ಬಂಟ್ವಾಳ: ಸರಕಾರ ಬೋರೆವೆಲ್ ಕೊರೆಯುವುದು ನಿಷೇಧಿಸಿ ಹೊರಡಿಸಿರುವ ಆದೇಶವನ್ನು ರದ್ದು ಮಾಡಿ ಕೃಷಿ ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡಿರುವ ಕೃಷಿಕರಿಗೆ ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಅನುಮತಿ ನೀಡಬೇಕೆಂದು ಸರಕಾರಕ್ಕೆ ಮನವಿ ಮಾಡಲು ಕುಕ್ಕಿಪಾಡಿ ಗ್ರಾಮ ಪಂಚಾಯತ್ ಗ್ರಾಮಸಭೆಯಲ್ಲಿ ನಿರ್ಣಯಿಸಲಾಯಿತು. ದಿನಾಂಕ: 22-12-2016 ರಂದು ನಡೆದ ಕುಕ್ಕಿಪಾಡಿ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಮಾತನಾಡಿದ ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು ಸರ್ಕಾರದ ಈ ಹೊಸ ಆದೇಶದಿಂದಾಗಿ ಕೃಷಿ ತೋಟಗಾರಿಕೆ ಬೆಳೆಗಳನ್ನು ನಂಬಿಕೊಂಡು ಜೀವನ ಮಾಡುತ್ತಿರುವ ರೈತರು ದಿಗ್ಭ್ರತೆಗೊಂಡಿದ್ದು ಕರಾವಳಿ ಜಿಲ್ಲೆಗಳಲ್ಲಿ ಕೊಳವೆ ಬಾವಿ ನೀರಿನ ಮೂಲಕ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ಅಂತರ್ಜಲ ಮಟ್ಟವನ್ನು ಏರಿಸುವ ಪರ್ಯಾಯ ವ್ಯವಸ್ಥೆ ಮಾಡಿ ತದನಂತರ ಕೊಳವೆ ಬಾವಿ ನಿಷೇಧದ ಬಗ್ಗೆ ಕ್ರಮ ಕೈಗೊಳ್ಳಲಿ ಎಂದರು.
ಕಳೆದ ಗ್ರಾಮ ಸಭೆಯಲ್ಲಿ ಪ್ರಸ್ತಾಪಿಸಿದ ಕುಕ್ಕಿಪಾಡಿ ಗ್ರಾಮದ ದೇವಸ ರಸ್ತೆ ಬದಿಯ ವಿದ್ಯತ್ ಕಂಬ ಸ್ಥಳಾಂತರ ಗ್ರಾಮಸ್ಥರ ಬೇಡಿಕೆ ಈಡೇರದ ಬಗ್ಗೆ ಮೆಸ್ಕಾಂ ಇಂಜಿನಿಯರರನ್ನು ಪ್ರಶ್ನಿಸಿದರು. ಸರ್ಕಾರಿ ಜಾಗ ಅತಿಕ್ರಮಣದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡರು.ಸಿದ್ದಕಟ್ಟೆಗೆ ಹೋಬಳಿ ಮಟ್ಟದ ರೈತ ಸಂಪರ್ಕ ಕೇಂದ್ರ ತೆರೆಯಲು ಗ್ರಾಮಸ್ಥರು ಬೇಡಿಕೆ ಮುಂದಿಟ್ಟರು.
ಎನ್.ಆರ್.ಇ.ಜಿ ಯಲ್ಲಿ ಸಣ್ಣ ರೈತ ದೊಡ್ಡ ರೈತ ಎಂದು ತಾರತಮ್ಯ ಬಿಟ್ಟು ಎಲ್ಲಾ ಭೂಸುಧಾರಣೆ, ಸ್ತ್ರೀ ಪ್ರಧಾನ ಕುಟುಂಬಗಳಿಗೆ ಉದ್ಯೋಗ ಚೀಟಿ ನೀಡುವುದರ ಮುಖಾಂತರ ವೈಯಕ್ತಿಕ ಕಾಮಗಾರಿ ನೀಡಬೇಕು ಎಂಬ ಗ್ರಾಮಸ್ಥರ ಮನವಿಗೆ ಪೂರಕ ಸ್ಪಂದನೆ ಮಾಡಲು ನಿರ್ಣಯಿಸಲಾಯಿತು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ತುಂಗಪ್ಪ ಬಂಗೇರ ಮಾತನಾಡಿ ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಪಾರದರ್ಶಕತೆಯಲ್ಲಿ ಎಲ್ಲಾ ಜನರಿಗೂ ಲಭಿಸುವಂತಾಗಲೂ ಗ್ರಾಮ ಪಂಚಾಯತ್ ಕಟಿಬದ್ದರಾಗತಕ್ಕದ್ದು. ಎಂದರು.
ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಸುಂದರ ಶಾಂತಿ ಮಾತನಾಡಿ ಕಳೆದ 1 ವರ್ಷದ ಅವಧಿಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಕೆಲವೊಂದು ಸಮಸ್ಯೆಗಳನ್ನು ಪಕ್ಷಾತೀತವಾಗಿ ನಿವಾರಣೆ ಮಾಡಲಾಗಿದ್ದು ಸಂಪೂರ್ಣ ಗ್ರಾಮಾಭಿವೃದ್ದಿಗೆ ಸಮುದಾಯದ ಸಹಕಾರ ಕೋರಿದರು.
ನೋಡಲ್ ಅಧಿಕಾರಿ ಕೃಷಿ ಸಹಾಯಕ ನಿರ್ದೇಶಕರಾಗಿರುವ ಪಿ.ಎಫ್.ಮಿರಾಂದ, ಗ್ರಾಮ ಪಂಚಾಯತರ್ ಉಪಾಧ್ಯಕ್ಷೆ ವಿನಯ ಡಿ.ಪೂಜಾರಿ, ಸದಸ್ಯರಾದ ಸುಧಾಕರ ಶೆಟ್ಟಿ, ಸುಧೀಂದ್ರ ಶೆಟ್ಟಿ, ಲಿಂಗಪ್ಪ ಪೂಜಾರಿ, ಯೋಗೀಶ್ ಆಚಾರ್ಯ, ವನಜ, ರತ್ನ, ಹರಿಣಿ, ಬೇಬಿ, ಸುಜಾತ, ಶೋಭ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಗಣೇಶ್ ಶೆಟ್ಟಿಗಾರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.
