ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ವಿವಿಧೆಡೆ ಕಳೆದ ಒಂದು ವರ್ಷದಿಂದ ನಿರ್ಜನ ಪ್ರದೇಶದ ರಸ್ತೆಯಲ್ಲಿ ಸಂಚರಿಸುತ್ತಿದ್ದ ಒಂಟಿ ಮಹಿಳೆಯರಲ್ಲಿ ದಾರಿ ಕೇಳುವ ನೆಪದಲ್ಲಿ ಅವರ ಕತ್ತಿನ ಸರ ಎಗರಿಸಿ ಪರಾರಿಯಾಗುತ್ತಿದ್ದ ನಾಲ್ವರು ಸರಕಳ್ಳರನ್ನು ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿ ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

1btl-kallaru

ಬಂಧಿತರನ್ನು ಕಣ್ಣೂರು ದೈಯುಂಬು ಸಮೀಪದ ಬಲ್ಲೂರು ಗುಡ್ಡೆ ನಿವಾಸಿ ಬಶೀರ್ ಎಂಬವರ ಪುತ್ರ ನುಮಾನ್ ಯಾನೆ ನುಮಾನುಲ್ಲಾ(20), ಕಣ್ಣೂರು ಬೀಡು ನಿವಾಸಿ ಅಬ್ದುಲ್ ಕರೀಂ ಎಂಬವರ ಪುತ್ರ ಶಭಾಝ್ ಯಾನೆ ತುಕುಡಿ ಶಬಾಝ್(19), ಕಣ್ಣೂರು ಕುಂಡಾಲ ನಿವಾಸಿ ಬದ್ರುದ್ದೀನ್ ಎಂಬವರ ಪುತ್ರ ಶಭಾಝ್(20)ಹಾಗೂ ಮೂಲತಃ ವಳಚ್ಚಿಲ್ ನಿವಾಸಿಯಾಗಿದ್ದು, ಪ್ರಸಕ್ತ ಪುದು ಗ್ರಾಮದ ಕುಂಪನಮಜಲು ಎಂಬಲ್ಲಿ ವಾಸವಾಗಿರುವ ಅಬ್ದುಲ್ ಲತೀಫ್ ಎಂಬವರ ಪುತ್ರ ತೌಸೀಫ್(23) ಎಂದು ಗುರುತಿಸಲಾಗಿದೆ. ಇವರಿಂದ ಎರಡು ಬೈಕ್, ರೂ 2 ಲಕ್ಷ ಮೌಲ್ಯದ ಕರಿಮಣಿ, ರೋಪ್‍ಚೈನ್ ಮತ್ತಿತರ ನಾಲ್ಕು ಚಿನ್ನಾಭರಣ ಹಾಗೂ ಪ್ರತಿರೋಧ ಒಡ್ಡುತ್ತಿದ್ದ ಮಹಿಳೆಯರನ್ನು ಬೆದರಿಸಲು ಉಪಯೋಗಿಸುತ್ತಿದ್ದ ಚಾಕು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಭೂಷಣ್ ಜಿ. ಬೋರಸೆ ತಿಳಿಸಿದ್ದಾರೆ.

1btl-police

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಶನಿವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಆರೋಪಿಗಳು ಬಂಟ್ವಾಳ ವೃತ್ತ ವ್ಯಾಪ್ತಿಯ ಬಂಟ್ವಾಳ ನಗರ, ಗ್ರಾಮಾಂತರ, ವಿಟ್ಲ ಹಾಗೂ ಪುಂಜಾಲಕಟ್ಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಕಳ್ಳತನ ನಡೆಸಿದ್ದಾರೆ. ಈಚೆಗಷ್ಟೇ ಸಿದ್ಧಕಟ್ಟೆ ಸಮೀಪದ ಕೋರ್ಯಾರು ಮತ್ತು ಸೋರ್ಣಾಡು ಸಮೀಪದ ಕುರಿಯಾಳ ಎಂಬಲ್ಲಿ ಸರಕಳವು ನಡೆಸಿದ್ದಾರೆ. ಕಳೆದ ವರ್ಷ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಅಡ್ಯಾರ್ ಪದವು ಮತ್ತು ಕಣ್ಣೂರು ಚೆಕ್ ಪೋಸ್ಟ್ ಎಂಬಲ್ಲಿ ಎರಡು ಪಲ್ಸರ್ ಬೈಕ್ ಕದ್ದು ಇದೇ ಬೈಕಿನಲ್ಲಿ ಕೃತ್ಯ ಎಸಗುತ್ತಿದ್ದರು ಎಂದರು. ಆರಂಭದಲ್ಲಿ ನುಮಾನ್ ಮತ್ತು ತೌಸೀಫ್ ಪೊಲೀಸರ ಸೆರೆ ಸಿಕ್ಕಿದ್ದು, ಬಳಿಕ ಅವರು ನೀಡಿದ ಸುಳಿವಿನಂತೆ ಕಾರ್ಯಾಚರಣೆ ನಡೆಸಿ ಇತರ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಪೈಕಿ ನುಮಾನ್ ವಿರುದ್ಧ ಜಿಲ್ಲೆಯಾದ್ಯಂತ ವಿವಿಧ ಠಾಣೆಯಲ್ಲಿ 7 ಸುಳಿಗೆ, ಕನ್ನ, ಕಳವು ಪ್ರಕರಣ ದಾಖಲಾಗಿದ್ದು, ಕೆಲವು ಸಲ ಜೈಲು ಸೇರಿ ಬಳಿಕ ಬಿಡುಗಡೆಗೊಂಡಿದ್ದಾನೆ. ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಮತ್ತು ಇನ್ಸ್‍ಪೆಕ್ಟರ್ ಬಿ.ಕೆ.ಮಂಜಯ್ಯ ಇವರ ನಿರ್ದೇಶನದಂತೆ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಎ.ಕೆ., ಸಿಬ್ಬಂದಿ ಜನಾರ್ದನ, ಜಗದೀಶ, ಜಯಕುಮಾರ್, ನಝೀರ್, ಸುರೇಶ್, ಪ್ರಶಾಂತ್, ಸುನಿತಾ, ಗಿರೀಶ್, ನರೇಶ್, ವಿಜಯೇಶ್ವರ, ಸಂಪತ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಎಸ್ಪಿ ಡಾ.ವೇದಮೂರ್ತಿ, ಇನ್ಸ್‍ಪೆಕ್ಟರ್ ಬಿ.ಕೆ.ಮಂಜಯ್ಯ, ಎಸೈ ರಕ್ಷಿತ್ ಮತ್ತಿತರರು ಇದ್ದರು.

By suddi9

Leave a Reply

Your email address will not be published. Required fields are marked *