ಬಂಟ್ವಾಳ: ತಾಲ್ಲೂಕಿನ ಕೊಯಿಲ ಮತ್ತು ಪಂಜಿಕಲ್ಲು ಗ್ರಾಮದ ಗಡಿಭಾಗ ಪಾಂಡವರಕಲ್ಲು ಎಂಬಲ್ಲಿನ ಅರಣ್ಯ ಇಲಾಖೆಗೆ ಸೇರಿದ ಗೇರು ತೋಟದ ನಡುವೆ ಪ್ರೇಯಸಿಯನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿದ ಯುವಕನೊಬ್ಬ ಬಳಿಕ ಅಲ್ಲೇ ಗೇರು ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳವಾರ ಸಂಜೆ ನಡೆದಿದೆ. ಮೃತರನ್ನು ಕೊಯಿಲ ಸಮೀಪದ ಕುದ್ಮಾಣಿ ನಿವಾಸಿ ಮೋಹನ ಪೂಜಾರಿ ಎಂಬವರ ಪುತ್ರ ಸುಜಿತ್ (28) ಮತ್ತು ಬಂಟ್ವಾಳ ಕಸ್ಬಾ ಗ್ರಾಮದ ದಿವಂಗತ ಲಕ್ಷ್ಮಣ ಪೂಜಾರಿ ಎಂಬವರ ಪುತ್ರಿ ದಿವ್ಯಾ(23) ಎಂದು ಗುರುತಿಸಲಾಗಿದೆ.

c-2

ಈ ಹಿಂದೆ ಮಂಗಳೂರಿನ ಕನ್ಸ್ಟ್ರಕ್ಷನ್ ಸಂಸ್ಥೆಯೊಂದರಲ್ಲಿ ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದ ಸುಜಿತ್ ಇತ್ತೀಚೆಗೆ ಮಂಗಳೂರಿನ ಕಣ್ಣೂರು ಎಂಬಲ್ಲಿ ಸೆಂಟ್ರಿಂಗ್ ಕೆಲಸಕ್ಕೆ ಹೋಗುತ್ತಿದ್ದರು. ಕಳೆದ ಮೂರು ವರ್ಷಗಳಿಂದ ದಿವ್ಯಾ ಕೂಡಾ ಪಿಯೂಸಿ ಶಿಕ್ಷಣ ಮುಗಿಸಿ ಮಂಗಳೂರಿನ ಕುದ್ರೋಳಿ ಎಂಬಲ್ಲಿ ಕಂಪ್ಯೂಟರ್ ಸೇಲ್ಸ್ ಮತ್ತು ಸರ್ವಿಸ್ ಸಂಸ್ಥೆಯೊಂದರಲ್ಲಿ ಉದ್ಯೋಗದಲ್ಲಿದ್ದರು ಎನ್ನಲಾಗಿದೆ. ಇದರಿಂದಾಗಿ ಕಳೆದ ಮೂರು ವರ್ಷಗಳಿಂದಲೂ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ವರ್ಷದಿಂದ ಯುವತಿ ಪ್ರೀತಿ ನಿರಾಕರಿಸುತ್ತಿದ್ದುದೇ ಈ ಕೃತ್ಯಕ್ಕೆ ಕಾರಣ ಎಂದು ಮೃತರ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ. ಇನ್ನೊಂದೆಡೆ ಸುಜಿತ್ ತನಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಕಳೆದ ವರ್ಷವಷ್ಟೇ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ಮಾತುಕತೆ ನಡೆಸಿದ ಬಳಿಕ ಮೇಲ್ನೋಟಕ್ಕೆ ಇಬ್ಬರೂ ಬೇರೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯುವಕನು ಆಕೆಯನ್ನೇ ವಿವಾಹವಾಗುವುದಾಗಿ ಮನೆಯವರಲ್ಲಿ ತಿಳಿಸಿದ್ದು, ಆರಂಭದಲ್ಲಿ ಯುವತಿ ಕೂಡಾ ಯುವಕನ ಮನೆಗೆ ಬಂದಿದ್ದಾರೆ ಎಂದು ವಿವರಿಸಿದ್ದಾರೆ.

 c-3

 

ಮಂಗಳವಾರ ಬೆಳಿಗ್ಗೆ ಇವರಿಬ್ಬರೂ ಎಂದಿನಂತೆ ಮನೆಯಿಂದ ಕೆಲಸಕ್ಕೆಂದು ಹೊರಟಿದ್ದರು. ಯುವಕ ಸುಜಿತ್ ಮಾತ್ರ ತನ್ನ ಹೊಸ ಬೈಕನ್ನು ಮನೆಯಲ್ಲೇ ಬಿಟ್ಟು ಬಂದಿದ್ದು, ಮಧ್ಯಾಹ್ನ ವೇಳೆಗೆ ಯುವಕ ಸುಜಿತ್ ತನ್ನ ಸಂಬಂಧಿ ಕಿರಣ್ ಎಂಬವರಿಗೆ ಮೊಬೈಲ್ ಕರೆ ಮಾಡಿ ಪಾಂಡವರಗುಡ್ಡೆ ನೀರಿನ ಟ್ಯಾಂಕ್ ಬಳಿ ನಾವಿಬ್ಬರೂ ಸಾಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಯುವಕನ ಸ್ನೇಹಿತರು ಮತ್ತು ಮನೆಯವರು ಹಲವೆಡೆ ದೂರವಾಣಿ ಕರೆ ಮಾಡಿ ಹಲವೆಡೆ ವಿಚಾರಿಸಿದ್ದಾರೆ. ಇದೇ ವೇಳೆ ಪಂಜಿಕಲ್ಲು ಗೇರು ತೋಟದ ಬಳಿ ಯುವತಿ ದಿವ್ಯಾಳ ಹೊಸ ದ್ವಿಚಕ್ರ ವಾಹನ ಪತ್ತೆಯಾಗಿದೆ. ಇದರಿಂದ ಮತ್ತಷ್ಟು ಸಂಶಯಗೊಂಡ ಸ್ಥಳೀಯ ಕೋರೆ ಕಾರ್ಮಿಕರು ಮತ್ತಿತರರು ಗೇರು ತೋಟದಲ್ಲಿ ಹುಡುಕಾಟ ನಡೆಸಿದಾಗ ತೋಟದ ಮಧ್ಯೆ ಯುವತಿ ರಕ್ತದ ಮಡುವಿನಲ್ಲಿ ಬಿದ್ದಿದ್ದರೆ, ಯುವಕ ಅಲ್ಲೇ ಗೇರು ಮರವೊಂದರಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ನೇತಾಡುತ್ತಿರುವುದು ಕಂಡು ಬಂದಿದೆ. ಯುವತಿ ಎದೆ ಭಾಗಕ್ಕೆ ಚಾಕುವಿನಿಂದ ಅಲ್ಲಲ್ಲಿ ಇರಿದಿರುವ ದೃಶ್ಯ ಕಂಡು ಬಂದಿದ್ದು, ಇವರಿಬ್ಬರ ನಡುವೆ ತಳ್ಳಾಟ ನಡೆದಿರುವುವಂತೆ ಇಬ್ಬರ ಚಪ್ಪಲ್ಲಿ ಪ್ರತ್ಯೇಕ ಕಡೆಗಳಲ್ಲಿ ಚದುರಿ ಬಿದ್ದಿರುವ ದೃಶ್ಯ ಕಂಡು ಬಂದಿದೆ.

 c-5

 

ತಕ್ಷಣವೇ ಬಂಟ್ವಾಳ ಗ್ರಾಮಾಂತರ ಠಾಣಾಧಿಕಾರಿ ರಕ್ಷಿತ್ ಗೌಡ, ಇನ್ಸ್‍ಪೆಕ್ಟರ್ ಬಿ.ಕೆ.ಮಂಜಯ, ಡಿವೈಎಸ್ಪಿ ರವೀಶ್ ಸಿ.ಆರ್., ಎಸ್ಪಿ ಭೂಷಣ್ ಜಿ.ಬೊರಸೆ ಮತ್ತಿತರರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಸುರೇಶ ಕುಮಾರ್, ಗಿರೀಶ, ಜಗದೀಶ್, ಸುರೇಶ ಮತ್ತಿತರ ಪೊಲೀಸರು ಮಹಜರು ನಡೆಸಿದರು.c-6

 

ಈ ಸ್ಥಳದಲ್ಲಿ ಯುವಕನಿಗೆ ಸೇರಿದ ಬ್ಯಾಗ್ ಮತ್ತು ಇವರಿಬ್ಬರ ಮೂರು ಮೊಬೈಲ್, ಹೊಸ ಚಾಕು, ಹೊಸ ಕರಿಮಣಿ ಸರ ಮತ್ತು ಕಾಲುಂಗುರ ಪತ್ತೆಯಾಗಿದೆ. ಇದರಿಂದಾಗಿ ಯುವಕ ಪೂರ್ವ ಸಿದ್ಧತೆಯೊಂದಿಗೆ ಗೇರು ತೋಟಕ್ಕೆ ಯುವತಿಯನ್ನು ಕರೆಸಿರುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.c-1

 ಸುಜಿತ್ ತನ್ನ ತಂದೆ ತಾಯಿ ಮತ್ತು ಕಿರಿಯ ಸಹೋದರನೊಂದಿಗೆ ವಾಸವಾಗಿದ್ದರೆ, ದಿವ್ಯಾಳ ತಂದೆ ತೀರಿಕೊಂಡ ಪರಿಣಾಮ ತಾಯಿ ಚಂದ್ರಾವತಿ ಮತ್ತು ಇತರ ನಾಲ್ವರು ಕಿರಿಯ ಸಹೋದರಿಯರೊಂದಿಗೆ ತೀರಾ ಬಡತನ ಕುಟುಂಬದಲ್ಲಿ ಜೀವಿಸುತ್ತಿದ್ದರು.


By suddi9

Leave a Reply

Your email address will not be published. Required fields are marked *