ಬಂಟ್ವಾಳ: ಬ್ರಹ್ಮರಕೂಟ್ಲುವಿನ ಟೋಲ್ಗೇಟ್ನಲ್ಲಿ ದಾಂಧಲೆ ನಡೆಸಿ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಬಂಟ್ವಾಳ ಪುರಸಭೆಯ ಸದಸ್ಯ ಮಹಮ್ಮದ್ ಶರೀಫ್ ಸಾಮಾನ್ಯ ಸಭೆಗೆ ಗೈರು ಹಾಜರಾಗಿದ್ದರೂ ಹಾಜರಿ ಪುಸ್ತಕದಲ್ಲಿ ಸಭೆ ಮುಗಿದ ಬಳಿಕ ಕಾನೂನು ಬಾಹಿರವಾಗಿ ಹಾಜರಾತಿ ಹಾಕಿದ ಮತ್ತು ಕೋಟ್ಯಾಂತರ ರೂಪಾಯಿಗೆ ಕ್ರಿಯಾಯೋಜನೆ ತಯಾರಿಸಿ ಅಕ್ರಮ ನಿರ್ಣಯ ಕೈ ಗೊಂಡ ಪ್ರಕರಣಗಳೆರಡು ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರ ಅಂಗಳಕ್ಕೆ ತಲುಪಿದೆ,
ಪುರಸಭೆಯ ವಿಪಕ್ಷ ಬಿಜೆಪಿ ಸದಸ್ಯರು ಈ ಎರಡೂ ಹಗರಣದ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಆಯುಕ್ತರಿಗೆ ದಾಖಲೆ ಸಮೇತವಾಗಿ ವಿವರವಾದ ದೂರನ್ನು ಸಲ್ಲಿಸಿದ್ದಾರೆ.ಸದಸ್ಯರಾದ ಗೋವಿಂದಪ್ರಭು,ದೇವದಾಸ್ ಶೆಟ್ಟಿ, ಭಾಸ್ಕರ ಟೈಲರ್,ಸುಗುಣಾ ಕಿಣಿ, ಸಂದ್ಯಾ ನಾಕ್ ಅವರು ದೂರಿಗೆ ಸಹಿ ಹಾಕಿದ್ದಾರೆ.

Purasabhe
ಈ ಮೊದಲು ಹಗರಣಗಳಿಗೆ ಸಂಬಂಧಿಸಿ ಜಿಲ್ಲಾಧಿಕಾರಿಯವರಿಗೆ ಸಲ್ಲಿಸಿದ್ದ ದೂರು ಕೂಡಾ ಆಯುಕ್ತರ ಟೇಬಲಿಗೆ ಡಿ.ಸಿಯವರಿಂದ ರವಾನೆಯಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಬಂಟ್ವಾಳ ಪುರಸಭೆಯಲ್ಲಿ ಬೆಳಕಿಗೆ ಬಂದಿರುವ ಈ ಎರಡೂ ಪ್ರಕರಣದ ಬಗ್ಗೆ ಆಯುಕ್ತರು ತೆಗೆದುಕೊಳ್ಳಬಹುದಾದ ಕ್ರಮದ ಕುರಿತಾಗಿ ಬಂಟ್ವಾಳ ಪುರವಾಸಿಗಳಲ್ಲಿ ಕುತೂಹಲ ಮೂಡಿಸಿದೆ.
ಏನಿದು ಹಗರಣ: ಬಂಟ್ವಾಳ ಪುರಸಭೆ ಒಟ್ಟು 23 ಮಂದಿ ಸದಸ್ಯ ಬಲ ಹೊಂದಿದ್ದು ಜೂನ್ 16ರಂದು ನಡೆದ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯರಾದ ಮಹಮ್ಮದ್ ಶರೀಫ್, ರಾಮಕೃಷ್ಣ ಆಳ್ವ , ಹಾಗೂ ವಿಪಕ್ಷ ಸದಸ್ಯ ದೇವದಾಸ್ ಶೆಟ್ಟಿ ಗೈರು ಹಾಜರಾಗಿದ್ದರು. ಮಧ್ಯಾಹ್ನ 2.30ರವರೆಗೆ ಸಭೆ ನಡೆದಿದ್ದು ಅದುವರೆಗೂ ಈ ಮೂವರು ಸದಸ್ಯರೂ ಸಭೆಗೆ ಬಂದಿರಲಿಲ್ಲ. ಆದರೆ ಹಾಜರಾತಿ ಪುಸ್ತಕದಲ್ಲಿ ಬಿ.ದೇವದಾಸ್ ಶೆಟ್ಟಿ, ರಾಮಕೃಷ್ಣ ಆಳ್ವರವರು ಮಾತ್ರ ಗೈರು ಹಾಜರಾಗಿದ್ದರೆ, ಮಹಮ್ಮದ್ ಶರೀಫ್ ಅವರ ಹೆಸರಿನ ಮುಂದೆ ಸಹಿ ಹಾಕುವ ಮೂಲಕ ಹಾಜರಾತಿ ತೋರಿಸಲಾಗಿದೆ. ಸಭೆ ಮುಗಿದ ಬಳಿಕ 3 ಗಂಟೆಗೆ ಖುದ್ದು ಮಹಮ್ಮದ್ ಶರೀಫ್ ಪುರಸಭೆಗೆ ಆಗಮಿಸಿ ಪುರಸಭಾಧ್ಯಕ್ಷೆ ಸಮ್ಮುಖದಲ್ಲೇ ಹಾಜರಿ ಪುಸ್ತಕಕ್ಕೆ ಕಾನೂನು ಬಾಹಿರವಾಗಿ ಸಹಿ ಹಾಕಿ ತೆರಳಿದ್ದಾರೆಂದು ಬಿಜೆಪಿ ಆರೋಪಿಸಿತ್ತು.
ಹಾಗೆಯೇ ಅಂದಿನ ಸಭೆಯಲ್ಲಿ ಸದಸ್ಯರ ಗಮನಕ್ಕೆ ತಾರದೆ 2014-15 ರ ಸಾಲಿನ ಎಸ್.ಎಫ್.ಸಿ ಹಾಗೂ 13ನೇ ಹಣಕಾಸು ಸಹಿತ ವಿವಿಧ ಯೋಜನೆಯಲ್ಲಿ ಸುಮಾರು 4ಕೋಟಿಗೂ ಅಧಿಕ ರೂ.ಗೆ ಕ್ರಿಯಾ ಯೋಜನೆ ತಯಾರಿಸಿ ಅಕ್ರಮವಾಗಿ ನಿರ್ಣಯ ಕೈಗೊಂಡ ಅಂಶ ಪುರಸಭೆಯಲ್ಲಿ ಬಿಜೆಪಿ ಸದಸ್ಯರು ನಿರ್ಣಯದ ಪ್ರತಿಗಾಗಿ ಧರಣಿ ನಡೆಸಿದ ಸಂದರ್ಭದಲ್ಲಿ ಅವರಿಗೆ ನೀಡಲಾದ ಕಂಪ್ಯೂಟರೀಕೃತ ನಿರ್ಣಯದ ಪ್ರತಿಯಲ್ಲಿ ದಾಖಲಾಗಿರುವುದು ಕಂಡು ಬಂದಿತ್ತು.ಈ ಎರಡು ಹಗರಣಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಪುರಸಭೆಯ ವಿಪಕ್ಷ ಸದಸ್ಯರು ಇದೀಗ ಮಂಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ. ಅಲ್ಲದೆ ಲೋಕಾಯುಕ್ತ ಮತ್ತು ನ್ಯಾಯಾಲಯದ ಮೊರೆ ಹೋಗಲು ತಯಾರಿ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *