೆ. ಒಂದು ವೇಳೆ ಇಲಾಖೆ ನಮಗೆ ಅವಕಾಶ ನೀಡಿದರೆ ಕಟ್ಟಡದ ವಿಶಾಲ ಜಾಗದಲ್ಲಿ ಹಾಲು ಉತ್ಪಾದಕರ ಸಂಘವನ್ನು ವ್ಯವಸ್ಥಿತವಾಗಿ ನಡೆಸಬಹುದು. ಸುಮ್ಮನೆ ಆ ಸ್ಥಳವನ್ನು ಪಾಳು ಬಿಡುವುದಕ್ಕಿಂತ ನಮಗೆ ಅವಕಾಶ ಕೊಡಲಿ – ವ್ಯವಸ್ಥಾಪಕಿ, ಮಂಡಾಡಿ ಹಾಲು ಉತ್ಪಾದಕರ ಸಂಘ

By suddi9

Leave a Reply

Your email address will not be published. Required fields are marked *