ಬಂಟ್ವಾಳ: ಅವಿಭಜಿತ ಜಿಲ್ಲೆಯಲ್ಲಿ ಕೃಷಿ ಪದ್ಧತಿ ಮತ್ತು ಧಾರ್ಮಿಕ ನಂಟು ಹೊಂದಿರುವ ಅಹಿಂಸಾತ್ಮಕ ಕಂಬಳಕ್ಕೆ ಉಂಟಾಗಿರುವ ಅವೈಜ್ಞಾನಿಕ ತೊಡಕಿಗೆ ಸಂಬಂಧಿಸಿದಂತೆ ಇದೇ 30ರಂದು ಹೈಕೋರ್ಟಿನಲ್ಲಿ ಖಚಿತವಾಗಿ ನ್ಯಾಯಯುತ ಗೆಲುವು ಸಿಗಲಿದ್ದು, ಇದೇ 28ರಂದು ಮೂಡುಬಿದ್ರೆಯಲ್ಲಿ ನಡೆಯಲಿರುವ ಬೃಹತ್ ಕಂಬಳ ಹೋರಾಟಕ್ಕೆ ಜಿಲ್ಲೆಯಾದ್ಯಂತ ಪಕ್ಷಾತೀತ ಮತ್ತು ಧರ್ಮಾತೀತ ಬೆಂಬಲ ದೊರೆತಿದೆ ಎಂದು ಜಿಲ್ಲಾ ಕಂಬಳ ಸಮಿತಿ ಹಿರಿಯ ಸದಸ್ಯ, ಕಾನೂನು ಹೋರಾಟಗಾರ ಸೀತಾರಾಮ ಶೆಟ್ಟಿ ಬಂಟ್ವಾಳ್ ಹೇಳಿದ್ದಾರೆ. ತಾಲ್ಲೂಕಿನ ಬಿ.ಸಿ.ರೋಡ್‍ನಲ್ಲಿ ಮಂಗಳವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

kambla

ಪ್ರಾಣಿ ಹಿಂಸೆ ನೆಪದಲ್ಲಿ ಕಳೆದ ಎರಡು ವರ್ಷಗಳ ಹಿಂದೆ ‘ಪೇಟಾ’ ಸಂಸ್ಥೆಯು ಸುಮಾರು 68 ಸುಳ್ಳು ಆರೋಪಗಳನ್ನು ಸೃಷ್ಟಿಸಿ ಹೈಕೋರ್ಟಿಗೆ ಸಲ್ಲಿಸುವ ಮೂಲಕ ನ್ಯಾಯಾಲಯದ ದಿಕ್ಕು ತಪ್ಪಿಸಲು ಯತ್ನಿಸುತ್ತಿದೆ. ಈ ನಡುವೆ ಪ್ರಾಣಿ ದಯಾ ಸಂಘ ಮತ್ತು ಪ್ರಾಣಿ ಕ್ಷೇಮಾಭಿವೃದ್ಧಿ ಮಂಡಳಿ ಕೂಡಾ ಸಲ್ಲಿಸಿರುವ ಅನಗತ್ಯ ದೂರಿನ ಹಿಂದೆ ಕಂಬಳ ನಿಷೇಧದ ಷಡ್ಯಂತರ ಅಡಗಿದೆ ಎಂದು ಅವರು ಅನುಮಾನ ವ್ಯಕ್ತಪಡಿಸಿದರು.

ಕಂಬಳದಲ್ಲಿ ಕೋಣಗಳಿಗೆ ಹೆದರುವ, ಭೀತಿ ಮತ್ತು ಒತ್ತಡ ಸೃಷ್ಟಿಸುವ ಯಾವುದೇ ಸನ್ನಿವೇಶಗಳು ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಅವರು ಕಾಡಿನಲ್ಲಿ ಬದುಕುವ ಕಾಡು ಕೋಣಗಳು ಮತ್ತು ಕರಾವಳಿ ಜಿಲ್ಲೆಯ ಸಾಕು ಪ್ರಾಣಿ ಕೋಣಗಳಿಗೆ ಹೋಲಿಸಿರುವುದು ದುರದೃಷ್ಟಕರ ಎಂದರು.

