ಮೂಡುಬಿದಿರೆ: ಮಲಗಿ ಗಡದ್ದಾಗಿ ನಿದ್ದೆಯಲ್ಲಿದ್ದವರ ಮುಂದೆ ಮಂಡಿಯೂರಿ ಘರ್ಜಿಸಿ ಸಿಂಹವೊಂದು ಅಬ್ಬರಿಸಿದ್ದನ್ನು ಕಂಡರೆ ಏನಾದೀತು? ಎದುರಿದ್ದವರು ಅಲ್ಲಿಗೇ ಮೂರ್ಛೆ ಬೀಳುವುದು ಬಿಡಿ ಹೃದಯಾಘಾತವಾದರೂ ಅಚ್ಚರಿಯಿಲ್ಲ. ಇಂತಹದ್ದೇ ಆತಂಕದ ಸನ್ನಿವೇಶವೊಂದು ಇಲ್ಲಿನ ಮಾರೂರಿನಲ್ಲಿ ಕಳೆದ ಶನಿವಾರ ರಾತ್ರಿ ನಡೆಯಿತಾದರೂ ಸಕಾಲಿಕ ನೆರವಿನಿಂದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ ಎನ್ನುವುದೇ ನೆಮ್ಮದಿಯ ಸುದ್ದಿ.
ಅಂದು ಮಾರೂರಿನಲ್ಲಿ ಸಾರ್ವಜನಿಕ ಶ್ರೀ ಶನೀಶ್ವರ ಪೂಜಾ ಕಾರ್ಯಕ್ರಮ. ಸಮಿತಿಯ ವತಿಯಿಂದ ಎಡನೀರು ಮೇಳದ ಯಕ್ಷಗಾನ ಪ್ರದರ್ಶನಕ್ಕೆ ಬರೋಬ್ಬರಿ ಎರಡು ಸಾವಿರದಷ್ಟು ಜನ ಸೇರಿದ್ದರು. ತಡರಾತ್ರಿ 4.10 ರವೇಳೆಗೆ ಜಾಂಬವತಿ ಕಲ್ಯಾಣ ಪ್ರಸಂಗ ನಡೆದ ವೇಳೆಗೆ ಬೇಟೆಯ ಸನ್ನಿವೇಶ. ಕೊನೆಯ ಸಾಲುಗಳಲ್ಲಿ ಸೊಂಪಾಗಿ ನಿದ್ದೆಯಲ್ಲಿದ್ದವರೆನ್ನೆಲ್ಲ ಎಬ್ಬಿಸುತ್ತಾ ಘರ್ಜಿಸುತ್ತಾ ಯಕ್ಷ ಸಿಂಹವೊಂದು ರಂಗಸ್ಥಳದತ್ತ ನುಗ್ಗಿ ಬಂತು.
ಎದುರು ಸಾಲಲ್ಲೇ ನಿದ್ದೆಗೆ ಜಾರಿದ್ದ ವ್ಯಕ್ತಿಯೋರ್ವರನ್ನು ಸಿಂಹ ಕಂಡಿದೆ. ಅವರತ್ತ ತೆರಳಿ ಮಂಡಿಯೂರಿ ಘರ್ಜಿಸಿ ಎಬ್ಬಿಸಿ ರಾಳ ಬಿಸಾಕಿ ಬೆಂಕಿ ಎಬ್ಬಿಸಿ ರಂಗಸ್ಥಳಕ್ಕೆ ಏರಿದೆ. ಇಷ್ಟಾಗುವುದರೊಳಗೆ ನಿದ್ದೆಯಿಂದ ಎಚ್ಚರಗೊಂಡು ಸಿಂಹವನ್ನು ಕಂಡ ವ್ಯಕ್ತಿ ನೆಲಕ್ಕೊರಗಿದ್ದಾರೆ. ಕೈಕಾಲು ಬಡಿದು ಚಡಪಡಿಸಿದ್ದಾರೆ.

mbd_feb15_4
ಸಂಘಟಕರೆಲ್ಲ ಸೇರಿಕೊಂಡು ಅವರನ್ನೆತ್ತಿಕೊಂಡು ಪ್ರಥಮ ಚಿಕಿತ್ಸೆಗೆ ಮುಂದಾಗಿದ್ದಾರೆ. ಅಲ್ಲಿಯೂ ಚೇತರಿಕೆ ಕಾಣದೇ ಪೂಜಾ ಸಮಿತಿಯವರು, ಕೃಷ್ಣ ಗೆಳೆಯರ ಬಳಗದವರು ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಪ್ರಸಂಗ ಮುಂದುವರೆಯಿತಾದರೂ ಬಳಿಕ ಸಿಂಹದ ಮೂಡ್ ಆಫ್ ಆಗಿತ್ತು ಎನ್ನುವುದು ಪ್ರತ್ಯಕ್ಷದರ್ಶಿಗಳ ಹೇಳಿಕೆ. ಇತ್ತ ದಾಳಿಗೆ ತುತ್ತಾದವರು ಮೂರು ದಿನಗಳ ಬಳಿಕ ಆಸ್ಪತ್ರೆಯಿಂದ ಸುರಕ್ಷಿತವಾಗಿ ಬಿಡುಗಡೆ ಹೊಂದಿದ್ದಾರೆ ಎನ್ನುವಲ್ಲಿಗೆ ಪ್ರಕರಣ ಸುಖಾಂತ್ಯವಾಗಿದೆ. ಆದರೆ ಯಕ್ಷಾಂಗಣದಲ್ಲಿ ಸಿಂಹದ ಬೇಟೆಯ ಅಪರೂಪದ ಪ್ರಸಂಗ ವಾಟ್ಸಾಪ್ ಮೂಲಕ ಹರಿದಾಡುತ್ತಲೇ ಇದೆ.

By suddi9

Leave a Reply

Your email address will not be published. Required fields are marked *