ಬಂಟ್ವಾಳ : ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ 15 ದಿನಗಳ ಹಿಂದೆ ಲೋಕಾರ್ಪಣೆಗೊಂಡ `ಜೋಡುಮಾರ್ಗ ಉದ್ಯಾನವನ’ಕ್ಕೆ ಅ.24 ಸೋಮವಾರದಿಂದ  ಒಂದು ತಿಂಗಳುಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಈ ಕುರಿತು ಉದ್ಯಾನವನದ ಗೇಟಿಗೆ ಬಿತ್ತಿಪತ್ರವನ್ನು ಹಚ್ಚಲಾಗಿದೆ. ಉದ್ಯಾನವನ ಉದ್ಘಾಟನೆಯಾದ ಬಳಿಕ ಅಪಾರವಾದ ಜನಸಂದಣಿಯ ಹಿನ್ನೆಲೆಯಲ್ಲಿ ಇಲ್ಲಿನ ಕೆಲವೊಂದು ಸೌಂದರ್ಯ ವರ್ಧಕ ಸೊತ್ತುಗಳು ಹಾನಿಗೊಂಡಿರುವುದರಿಂದ ಇವುಗಳ ಪುನಶ್ಚೇತನಗೊಳಿಸಿ ಸೌಂದರ್ಯ ಹೆಚ್ಚಿಸುವ ನಿಟ್ಟಿನಲ್ಲಿ ಅಕ್ಟೋಬರ್ 24ರಿಂದ ಮುಂದಿನ 15 ದಿನಗಳ ಕಾಲ ಉದ್ಯಾನವನಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಪುರಸಭಾ ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆ.

jodu-3

ಆದರೆ ಉದ್ಯಾನವನದೊಳಗೆ ಗಿಡಗಳ ನಿರ್ವಹಣೆ ಸೇರಿದಂತೆ ಕೆಲವೊಂದು ಪುನಶ್ಚೇತನ ಕೆಲಸಗಳಿಗೆ ಕನಿಷ್ಠ ಒಂದು ತಿಂಗಳಾದರೂ ಬೇಕಾಗಬಹುದು ಎಂದು ಇಲ್ಲಿನ ಸಿಬ್ಬಂದಿಗಳು ಪುರಸಭೆಗೆ ತಿಳಿಸಿದ್ದಾರೆ. ಹೀಗಿದ್ದು 20 ದಿನದೊಳಗಾಗಿ ಎಲ್ಲವನ್ನೂ ಸರಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ಬಿಟ್ಟುಕೊಡುವಂತೆ ಪುರಸಭೆಯಿಂದ ಕೇಳಿಕೊಳ್ಳಲಾಗಿದೆ ಎಂದು ಮುಖ್ಯಾಧಿಕಾರಿ ತಿಳಿಸಿದ್ದಾರೆ. ಸದ್ಯ ಉದ್ಯಾನವನದ ಗೇಟಿಗೆ 1 ತಿಂಗಳುಗಳ ಕಾಲ ಸಾರ್ವಜನಿಕರ ಪ್ರವೇಶಕ್ಕೆ ನಿಷೇಧಿಸಲಾಗಿದೆ ಎಂದು ಬಿತ್ತಿಪತ್ರವನ್ನು ಹಚ್ಚಲಾಗಿದೆ. ಸಂಜೆ 4 ಗಂಟೆಯ ನಂತರ ಉದ್ಯಾನವನದೊಳಗೆ ಸಾರ್ವಜನಿಕರ ಪ್ರವೇಶಕ್ಕೆ ಕಲ್ಪಿಸಲಾಗಿದ್ದು ಸೋಮವಾರವೂ ವಿಹಾರಕ್ಕಾಗಿ ಹಲವಾರು ಮಂದಿ ಇಲ್ಲಿಗಾಗಮಿಸಿ ಮುಚ್ಚಲ್ಪಟ್ಟ ಗೇಟನ್ನು ನೋಡಿ ನಿರಾಸೆಯಿಂದ ವಾಪಾಸಾಗಿದ್ದಾರೆ.

27btl-park111

ಅ.9ರಂದು ಲೋಕಾರ್ಪಣೆಗೊಂಡಿತು : ಪರಿಸರ ಇಲಾಖೆಯ ನಿರ್ಮಲ ಬಂಟ್ವಾಳ ಯೋಜನೆಯಡಿ ಜಿಲ್ಲಾ ಉಸ್ತುವಾರಿ ಸಚಿವ ರಮನಾಥ ರೈಯವರ ವಿಶೇಷ ಮುತುವರ್ಜಿಯಿಂದ ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ಜೋಡುಮಾರ್ಗ ಉದ್ಯಾನವನ ನಿರ್ಮಾಣಗೊಂಡಿತ್ತು. ಅಕ್ಟೋಬರ್ 9ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಈ ಉದ್ಯಾನವನದ ಉದ್ಘಾಟನೆಯನ್ನು ನೆರವೇರಿಸಿದ್ದು ಸಾರ್ವಜನಿಕರಿಗೆ ಉಚಿತ ಪ್ರವೇಶ ನೀಡಲಾಗಿತ್ತು. ಅಂದಿನಿಂದಲೇ ಶಾಲಾ-ಕಾಲೇಜುಗಳಿಗೆ ರಜಾ ದಿನಗಳು ಆಗಿದ್ದುದರಿಂದ ಪ್ರತಿನಿತ್ಯವೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತನ್ನ ಮಕ್ಕಳೊಂದಿಗೆ ಉದ್ಯಾನವನಕ್ಕೆ ವಿಹಾರಕ್ಕಾಗಿ ಆಗಮಿಸಿದ್ದರು.

jodu-marga-2

ಈ ಸಂದರ್ಭದಲ್ಲಿ ಕೆಲವೊಂದು ವಿಹಾರಿಗಳ ಅಶಿಸ್ತಿನ ವರ್ತನೆಯಿಂದಾಗಿ ಉದ್ಯಾನವನದ ಸೌಂದರ್ಯಕ್ಕಾಗಿ ಇರಿಸಲಾಗಿದ್ದ ಪ್ಲಾಸ್ಟರ್ ಆಫ್ ಪ್ಯಾರಿಸ್ ನವಿಲಿನ ಮೇಲೆ ಕುಳಿತು ಹಾನಿಗೊಳಿಸಲಾಗಿದೆ. ಹಾಗೆಯೇ ಬಿದಿರಿನ ಮಾದರಿಯ ಕಂಬ, ಹಣಬೆ, ಹೂ ಗಿಡಗಳನ್ನು ಪೋಟೋ ಕ್ಲಿಕ್ಕಿಸುವ ಭರದಲ್ಲಿ ಹಾನಿಪಡಿಸಲಾಗಿದೆ. ಪೈಬರ್ ಕಲಾಕೃತಿ, ಬಿದಿರಿನ ಗೂಟದ ಮಾದರಿಯಲ್ಲಿ ಅಳವಡಿಸಲಾದ ವಿದ್ಯುದ್ದೀಪಗಳು ಕೂಡ ಹಾನಿಗೊಂಡಿವೆ. ಇಲ್ಲಿನ ಹಸಿರು ಹಾಸುಗಳು ಕೂಡಾ ಹಾನಿಗೊಳಗಾಗಿವೆ ಎಂದು ತಿಳಿದು ಬಂದಿದೆ. ಸದ್ಯ ಇದರ ನಿರ್ವಹಣೆಯನ್ನು ಪ್ರಮೋದ್ ನರ್ಸರಿ ಸಂಸ್ಥೆ ನೋಡಿಕೊಳ್ಳುತ್ತಿದೆ. ಹಾನಿಗೊಳಗಾದ ಈ ಸೌಂದರ್ಯ ವರ್ಧಕ ಸೊತ್ತುಗಳ ದುರಸ್ಥಿಗೆ ಕನಿಷ್ಠ 50ರಿಂದ 75 ಸಾವಿರ ಬೇಕಾಗಬಹುದು ಎಂದು ಇಲ್ಲಿನ ಸಿಬ್ಬಂದಿಗಳು ತಿಳಿಸಿದ್ದಾರೆ.

jodu-marga

ಕನಿಷ್ಠ ದರ ವಸೂಲಿಗೆ ಚಿಂತನೆ : ರಜಾ ದಿನಗಳಲ್ಲಿ ಅಪಾರ ಜನಸಂಖ್ಯೆಯಲ್ಲಿ ವಿಹಾರಿಗಳು ಆಗಮಿಸಿದ್ದರಿಂದ ಅಶಿಸ್ತು ಉಂಟಾಗಿ ಪಾರ್ಕಿನ ಕಲಾಕೃತಿಗಳು ಹಾನಿಗೊಳಗಾದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈಯವರ ಅಧ್ಯಕ್ಷತೆಯಲ್ಲಿ ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮುಖ್ಯಾಧಿಕಾರಿ ಸುಧಾಕರ್ ಯೋಜನಾ ನಿರ್ದೇಶಕ ಪ್ರಸನ್ನ, ಗುತ್ತಿಗೆದಾರ ಸುಧಾಕರ ಶೆಟ್ಟಿ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕೆಲ ದಿನಗಳ ಹಿಂದೆ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆಯನ್ನು ನಡೆಸಿ ಪರಾಮರ್ಶೆ ನಡೆಸಲಾಗಿತ್ತು. ಹಾಗೆಯೇ ಇದರ ನಿರ್ವಹಣೆಯ ಬಗ್ಗೆಯೂ ಚರ್ಚೆ ನಡೆದಿತ್ತು. ಈ ಸಂದರ್ಭದಲ್ಲಿ ಉದ್ಯಾನವನದ ಪ್ರವೇಶಕ್ಕೆ ಕನಿಷ್ಠ ದರ ನಿಗದಿಪಡಿಸುವ ಬಗ್ಗೆಯೂ ಚರ್ಚೆ ನಡೆದಿದೆ. ಈ ಕುರಿತು ಪುರಸಭೆ ನಿರ್ಣಯ ಕೈಗೊಳ್ಳುವಂತೆ ಸಚಿವರು ಮುಖ್ಯಾಧಿಕಾರಿಯವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ. ಜೊತೆಗೆ ಮುಂದಿನ ಒಂದು ವರ್ಷದ ವೆರೆಗೆ ಇದರ ನಿರ್ವಹಣೆಯನ್ನು ಪ್ರಮೋದ್ ನರ್ಸರಿ ಸಂಸ್ಥೆಗೆ ವಹಿಸುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಮುಂದಿನ ದಿನದಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಹಾಗೂ ಉಚಿತ ವೈಫೈ ಸೌಲಭ್ಯವನ್ನು ಕಲ್ಪಿಸಲು ನಿರ್ಧರಿಸಲಾಗಿದ್ದು ಈ ನಿಟ್ಟಿನಲ್ಲಿ ಉದ್ಯಾನವನದ ಪ್ರವೇಶಕ್ಕೆ ಕನಿಷ್ಠ 10 ರೂ. ದರವನ್ನು ವಸೂಲಿಗೆ ಚಿಂತನೆ ನಡೆದಿದೆ. ಜತೆಗೆ ಇಬ್ಬರು ಗಾರ್ಡನ್, ಗೇಟ್ ಕೀಪರ್, ಹಾಗೂ ಮ್ಯಾನೇಜರ್ ಸೇರಿದಂತೆ ಐವರನ್ನು ಇಲ್ಲಿನ ನಿರ್ವಹಣೆಗೆ ನಿಯುಕ್ತಿಗೊಳಿಸುವ ಬಗ್ಗೆಯೂ ಚರ್ಚಿಸಲಾಗಿದೆ.

ಕೌನ್ಸಿಲ್ ಸಭೆಯಲ್ಲಿ ಚರ್ಚೆ : ಜೋಡುಮಾರ್ಗ ಉದ್ಯಾನವನದ ಪ್ರವೇಶಕ್ಕೆ ಸಾರ್ವಜನಿಕರಿಂದ ದರ ವಸೂಲಿ ಮಾಡುವ ಕುರಿತು ಈಗಾಗಲೇ ಚರ್ಚೆ ನಡೆದಿದ್ದು ಈ ಬಗ್ಗೆ ಪುರಸಭೆಯ ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಮುಖ್ಯಾಧಿಕಾರಿ ಸುಧಾಕರ್ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *