ಬಂಟ್ವಾಳ : ಶಾಲಾ-ಕಾಲೇಜು ವಾರ್ಷಿಕೋತ್ಸವಗಳು ಕೇವಲ ವಿದ್ಯಾರ್ಥಿಗಳ ಮನೋರಂಜನೆಗಾಗಿ ಇರುವ ಸಂಭ್ರಮಾಚರಣೆ ಅಲ್ಲ. ಬದಲಾಗಿ ಪೋಷಕರು ತಮ್ಮ ಮಕ್ಕಳ ಪಠ್ಯೇತರ ಚಟುವಟಿಕೆಗಳನ್ನು ನೋಡಿ ತಿಳಿದುಕೊಳ್ಳಲು ಇರುವ ಸುವರ್ಣಾವಕಾಶ ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರತಿಭಾ ದಿನಾಚರಣೆ ಹಾಗೂ ದಾನಿಗಳ ನೆರವಿನಿಂದ ನಿರ್ಮಿಸಲಾಗಿರುವ ನೂತನ ಕೊಠಡಿಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಶಾಲಾ-ಕಾಲೇಜು ವಾರ್ಷಿಕೋತ್ಸವಗಳಲ್ಲಿ ವಿದ್ಯಾರ್ಥಿ ಪೋಷಕರು ಕಡ್ಡಾಯವಾಗಿ ಭಾಗವಹಿಸಿ ತಮ್ಮ ಮಕ್ಕಳ ಕಲಿಕಾ ಹಾಗೂ ಪಠ್ಯೇತರ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳುವುದರ ಜೊತೆಗೆ ಸಂಸ್ಥೆಯ ಆಗು-ಹೋಗುಗಳ ಬಗ್ಗೆಯೂ ಅರಿತುಕೊಂಡು ಶಿಕ್ಷಣ ಸಂಸ್ಥೆಯ ಬೆಳವಣಿಗೆಯಲ್ಲಿ ಪಾಲುದಾರರಬೇಕೆಂದು ಕರೆ ನೀಡಿದರು.
ಬಿ.ಮೂಡ ಸರಕಾರಿ ಕಾಲೇಜು ಖಾಸಗಿ ಕಾಲೇಜುಗಳನ್ನೂ ಮೀರಿದ ಸಾಧನೆ ಮಾಡುತ್ತಿದ್ದು, ಅತ್ಯಂತ ಸಂತಸದ ವಿಚಾರವಾಗಿದ್ದು, ಕಾಲೇಜು ಅಭಿವೃದ್ದಿಯಲ್ಲಿ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದ ಕಾರ್ಯವೈಖರಿ ಶ್ಲಾಘನೀಯ ಎಂದು ಕೊಂಡಾಡಿದ ಸಚಿವರು ಕಾಲೇಜಿನ ಬಾಕಿ ಉಳಿದಿರುವ ಅಭಿವೃದ್ದಿ ಕಾರ್ಯಗಳಿಗೆ ಶೀಘ್ರ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು.
ಮೂಡಬಿದ್ರೆ ಜೈನ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಮುನಿರಾಜ ರೆಂಜಾಳ ವಿಶೇಷ ಶೈಕ್ಷಣಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ಬ್ಯಾಂಕ್ ಮಹಾ ಪ್ರಬಂಧಕ ಚಂದ್ರಶೇಖರ್ ರಾವ್, ಮಂಗಳೂರಿನ ಉದ್ಯಮಿ ತಾರಾನಾಥ ಶೆಟ್ಟಿ ಬೋಳಾರ, ಬಂಟ್ವಾಳ ತಾಲೂಕು ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ ಕೆ. ಮಾಯಿಲಪ್ಪ ಸಾಲಿಯಾನ್, ಪುರಸಭಾ ಸದಸ್ಯರಾದ ಮುಹಮ್ಮದ್ ಇಕ್ಬಾಲ್, ಜಗದೀಶ್ ಕುಂದರ್ ಭಾಗವಹಿಸಿದ್ದರು.
ಕಾಲೇಜು ಅಭಿವೃದ್ದಿ ಸಮಿತಿ ಕಾರ್ಯಾಧ್ಯಕ್ಷ ಪ್ರೇಮ್ ಪ್ರಕಾಶ್ ಡಿ’ಕ್ರೂಸ್, ಸದಸ್ಯರುಗಳಾದ ಉಮೇಶ್ ಬೋಳಂತೂರು, ಜಿ. ಮುಹಮ್ಮದ್, ಲೋಕೇಶ್ ಪೂಜಾರಿ, ಆನಂದ ಸಾಲ್ಯಾನ್, ಸತೀಶ್ ಕುಲಾಲ್, ವೆಂಕಟೇಶ್ ನಾಯಕ್, ಲತೀಫ್ ಖಾನ್ ಗೂಡಿನಬಳಿ, ಸುಧಾಕರ ಮಡಿವಾಳ, ಪಿ.ಎಂ. ಅಶ್ರಫ್ ಪಾಣೆಮಂಗಳೂರು, ಇಂದಿರಾ ಚಂದಪ್ಪ, ಹಾಜಿ ಪಿ. ಮುಹಮ್ಮದ್ ರಫೀಕ್, ಡಿ.ಎಂ. ಕುಲಾಲ್, ರಮೇಶ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಇದೇ ವೇಳೆ ನಿಟ್ಟೆ ವಿದ್ಯಾ ಸಂಸ್ಥೆಯ ವತಿಯಿಂದ ನಿರ್ಮಾಣಗೊಂಡ ನೂತನ ಕೊಠಡಿಯನ್ನು ಸಚಿವ ರಮಾನಾಥ ರೈ ಹಾಗೂ ಕರ್ನಾಟಕ ಬ್ಯಾಂಕ್ ವತಿಯಿಂದ ನಿರ್ಮಾಣಗೊಂಡ ಕೊಠಡಿಯನ್ನು ಬ್ಯಾಂಕ್ ಮಹಾಪ್ರಬಂಧಕ ಚಂದ್ರಶೇಖರ್ ರಾವ್ ಲೋಕಾರ್ಪಣೆಗೊಳಿಸಿದರು. ಕಟ್ಟಡ ನಿರ್ಮಾಣ ಗುತ್ತಿಗೆದಾರ ಓಸ್ವಾಲ್ಡ್ ಗೋವಿಯಸ್ ಅವರನ್ನು ಸಚಿವರು ಕಾಲೇಜು ಸಮಿತಿ ಪರವಾಗಿ ಸನ್ಮಾನಿಸಿದರು. ಇದೇ ಸಂದರ್ಭ ವಿವಿಧ ಸ್ಪರ್ಧಾ ವಿಜೇತ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಚಿವರು ಬಹುಮಾನ ವಿತರಿಸಿದರು. ಬಂಟ್ವಾಳ ಪುರಸಭಾ ವತಿಯಿಂದ ಎಸ್ಸಿ-ಎಸ್ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಖಾಸಗಿ ವ್ಯಕ್ತಿಗಳಿಂದ ಕೊಡಮಾಡಲ್ಪಟ್ಟ ವಿದ್ಯಾರ್ಥಿ ವೇತನವನ್ನು ಅರ್ಹ ವಿದ್ಯಾರ್ಥಿಗಳಿಗೆ ಇದೇ ವೇಳೆ ವಿತರಿಸಲಾಯಿತು.
ಕಾಲೇಜು ಪ್ರಾಂಶುಪಾಲೆ ಸರಸ್ವತಿ ಬಿ. ಸ್ವಾಗತಿಸಿ, ಉಪನ್ಯಾಸಕ ಯೂಸುಫ್ ವಂದಿಸಿದರು. ಉಪನ್ಯಾಸಕರಾದ ದಾಮೋದರ ವರದಿ ವಾಚಿಸಿ, ಬಾಲಕೃಷ್ಣ ನಾಯ್ಕ ವಿದ್ಯಾರ್ಥಿಗಳ ಬಹುಮಾನ ಪಟ್ಟಿ ವಾಚಿಸಿದರು. ಯಶೋಧಾ ಕೆ. ಹಾಗೂ ಅಬ್ದುಲ್ ರಝಾಕ್ ಅನಂತಾಡಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.