‘ಪೇಟಾ’ ಸಂಸ್ಥೆ ಸದಸ್ಯ ಮಣಿಲಾಲ್ ಎಂಬವರು ಅಮಾನವೀಯವಾಗಿ ಕೋಣಗಳನ್ನು ವಧಿಸುವ ದೆಹಲಿ ಕಸಾಯಿಖಾನೆ ಇದರ ಸದಸ್ಯನಾಗಿದ್ದು, ಇಂತಹ ವ್ಯಕ್ತಿ ಕರಾವಳಿ ಜಿಲ್ಲೆಯ ರೈತರ ಜನಪ್ರಿಯ ಕ್ರೀಡೆ ಕಂಬಳದಿಂದ ಪ್ರಾಣಿ ಹಿಂಸೆಯಾಗುತ್ತಿದೆ ಎಂದು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವುದು ಹಾಸ್ಯಸ್ಪದವಾಗಿದೆ ಎಂದರು. ಈಗಾಗಲೇ ಕಂಬಳ ಉಳಿಸುವಂತೆ ಆಗ್ರಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಅವಿಭಜಿತ ಜಿಲ್ಲೆಯ ಸುಳ್ಯದಿಂದ ಬೈಂದೂರು ತನಕ ಸುಮಾರು 300ಕ್ಕೂ ಮಿಕ್ಕಿ ಗ್ರಾಮ ಪಂಚಾಯಿತಿ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯ ಪ್ರತಿ ಸಹಿತ ‘ಕಂಬಳ ಉತ್ಸವ’ ಎಂಬ ಪುಸ್ತಕ ಸಿದ್ಧಪಡಿಸಲಾಗಿದ್ದು, ಇದನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಹಿತ ಕೇಂದ್ರ ಕಾನೂನು ಸಚಿವ ರವಿಶಂಕರ್ ಅವರಿಗೆ ಸಲ್ಲಿಸಲಾಗುವುದು ಎಂದು ಅವರು ವಿವರಿಸಿದರು.

ಇದೇ 30ರಂದು ಹೈಕೋರ್ಟ್‍ನಲ್ಲಿ ಇಲ್ಲಿನ ಕಂಬಳದ ಪರವಾಗಿ ತೀರ್ಪು ಬರಲಿದೆ. ಇಲ್ಲದಿದ್ದಲ್ಲಿ ತಮಿಲ್ನಾಡಿನ ‘ಜಲ್ಲಿಕಟ್ಟು’ ಮಾದರಿಯಲ್ಲಿ ಸುಗ್ರೀವಾಜ್ಞೆ ಮೂಲಕ ಕಂಬಳ ನಿಷೇಧ ರದ್ದುಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರಿಗೆ ಆಶ್ವಾಸನೆ ನೀಡಿದ್ದಾರೆ ನೀಡಿದ್ದಾರೆ ಎಂದು ಜಿಲ್ಲಾ ಕಂಬಳ ತೀರ್ಪುಗಾರ ಎಡ್ತೂರು ರಾಜೀವ ಶೆಟ್ಟಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ಚಂದ್ರಪ್ರಕಾಶ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್, ಪ್ರಮುಖರಾದ ವಲೇರಿಯನ್ ಅಪ್ಪು ಡೇಸಾ, ಭಕ್ತಕುಮಾರ ಶೆಟ್ಟಿ, ಗ್ಲಾಡಿ ಡಿಕೋಸ್ತ, ಕೃಷ್ಣಾಪುರ ಪರಮೇಶ್ವರ ಸಾಲ್ಯಾನ್, ನಿರಂಜನ ರೈ ಮಠಂತಬೆಟ್ಟು, ಅವಿಲ್ ಮಿನೇಜಸ್, ಸತೀಶ್ಚಂದ್ರ ಸಾಲ್ಯಾನ್, ಬಾಲಕೃಷ್ಣ ಅಂಚನ್, ನವೀನ್ ಚಂದ್ರ ಆಳ್ವ ಇರುವೈಲುಗುತ್ತು, ವಿವೇಕ್, ಪುರಸಭಾ ಸದಸ್ಯ ಸದಾಶಿವ ಬಂಗೇರ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *